ADVERTISEMENT

ಕಲಬುರಗಿ: ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಕರ ವಸೂಲಿಗೆ ವಿಶೇಷ ಅಭಿಯಾನ

ಮಲ್ಲಿಕಾರ್ಜುನ ನಾಲವಾರ
Published 1 ಫೆಬ್ರುವರಿ 2024, 5:28 IST
Last Updated 1 ಫೆಬ್ರುವರಿ 2024, 5:28 IST
ಭಂವರ್‌ ಸಿಂಗ್‌ ಮೀನಾ
ಭಂವರ್‌ ಸಿಂಗ್‌ ಮೀನಾ   

ಕಲಬುರಗಿ: ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ವ್ಯಾಪಾರ–ವಹಿವಾಟು, ಸೇವೆಗಳು, ಚರ ಮತ್ತು ಸ್ಥಿರ ಆಸ್ತಿಗಳ ಮೇಲೆ ವಿಧಿಸುವ ಶುಲ್ಕ ಹಾಗೂ ಕರವನ್ನು ಸಮರ್ಪಕವಾಗಿ ವಸೂಲಿ ಮಾಡುವಂತೆ ಜಿಲ್ಲಾ ಪಂಚಾಯಿತಿಯು ವಿಶೇಷ ಅಭಿಯಾನ ಆರಂಭಿಸಿದೆ. ಆಯಾ ಗ್ರಾಮ ಪಂಚಾಯಿತಿಗಳ ಪ್ರಸ್ತುತ ಬೇಡಿಕೆಯಲ್ಲಿ ಶೇ 50ರಷ್ಟು ತೆರಿಗೆಯನ್ನು ಸಂಗ್ರಹಿಸುವಂತೆ ಗುರಿ ನಿಗದಿಪಡಿಸಿದೆ.

ಪ್ರತಿ ತಿಂಗಳ ಮೊದಲನೇ ವಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಗತಿ ಪರಿಶೀಲನೆ ಸಭೆ ನಡೆಸುವರು. ಈಚೆಗೆ ನಡದ ಸಭೆಯಲ್ಲಿ ಕಲಬುರಗಿ ಜಿಲ್ಲೆಯು ಕರ ವಸೂಲಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಕಂಡುಬಂತು. ಹೀಗಾಗಿ, ಕರ ವಸೂಲಿಯಲ್ಲಿ ಪ್ರಗತಿ ಸಾಧಿಸಲು ಈ ಅಭಿಯಾನ ನಡೆಯುತ್ತಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಡ, ಮನೆ, ಖಾಲಿ ನಿವೇಶನಗಳ ಮೇಲಿನ ತೆರಿಗೆ, ಪಂಚಾಯಿತಿ ಒದಗಿಸುವ ಸೌಲಭ್ಯಕ್ಕೆ ಬಳಕೆದಾರರಿಂದ ಪಡೆಯುವ ವೆಚ್ಚ, ಪಂಚಾಯಿತಿಯ ಸ್ವಂತ ಆಸ್ತಿಗಳಿಂದ ಬರುವ ವಾರ್ಷಿಕ ಉತ್ಪನ್ನ ಮತ್ತು ಆದಾಯ ಹಾಗೂ ಪಂಚಾಯತ್‌ ರಾಜ್ ಕಾಯ್ದೆ ನೀಡಿರುವ ಅಧಿಕಾರದಿಂದ ಬರುವ ಆದಾಯವನ್ನು ಬಿಲ್‌ ಕಲೆಕ್ಟರ್‌ಗಳು ಸಮರ್ಪಕವಾಗಿ ಜಮಾಯಿಸಬೇಕು.

ADVERTISEMENT

ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಕಲ್ಪಿಸಿಕೊಳ್ಳಲು ಸರ್ಕಾರದ ಅನುದಾನಕ್ಕಾಗಿ ಕಾಯದೆ ಸಂಪನ್ಮೂಲ ಕ್ರೋಢೀಕರಣಕ್ಕೆ ತಾವೇ ಮುಂದಾಗಬೇಕು. ಜಾಹೀರಾತು, ಮನೋರಂಜನೆ ಮೇಲಿನ ತೆರಿಗೆ, ನೀರಿನ ಬಳಕೆಯ ದರ, ಪರವಾನಗಿ ಶುಲ್ಕ, ವ್ಯಾಪಾರ, ಆರೋಗ್ಯ ಹಾಗೂ ಗ್ರಂಥಾಲಯ ಕರ ಸಂಗ್ರಹದಲ್ಲಿ ಹಿಂದೆ ಬೀಳಬಾರದು ಎಂದು ಪಿಡಿಒಗಳಿಗೆ ಸೂಚಿಸಲಾಗಿದೆ.

‘ಜಿಲ್ಲೆಯಲ್ಲಿ 260 ಗ್ರಾಮ ಪಂಚಾಯಿತಿಗಳಿವೆ. ನಗರ ಪ್ರದೇಶಕ್ಕೆ ಹೊಂದಿಕೊಂಡ ಗ್ರಾಮ ಪಂಚಾಯಿತಿಗಳಿಂದ ಹೆಚ್ಚಿನ ತೆರಿಗೆ ಹರಿದುಬರುತ್ತದೆ. ಹೀಗಾಗಿ, 100 ಗ್ರಾ.ಪಂ.ಗಳ ಮೇಲೆ ಹೆಚ್ಚಿನ ನಿಗಾ ಇರಿಸಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ತಮ್ಮ ಸುರ್ಪದಿಯಲ್ಲಿನ ಮೂಲಗಳಿಂದ ಗರಿಷ್ಠ ಮಟ್ಟದಲ್ಲಿ ತೆರಿಗೆ ಸಂಗ್ರಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

ಉತ್ತೇಜನೆ: ‘ನಿಯಮಿತವಾಗಿ ಬಿಲ್‌ ಕಲೆಕ್ಟರ್‌ಗಳ ಸಭೆಗಳನ್ನು ನಡೆಸಿ ಗರಿಷ್ಠ ಮಟ್ಟದಲ್ಲಿ ಕರ ವಸೂಲಿ ಮಾಡುವಂತೆ ಸೂಚಿಸಲಾಗಿದೆ. ಕೆಲವರು ರಜಾ ದಿನಗಳಲ್ಲಿ ಸಹ ಕರ ವಸೂಲಿ ಮಾಡುತ್ತಿದ್ದಾರೆ. ತೆರಿಗೆ ಬಾಕಿ ಉಳಿಸಿಕೊಂಡವರ ಮನೆಗಳ ಕದ ತಟ್ಟುತ್ತಿದ್ದು, ಎರಡ್ಮೂರು ವರ್ಷಗಳಿಂದ ಬಿಲ್‌ ಕಟ್ಟಿ ಈ ವರ್ಷ ಕಟ್ಟದವರನ್ನು ಸಂಪರ್ಕಿಸುತ್ತಿದ್ದಾರೆ. ಉತ್ತಮವಾಗಿ ಕರ ವಸೂಲಿ ಮಾಡಿದವರಿಗೆ ಉತ್ತೇಜನ ಕೊಡಲಾಗುತ್ತಿದೆ’ ಎನ್ನುತ್ತಾರೆ ಪ್ರೊಬೆಷನರಿ ಐಎಎಸ್ ಅಧಿಕಾರಿ ಗಜಾನನ್ ಬಾಳೆ.

ಸುಸ್ಥಿರ ಅಭಿವೃದ್ಧಿ: ‌‘ಬಿಲ್‌ ಕಲೆಕ್ಟರ್‌ಗಳು ಮನೆ–ಮನೆಗೆ ತೆರಳಿ ಕರ ವಸೂಲಿ ಮಾಡುತ್ತಿರುವುದರಿಂದ ನಿತ್ಯ ₹ 5,000 ಇದ್ದ ಸಂಗ್ರಹ ಮೊತ್ತ ಈಗ ₹ 10,000ಕ್ಕೆ ತಲುಪಿದೆ. ಕಳೆದ 10 ದಿನಗಳಲ್ಲಿ ಸುಮಾರು ₹ 1 ಲಕ್ಷ ಕರ ಪಂಚಾಯಿತಿಗೆ ಹರಿದುಬಂದಿದೆ. ತೆರಿಗೆದಾರರ ಹಣವನ್ನು ಕುಡಿಯುವ ನೀರು, ಸಿಬ್ಬಂದಿಯ ವೇತನ, ಪಂಚಾಯಿತಿಯ ಸಾಮಗ್ರಿಗಳ ಖರೀದಿಗೆ ಬಳಸಬಹುದು. ಕರ ಸಂಗ್ರಹ ಹೆಚ್ಚಳವಾದರೆ ಸುಸ್ಥಿರ ಅಭಿವೃದ್ಧಿಯೂ ಸಾಧಿಸಬಹುದು. ಜತೆಗೆ ತೆರಿಗೆ ಕಟ್ಟಿದವರು ಪಂಚಾಯಿತಿಗೆ ಬಂದು ಆಗಬೇಕಾಗಿರುವ ಕೆಲಸಗಳ ಬಗ್ಗೆ ಹಕ್ಕಿನಿಂದ ಕೇಳಬಹುದು’ ಎನ್ನುತ್ತಾರೆ ಕರಜಗಿ ಪಿಡಿಒ ಚಂದ್ರಶೇಖರ ಕಂಬಾರ.

ಕರ ವಸೂಲಿಗೆ ಪಿಒಸಿ ಮಷಿನ್ ಬಳಸದಿದ್ದರೆ ನೋಟಿಸ್: ಸಿಇಒ
‘ಕರ ವಸೂಲಿಗಾಗಿ ಎಲ್ಲ ಗ್ರಾಮ ಪಂಚಾಯಿತಿಗಳ ಬಿಲ್‌ ಕಲೆಕ್ಟರ್‌ಗಳಿಗೆ ಪಾಯಿಂಟ್ ಆಫ್‌ ಕೇರ್ (ಪಿಒಸಿ) ಮಷಿನ್‌ಗಳನ್ನು ನೀಡಲಾಗಿದೆ. ಪಿಒಸಿ ಬಳಸದವರಿಗೆ ನೋಟಿಸ್ ಕೊಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘10–15 ಬಿಲ್‌ ಕಲೆಕ್ಟರ್‌ಗಳು ಪಿಒಸಿ ಸರಿಯಿಲ್ಲ ಎಂದು ರಸೀದಿ ನೀಡಿದ್ದರು. ಅವರಿಗೆ ಈಗಾಗಲೇ ನೋಟಿಸ್ ಕೊಡಲಾಗಿದೆ. ಕೆಲವು ಬಿಲ್‌ ಕಲೆಕ್ಟರ್‌ಗಳು ಕರ ಕಟ್ಟಿಸಿಕೊಂಡು ರಸೀದಿಯೂ ನೀಡಿ ಪಂಚಾಯಿತಿ ಖಾತೆಗೆ ಜಮೆ ಮಾಡುತ್ತಿಲ್ಲ. ಇದನ್ನು ನಿಯಂತ್ರಿಸಲು ಬೇರೆ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಪಂಚತಂತ್ರ 2.0 (Panchatantra 2.0) ಸಿಸ್ಟಮ್ ಬರಲಿದ್ದು ಸಾರ್ವಜನಿಕರು ಎಲ್ಲಿಂದಾದರೂ ತೆರಿಗೆ ಕಟ್ಟಬಹುದು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.