ADVERTISEMENT

ಗ್ರಾಮ ಪಂಚಾಯಿತಿ ಆಡಳಿತಕ್ಕೆ ವೇಗ ನೀಡಲಿದೆ ಇಸ್ರೊ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 13:20 IST
Last Updated 17 ಡಿಸೆಂಬರ್ 2018, 13:20 IST
ಎ.ಎಸ್‌.ಕಿರಣಕುಮಾರ
ಎ.ಎಸ್‌.ಕಿರಣಕುಮಾರ   

ಕಲಬುರ್ಗಿ: ‘ದೇಶದ ಎಲ್ಲ ಗ್ರಾಮ ಪಂಚಾಯಿತಿಗಳ ಆಡಳಿತಕ್ಕೆ ವೇಗ ನೀಡಲು ಇಸ್ರೊ ನಡೆಸಿದ ಪ್ರಯೋಗ ಫಲಪ್ರದವಾಗಿದ್ದು, ಕೆಲವೇ ದಿನಗಳಲ್ಲಿ ಸಾಕಾರಗೊಳ್ಳಲಿದೆ’ ಎಂದು ಇಸ್ರೊ ನಿಕಟಪೂರ್ವ ಅಧ್ಯಕ್ಷ ಎ.ಎಸ್‌.ಕಿರಣಕುಮಾರ ತಿಳಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ನಗರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ 26ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಸೋಮವಾರ, ಯುವ ವಿಜ್ಞಾನಿಗಳಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

‘ಫ್ರೆಂಚ್‌ ಗಯಾನಾದಿಂದ ಈಚೆಗೆ ಉಡಾವಣೆ ಮಾಡಿದ ‘ಜಿ ಸ್ಯಾಟ್‌–2’ ಉಪಗ್ರಹ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ. ಗ್ರಾಮ ಪಂಚಾಯಿತಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಪ್ರಯೋಗ ಮಾಡಲಾಗಿದೆ. ಇಂಟರ್‌ನೆಟ್‌ ಇನ್ನಷ್ಟು ವೇಗ ಪಡೆಯಲಿದ್ದು, ‘ಗ್ಯಾಡ್ಜೆಟ್‌’ ವ್ಯವಸ್ಥೆ ಸುಧಾರಿಸಲಿದೆ. ಇ–ಆಡಳಿತಕ್ಕೂ ವೇಗ ದೊರೆಯಲಿದೆ’ ಎಂದರು.

ADVERTISEMENT

‘ಬಾಹ್ಯಾಕಾಶ ಸಂಶೋಧನೆಯಲ್ಲಿ ಇಸ್ರೊ ಅತ್ಯಂತ ವೇಗವಾಗಿ ಸಾಗಿದೆ. ಸದ್ಯಕ್ಕೆ ನಾವು ಅಮೆರಿಕವನ್ನು ಜಗತ್ತಿನ ದೊಡ್ಡಣ್ಣ ಎಂದು ಪರಿಗಣಿಸುತ್ತಿದ್ದೇವೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತವೇ ಆ ಸ್ಥಾನ ಪಡೆಯಲಿದೆ’ ಎಂದರು.

‘ಭೂಮಿ ಮೇಲೆ ಈಗ 750 ಕೋಟಿ ಜನಸಂಖ್ಯೆ ಇದೆ. ಇಷ್ಟು ದೊಡ್ಡ ಪ್ರಮಾಣದ ಮನುಷ್ಯರು ಹಾಗೂ ಸಕಲ ಜೀವರಾಶಿಗಳ ಅವಶ್ಯಕತೆ ಪೂರೈಸುವ ಶಕ್ತಿ ಈ ಪುಟ್ಟ ಭೂಮಿಗೆ ಇಲ್ಲ. ಹಾಗಾಗಿ, ಅನ್ಯ ಗ್ರಹಗಳಲ್ಲಿ ಸಂಪನ್ಮೂಲಗಳ ಸಂಶೊಧನೆ ತುರ್ತು ಅಗತ್ಯ. ಈ ದಿಸೆಯಲ್ಲಿ ಇಸ್ರೊ ಕೈಗೊಳ್ಳುತ್ತಿರುವ ಬಾಹ್ಯಾಕಾಶ ಯಾನಗಳು ಮಹತ್ವ ಪಡೆದಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.