ADVERTISEMENT

ಅಧಿಕಾರಿಗಳ ಸಮರ್ಪಕ ಕಾರ್ಯದಿಂದ ಪ್ರಗತಿ; ಡಾ. ಉಮೇಶ್ ಜಾಧವ್

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:08 IST
Last Updated 7 ಜುಲೈ 2022, 4:08 IST
ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ನಡೆದ ಸ್ಪಂದನ ಕಲಬುರಗಿ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು
ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ನಡೆದ ಸ್ಪಂದನ ಕಲಬುರಗಿ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು   

ಕಲಬುರಗಿ: ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರಿ ಅಧಿಕಾರಿಗಳು ಕಣ್ಣು-ಕಿವಿ ಇದ್ದ ಹಾಗೆ. ಅವರು ಸರಿಯಾಗಿ
ಕಾರ್ಯ ನಿರ್ವಹಿಸಿದರೆ ಪ್ರಗತಿ ಸಾಧ್ಯವಾಗುತ್ತದೆ ಎಂದು ಸಂಸದ ಡಾ. ಉಮೇಶ್ ಜಾಧವ್ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ನಡೆದ ಸ್ಪಂದನ ಕಲಬುರಗಿ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಅವರು ಮಾತನಾಡಿದರು.

ಈಚೆಗೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲಾಧಿಕಾರಿ ಹೇಗೆ ಕೆಲಸ ಮಾಡಬೇಕು ಎಂಬ ಬಗ್ಗೆ ಇಚ್ಛೆ ವ್ಯಕ್ತಪಡಿಸಿದ್ದರು. ಇದನ್ನು ಜಿಲ್ಲಾಧಿಕಾರಿ ಯಶವಂತ್.ವಿ.ಗುರುಕರ್ ಅವರು ಮೋದಿ ಅವರು ಹೇಳುವ ಮುನ್ನವೇ ಮಾಡಿ ತೋರಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರೂ ಆಗಿರುವ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಮಾತನಾಡಿ, ‘ಯಶವಂತ್ ಗುರುಕರ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಹತ್ತಾರು ವರ್ಷಗಳಷ್ಟು ಕಾಲ ಆಗದೆ ಇದ್ದ ಕೆಲಸಗಳನ್ನು ಕೆಲವು ತಿಂಗಳಲ್ಲಿ ಇತ್ಯರ್ಥಗೊಳಿಸಿದ್ದಾರೆ’ ಎಂದು ಅವರು ಹೇಳಿದರು.

ಪಹಣಿ ತಿದ್ದುಪಡಿ, ಫೌವತಿ ಖಾತೆ ಸಮಸ್ಯೆಗಳನ್ನು ಅತಿ ಕಡಿಮೆ ಅವಧಿಯಲ್ಲಿ ಇತ್ಯರ್ಥಗೊಳಿಸಿದ್ದಾರೆ ಎಂದು ಹೇಳಿದರು.

ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ, ಜಿಲ್ಲಾಧಿಕಾರಿ ಅವರು, ಯಾವುದೇ ಸಮಸ್ಯೆಗಳು ಇದ್ದರೇ ಅದಕ್ಕೆ ತಕ್ಷಣವೇ ಪರಿಹಾರ ನೀಡುತ್ತಾರೆ ಎಂದರು.

ಶಾಸಕ ಎಂ.ವೈ.ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಮಾತನಾಡಿ, ಇಡೀ ರಾಜ್ಯದಲ್ಲಿ ಪ್ರಥಮ ಬಾರಿಗೆ ಸ್ಪಂದನ ಕಲಬುರಗಿ ಕಾರ್ಯಕ್ರಮ ನಡೆಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಮಾತನಾಡಿ, ಕಳೆದ ಬಾರಿ ಸ್ಪಂದನ ಕಲಬುರಗಿ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸ್ವೀಕರಿಸಿದ 260 ಅಹವಾಲುಗಳ ಪೈಕಿ 251 ಇತ್ಯರ್ಥಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಿತ್ತನೆ ಬೀಜದ ಮಿನಿ ಕಿಟ್, ಟಾರ್ಪಲಿನ್, ಪಿಂಚಣಿ, ಪಡಿತರ ಚೀಟಿ, ಅಂತರ್ಜಾತಿ ವಿವಾಹ ಸಹಾಯಧನ, ಬಲೆ ಮತ್ತು ಲೈಫ್ ಸಪೋರ್ಟ್ ಜಾಕೆಟ್, ಪ್ರವಾಸೋದ್ಯಮ ಇಲಾಖೆಯ ₹ 3 ಲಕ್ಷ ಸಬ್ಸಿಡಿಯ ಟ್ಯಾಕ್ಸಿ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ಸೇರಿದಂತೆ ಇತರ ಯೋಜನೆಗಳ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಅಪಘಾತದ ಪರಿಹಾರ ನಿಧಿಯ ₹ 1 ಲಕ್ಷ ಠೇವಣಿ ಬಾಂಡ್‌ ಅನ್ನು ನಾಗಮ್ಮ ಅವರಿಗೆ ವಿತರಿಸಲಾಯಿತು. ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ದೇವಿದಾಸ್ ಪಾಟೀಲ್, ಸಹಾಯಕ ಆಯುಕ್ತ ಮೋನಾ ರೂಟ್, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ್ ತೆಗ್ಗೆಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.