ADVERTISEMENT

ಸ್ವಾತಂತ್ರ್ಯ ಹೋರಾಟಗಾರರ ವ್ಯಕ್ತಿತ್ವ ಅರಿಯಿರಿ; ಮಹಾಬಲೇಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 6:03 IST
Last Updated 29 ಸೆಪ್ಟೆಂಬರ್ 2022, 6:03 IST
ಕಲಬುರಗಿ ನಗರದ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ) ಕಾಲೇಜಿನಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ವಿಚಾರಣ ಸಂಕಿರಣದಲ್ಲಿ ಪ್ರೊ. ಬಿ.ಸಿ. ಮಹಾಬಲೇಶ್ವರಪ್ಪ ಮಾತನಾಡಿದರು
ಕಲಬುರಗಿ ನಗರದ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ) ಕಾಲೇಜಿನಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ವಿಚಾರಣ ಸಂಕಿರಣದಲ್ಲಿ ಪ್ರೊ. ಬಿ.ಸಿ. ಮಹಾಬಲೇಶ್ವರಪ್ಪ ಮಾತನಾಡಿದರು   

ಕಲಬುರಗಿ: ‘ಸ್ವಾತಂತ್ರ್ಯ ಹೋರಾಟದ ಚಳವಳಿಯಲ್ಲಿ ಅಂದಿನ ನಾಯಕರ ವ್ಯಕ್ತಿತ್ವವು ಜನಸಾಮಾನ್ಯರ ಮೇಲೆ ಬೀರಿದ್ದ ಪ್ರಭಾವ ಮತ್ತು ಗೋರ್ಟಾದಂತಹ ಸಣ್ಣ ಗ್ರಾಮದ ಹತ್ಯಾಕಾಂಡ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದದ್ದು ಹೇಗೆ ಎಂಬುದರ ಬಗ್ಗೆ ಅಧ್ಯಯನ ಮತ್ತು ಪ್ರಬಂಧಗಳ ಮಂಡನೆಯಾಗಬೇಕಿದೆ’ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಇತಿಹಾಸ ರಚನಾ ಸಮಿತಿ ಸದಸ್ಯ ಪ್ರೊ.ಬಿ.ಸಿ. ಮಹಾಬಲೇಶ್ವರಪ್ಪ ಹೇಳಿದರು.

ನಗರದ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ) ಕಾಲೇಜಿನಲ್ಲಿ ಬುಧವಾರ ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ರಾಜ್ಯ ಪತ್ರಾಗಾರ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಕಲಬುರಗಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಳು ಮತ್ತು ಸಮಕಾಲಿನ ಅಭಿವೃದ್ಧಿ’ ವಿಷಯದ ಕುರಿತ ರಾಜ್ಯಮಟ್ಟದ ವಿಚಾರಣ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಸಣ್ಣ–ಪುಟ್ಟ ಹಳ್ಳಿಗಳಲ್ಲಿ ನಡೆದ ದಂಗೆಗಳು ರಾಷ್ಟ್ರ ಮಟ್ಟದಲ್ಲಿ ಬೀರಿದ ಪರಿಣಾಮ, ರಾಷ್ಟ್ರ ಮಟ್ಟದಲ್ಲಿನ ಸ್ವಾತಂತ್ರ್ಯದ ವಿಚಾರಗಳು ಹಳ್ಳಿಯ ಅನಕ್ಷರಸ್ಥರ ಮೇಲೆ ಹೇಗೆ ಪ್ರಭಾವಿಸಿದ್ದವು ಎಂಬುದರ ಬಗ್ಗೆ ನಾವು ಅಧ್ಯಯನ ಮಾಡಬೇಕಿದೆ’ ಎಂದರು.

ADVERTISEMENT

‘ಮಹಾತ್ಮಾ ಗಾಂಧೀಜಿಯವರು ರಾಜಕೀಯ ಗುರು ಗೋ‍ಪಾಲಕೃಷ್ಣ ಗೋಖಲೆ ಅವರ ಸಿದ್ಧಾಂತಗಳನ್ನು ಪಾಲಿಸಿ, ಸ್ವಲ್ಪವೇ ಬದಲಾವಣೆ ಮಾಡಿಕೊಂಡಿದ್ದರು. ಬಾಲ್ಯದಲ್ಲಿ ಧರಿಸುತ್ತಿದ್ದ ಪಾಶ್ಚ್ಯಾತ್ಯ ಬಟ್ಟೆಗಳನ್ನು ತ್ಯಜಿಸಿ, ಬಡವರು ತೊಡುವ ಹತ್ತಿ ಬಟ್ಟೆಯ ಮೊರೆ ಹೋದುದರಿಂದ ಅವರನ್ನು ಜನರು ನಾಯಕನೆಂದು ಒಪ್ಪಿಕೊಂಡರು. ಉಪ್ಪಿನ ಸತ್ಯಾಗ್ರಹ, ಚಂಪಾರಣ್ಯ, ಅಸಹಕಾರದಂತಹ ಜನರ ನಿತ್ಯ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಚಳವಳಿ ನಡೆಸಿದ್ದರು. ಇದರಿಂದಾಗಿಯೇ ಅವರ ಹೋರಾಟಕ್ಕೆ ಅಭೂತಪೂರ್ವ ಜನ ಬೆಂಬಲ ದೊರೆಯಿತು’ ಎಂದು ತಿಳಿಸಿದರು.

‘ಎಡಪಂಥ- ಬಲಪಂಥಗಳ ಚಿಂತನೆ, ಬರಹಗಳಿಂದಾಗಿ ಅರ್ಧ ಸತ್ಯದ ಇತಿಹಾಸ ರಚನೆಯಾಗುತ್ತಿದೆ. ನಾವು ಯಾವುದೇ ಸಿದ್ಧಾಂತಕ್ಕೆ ಅಂಟಿಕೊಂಡಿದ್ದರೂ ಅದರಲ್ಲಿನ ನೈಜತೆ, ಸತ್ಯಾಂಶದ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ಹಿಂದೂ ರಾಷ್ಟ್ರ, ಮುಸ್ಲಿಂ ರಾಷ್ಟ್ರದ ವಾದಗಳು ರಾಷ್ಟ್ರದ ಏಕತೆಗೆ ಮಾರಕವಾಗಲಿವೆ’ ಎಂದು ಎಚ್ಚರಿಸಿದರು.

ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶಂಭುಲಿಂಗ ಎಸ್‌.ವಾಣಿ ಮಾತನಾಡಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭೀಮರಾವ ರೇವಣಸಿದ್ದಪ್ಪ ಕೊಟ್ಟರಗಿ ಮಾತನಾಡಿ, ‘ನಮ್ಮ ವೈಯಕ್ತಿಕ ಬದುಕು, ಕುಟುಂಬವನ್ನು ತ್ಯಜಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ. ಇಂದಿನ ಯುವಕರು ಸ್ವಾತಂತ್ರ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಹೇಳಿದರು.

ವಿಭಾಗೀಯ ಪತ್ರಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಡಾ. ವೀರಶೆಟ್ಟಿ, ಕಾಲೇಜು ಪ್ರಾಂಶುಪಾಲ ಶಂಕರಪ್ಪ ಎಸ್ ಹತ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.