ADVERTISEMENT

ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್‌ಗಳಿಗೆ ಒಂದೇ ಸಾಫ್ಟ್‌ವೇರ್: ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 7:25 IST
Last Updated 26 ಜೂನ್ 2020, 7:25 IST
ಆಶಾ ಕಾರ್ಯಕರ್ತೆಯರಿಗೆ ಸಹಕಾರ ಇಲಾಖೆ ವತಿಯಿಂದ ಚೆಕ್ ವಿತರಣಾ ಕಾರ್ಯಕ್ರಮಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.
ಆಶಾ ಕಾರ್ಯಕರ್ತೆಯರಿಗೆ ಸಹಕಾರ ಇಲಾಖೆ ವತಿಯಿಂದ ಚೆಕ್ ವಿತರಣಾ ಕಾರ್ಯಕ್ರಮಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.    

ಕಲಬುರ್ಗಿ: ಸಹಕಾರಿ ಬ್ಯಾಂಕುಗಳಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದ 21 ಡಿಸಿಸಿ ಬ್ಯಾಂಕುಗಳು ಹಾಗೂ 5400 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಒಂದೇ ಸಾಫ್ಟ್ವೇರ್ ರೂಪಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಶಾ ಕಾರ್ಯಕರ್ತೆಯರಿಗೆ ಇಲಾಖೆಯಿಂದ ತಲಾ ₹ 3 ಸಾವಿರ ಚೆಕ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅರ್ಬನ್ ಬ್ಯಾಂಕುಗಳಲ್ಲಿ ಸಾಕಷ್ಟು ಅವ್ಯವಹಾರ ಆಗಿದ್ದನ್ನು ಗಮನಿಸಿದ ಕೇಂದ್ರ ಸರ್ಕಾರ ಅವುಗಳನ್ನು ರಿಸರ್ವ್ ‌ಬ್ಯಾಂಕ್‌ನ ಮೇಲ್ವಿಚಾರಣೆಗೆ ಒಪ್ಪಿಸಿದೆ. ಅದೇ ಮಾದರಿಯಲ್ಲಿ ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ ಗಳ ಮೇಲೆ ನಿಗಾ ಇಡಲು ಸಾಫ್ಟ್ ವೇರ್ ರೂಪಿಸಲಾಗುವುದು ಎಂದರು.

ADVERTISEMENT

₹14500 ಕೋಟಿ ಸಾಲ: ನಬಾರ್ಡ್ನಿಂದ ಈ ಬಾರಿ ರೈತರಿಗೆ ವಿತರಿಸಲು ₹ 14500 ಕೋಟಿ ಸಾಲವನ್ನು ‌ನೀಡುವಂತೆ ಗುರಿ ನಿಗದಿಪಡಿಸಲಾಗಿದೆ. ಕಳೆದ ಬಾರಿ ₹ 13 ಸಾವಿರ ಕೋಟಿ ಇತ್ತು ಎಂದರು.

ಡಿಸಿಸಿ ಬ್ಯಾಂಕ್ ನಿಂದ ಸಾಲ: ಕಲಬುರ್ಗಿ-ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ನಷ್ಟದಲ್ಲಿದ್ದು, ಅದರ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಡಿಸಿಸಿ ಬ್ಯಾಂಕ್ ಸದ್ಯಕ್ಕೆ ಸೂಪರ್ ‌ಸೀಡ್ ಮಾಡಲಾಗಿದ್ದು, ನಬಾರ್ಡ್ ನಿಂದ ಅನುಮತಿ ಬಂದ ಬಳಿಕ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ರೈತರಿಗೆ ಸಾಲ ವಿತರಣೆ ಆರಂಭಿಸಲಾಗುವುದು ಎಂದರು.

ಶಾಸಕ ಡಾ. ಅವಿನಾಶ್ ಜಾಧವ, ಅಂಬಿಗರ ಚೌಡಯ್ಯ ಅಭಿವೃದ್ಧಿ ‌ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ‌ಗ್ರಾಮೀಣ‌ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಸಹಕಾರ ಸಂಘಗಳ ರಾಯಚೂರು ವಲಯದ ನಿಬಂಧಕ ಗೋಪಾಲ ‌ಚವ್ಹಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.