
ಕಲಬುರಗಿ: ಎಸ್ಟಿ ಪ್ರಮಾಣ ಪತ್ರ ವಿತರಣೆಗೆ ಕ್ರಮವಹಿಸುವಂತೆ ಆಗ್ರಹಿಸಿ ಜಿಲ್ಲೆಯ ಜನಪ್ರತಿನಿಧಿಗಳ ಮನೆ ಎದುರು ಧರಣಿ ಸತ್ಯಾಗ್ರಹ ಅಭಿಯಾನವನ್ನು ಕರ್ನಾಟಕ ರಾಜ್ಯ ತಳವಾರ ಎಸ್ಟಿ ಹೋರಾಟ ಸಮಿತಿ ಮುಂದುವರಿಸಿದೆ.
ಬುಧವಾರ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಮನೆ ಎದುರು ಧರಣಿ ನಡೆಸಿದ ಮುಖಂಡರು, ಎಸ್ಟಿ ಪ್ರಮಾಣ ಪತ್ರ ವಿತರಣೆಗೆ ಕ್ರಮವಹಿಸುವಂತೆ ಆಗ್ರಹಿಸಿದರು.
ಧರಣಿ ನಿರತರ ಮನವಿ ಆಲಿಸಿ ಮಾತನಾಡಿದ ಶಾಸಕ ಬಸವರಾಜ ಮತ್ತಿಮಡು, ‘ಕಲಬುರಗಿ–ಯಾದಗಿರಿಯಲ್ಲಿ ಮಾತ್ರವೇ ತಳವಾರರಿಗೆ ಎಸ್ಟಿ ಪ್ರಮಾಣ ಪತ್ರ ಸಿಗದೇ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದ ಜೊತೆಗೆ ಉದ್ದೇಶಪೂರ್ವಕವಾಗಿ ಈ ಸಮಾಜವನ್ನು ತುಳಿಯಲು ಸ್ಥಳೀಯ ಕಾಂಗ್ರೆಸ್ ನಾಯಕರು ತಮ್ಮ ಸಣ್ಣತನ ತೋರುತ್ತಿದ್ದಾರೆ’ ಎಂದು ಟೀಕಿಸಿದರು.
‘ಈ ಭಾಗದಲ್ಲಿ ತಳವಾರರಿಗೆ ಎಸ್ಟಿ ಪ್ರಮಾಣ ಪತ್ರ ವಿತರಿಸಲು ಸತಾಯಿಸುತ್ತಿರುವ ಅಧಿಕಾರಿಗಳ ವಿರುದ್ದ ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಈ ಕುರಿತು ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವೆ. ಅಗತ್ಯ ಬಿದ್ದರೆ, ಈ ಹೋರಾಟಕ್ಕಾಗಿ ರಾಜ್ಯಾಧ್ಯಕ್ಷ ಸೇರಿ ಪಕ್ಷದ ನಾಯಕರನ್ನು ಕಲಬುರಗಿಗೆ ಕರೆತರುವೆ’ ಎಂದರು.
ಧರಣಿಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಸರ್ದಾರ್ ರಾಯಪ್ಪ, ಮುಖಂಡರಾದ ರೇವಣ್ಣಸಿದ್ಧ ಕಮನಮನಿ, ಲಚ್ಚಪ್ಪ ಜಮಾದಾರ, ಶರಣಪ್ಪ ತಳವಾರ, ವಿದ್ಯಾಧರ ಮಂಗಳೂರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.