ADVERTISEMENT

ಕಲಬುರಗಿ: ಸಂವಿಧಾನ, ಕೋಮುವಾದ; 26ರಂದು ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 12:35 IST
Last Updated 22 ನವೆಂಬರ್ 2021, 12:35 IST
ಅರ್ಜುನ ಭದ್ರೆ
ಅರ್ಜುನ ಭದ್ರೆ   

ಕಲಬುರಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ( ಕ್ರಾಂತಿಕಾರಿ) ಜಿಲ್ಲಾ ಸಮಿತಿಯಿಂದ ಇದೇ 26ರಂದು ಮಧ್ಯಾಹ್ನ 12.30ಕ್ಕೆ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ–ಕೋಮುವಾದ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಆಳುವ ಸರ್ಕಾರಗಳು ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುತ್ತಲಿವೆ. ನಮ್ಮ ದೇಶದಲ್ಲಿ ಎರಡು ವಿಧದ ರಾಷ್ಟ್ರೀಯತೆಯ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ಒಂದು ಸ್ವಾತಂತ್ರ್ಯ ಸಂಗ್ರಾಮದಿಂದ ಬಂದಿರುವಂಥದು. ಅದು ಎಲ್ಲರನ್ನೊಳಗೊಳ್ಳುವ ಅನೇಕತೆಯಲ್ಲಿ ಏಕತೆಯನ್ನು ಗಮನಿಸುವ ಒಗ್ಗಟ್ಟಾದ ಪ್ರಜಾಪ್ರಭುತ್ವದ ರಾಷ್ಟ್ರೀಯತೆ. ಇನ್ನೊಂದು ಅದಕ್ಕೆ ಪರ್ಯಾಯವಾಗಿ, ಸವಾಲಾಗಿ ಆರ್‌ಎಸ್‌ಎಸ್‌ ಮಂಡಿಸಿದ ಹಿಂದುಗಳಿಗೆ ಮಾತ್ರ ಪ್ರಾಮುಖ್ಯ ನೀಡುವ ಭಿನ್ನತೆಯನ್ನು ತ್ಯಜಿಸಿ ಏಕತೆಯನ್ನು ಒಪ್ಪಿಕೊಳ್ಳುವ ಹಿಂದೂ ರಾಷ್ಟ್ರೀಯತೆ. ಈ ಎರಡು ವಾದಗಳು ಜನರ ಮನಸ್ಸಿನ ಮೇಲೆ ಹಿಡಿತ ಸಾಧಿಸಲು ಸ್ಪರ್ಧಿಸುತ್ತಿವೆ’ ಎಂದರು.

ಅಂದು ನಡೆಯುವ ವಿಚಾರ ಸಂಕಿರಣದ ಸಾನ್ನಿಧ್ಯವನ್ನು ಉಸ್ತುರಿ–ಧುತ್ತರಗಾಂವ ಮಠದ ಕೋರಣೇಶ್ವರ ಸ್ವಾಮೀಜಿ ವಹಿಸುವರು. ಪ್ರಗತಿಪರ ಚಿಂತಕ, ಹೊಸತು ಪತ್ರಿಕೆ ಸಂಪಾದಕ ಡಾ. ಸಿದ್ದನಗೌಡ ಪಾಟೀಲ ಉದ್ಘಾಟಿಸಿ ಮುಖ್ಯ ಭಾಷಣ ಮಾಡುವರು. ಕರ್ನಾದಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಅಧ್ಯಕ್ಷತೆ ವಹಿಸುವರು. ಅಲ್ಪಸಂಖ್ಯಾತರ ನಾಯಕ ವಹಾಜ ಬಾಬಾ, ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಸಹಾಯಕ ಪ್ರಾಧ್ಯಾಪಕಿ ಡಾ.ಸೇವಂತಾ ಗಾಯಕವಾಡ, ವಾಲ್ಮೀಕಿ ಸಮಾಜದ ಮುಖಂಡ ಹಣಮೇಗೌಡ ಬಿರನಕಲ್, ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ ಮುಖ್ಯ ಅಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ADVERTISEMENT

ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಕಲಬುರಗಿ, ಯಾದಗಿರಿಯಿಂದ ಸುಮಾರು 1500 ಜನ ಪಾಲ್ಗೊಳ್ಳಲಿದ್ದಾರೆ ಎಂದರು.

ಸಂಗೀತಗಾರ ಹಂಸಲೇಖ ಅವರು ನೀಡಿದ ಹೇಳಿಕೆಗೆ ನಮ್ಮ ಬೆಂಬಲವಿದೆ. ಅವರು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಸಮಾಜದಲ್ಲಿ ಅಶಾಂತಿ ಕದಡುವ ಹೇಳಿಕೆ ನೀಡುತ್ತಿರುವ ಕಂಗನಾ ರನೌತ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪುರ, ಶಿವಕುಮಾರ್ ಕೋರಳ್ಳಿ, ಕಪೀಲ ಸಿಂಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.