ವಾಡಿ: ರಾವೂರು ಕ್ರಾಸ್ ಮತ್ತು ಚಿತ್ತಾಪುರ ನಡುವಣ ರಸ್ತೆ ಇಕ್ಕಟ್ಟಾಗಿದ್ದು ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಕಿರಿದಾದ ರಸ್ತೆ ಇದಾಗಿದ್ದು ಎದುರು ಬರುವ ವಾಹನಗಳಿಗೆ ರಸ್ತೆ ಬಿಟ್ಟುಕೊಡಲು ರಸ್ತೆಯಿಂದ ಕೆಳಕ್ಕೆ ಇಳಿಯಬೇಕಾದ ಸ್ಥಿತಿ ಇಲ್ಲಿದೆ.
ತಾಲ್ಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 173 ರಸ್ತೆ ಇದಾಗಿದ್ದು ಇಕ್ಕಟ್ಟು ರಸ್ತೆಯೇ ಸಂಕಷ್ಟಕ್ಕೆ ಕಾರಣವಾಗಿದೆ. ನಿತ್ಯ ಸಾವಿರಾರು ವಾಹನಗಳು ಇಲ್ಲಿ ಓಡಾಡುತ್ತವೆ. ಈಚೆಗೆ ಇಲ್ಲಿ ವಾಹನಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು ರಸ್ತೆ ಮಾತ್ರ ವಿಸ್ತರಣಗೊಳ್ಳದೇ ಸಮಸ್ಯೆಗೆ ಕಾರಣವಾಗಿದೆ.
ಸಿಮೆಂಟ್ ಕಾರ್ಖಾನೆಗೆ ಕಚ್ಚಾ ವಸ್ತು ಪೂರೈಸುವ ಮತ್ತು ಸಿಮೆಂಟ್ ಸಾಗಿಸುವ ಬೃಹತ್ ಗಾತ್ರದ ಲಾರಿಗಳು ಇಲ್ಲಿ ಓಡಾಡುತ್ತವೆ. ಪರಸ್ಪರ ಎದುರಾಗುವ ವಾಹನಗಳು ಕೆಲವೊಮ್ಮೆ ಕೂದಲೆಳೆ ಅಂತರದಲ್ಲಿ ಪಾರಾಗುತ್ತವೆ. ವಾಹನಗಳು ಎದುರು ಬಂದರೆ ರಸ್ತೆಯಿಂದ ಕೆಳಕ್ಕೆ ಇಳಿಯಬೇಕು. ಓವರ್ ಟೇಕ್ ಮಾಡಲು ಸಾಧ್ಯವೇ ಇಲ್ಲದಷ್ಟು ರಸ್ತೆ ಚಿಕ್ಕದಾಗಿದೆ. ಜತೆಗೆ ರಸ್ತೆ ಪಕ್ಕ ಮುರುಮ್ ತುಂಬಿ ಸಮತಟ್ಟು ಮಾಡದೇ ನಿರ್ಲಕ್ಷ್ಯ ವಹಿಸಲಾಗಿದೆ.
‘5.5 ಮೀಟರ್ ರಸ್ತೆ ಇದಾಗಿದ್ದು ಇದನ್ನು 9 ಮೀಟರ್ ಅಗಲ ವಿಸ್ತೀರ್ಣಗೊಳಿಸಿದರೆ ಸುಗಮ ಸಂಚಾರ ಸಾಧ್ಯವಾಗಲಿದೆ’ ಎಂದು ಸಾರ್ವಜನಿಕರು ಹೇಳುತ್ತಾರೆ.
ರಸ್ತೆ ತುಂಬಾ ತಗ್ಗುಗಳು ಬಿದ್ದಿದ್ದು 2 ವರ್ಷಗಳ ಅಂತರದಲ್ಲಿ 3 ಬಾರಿ ದುರಸ್ತಿ ಕಂಡಿದ್ದರೂ ವಾಹನಗಳ ಓಡಾಟದಿಂದ ತಗ್ಗುಗಳಿಗೆ ಮುಕ್ತಿ ದೊರಕಿಲ್ಲ. ಈಚೆಗೆ ಸುರಿದ ಮಳೆಯಿಂದ ಮತ್ತಷ್ಟು ರಸ್ತೆ ಹದಗೆಟ್ಟಿದ್ದು ಚಿತ್ತಾಪುರ ತಲುಪುವರೆಗೂ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಸ್ಥಿತಿ ಇಲ್ಲಿದೆ. ಸ್ವಲ್ಪ ಯಾಮಾರಿದರೂ ಅಪಘಾತ ನಿಶ್ಚಿತ ಎನ್ನುವಂತಿದೆ.
ಕೂಡಲೇ ರಸ್ತೆ ವಿಸ್ತರಣೆ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಕಾರ್ಖಾನೆಗಳಿಂದ ರಾವೂರು ಚಿತ್ತಾಪುರವರೆಗೆ ರಸ್ತೆ ಮೇಲೆ ವಾಹನಗಳ ಓಡಾಟ ಇತ್ತೀಚಿಗೆ ಜಾಸ್ತಿಯಾಗಿದ್ದು ಅದಕ್ಕೆ ತಕ್ಕಂತೆ ರಸ್ತೆ ವಿಸ್ತರಣೆ ಆಗಬೇಕಿದೆ. ರಸ್ತೆ ವಿಸ್ತರಣೆ ಅನುದಾನಕ್ಕೆ ಸಚಿವರಿಗೆ ಮನವಿ ಮಾಡಲಾಗುವುದುಮಹ್ಮದ್ ಸಲೀಂ ಎಇಇ ಪಿಡಬ್ಲ್ಯೂಡಿ ಚಿತ್ತಾಪುರ
ರಾವೂರಿನಿಂದ ಚಿತ್ತಾಪುರಕ್ಕೆ ಹೋಗಿಬರುವ ಖಾತ್ರಿಯಿಲ್ಲ. ರಸ್ತೆ ಚಿಕ್ಕದಾಗಿದ್ದು ರಾತ್ರಿ ವೇಳೆ ಹಲವು ಅಪಘಾತಗಳು ಇಲ್ಲಿ ಸಂಭವಿಸಿವೆ. ರಸ್ತೆ ಮೇಲ್ದರ್ಜೆಗೇರಿಸಬೇಕುರಾಘವೇಂದ್ರ ಹೂಗಾರ ರಾವೂರು ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.