ADVERTISEMENT

ಕಲಬುರ್ಗಿ| ಸ್ಟೆಲ್ಲಾಗೆ ಕ್ರಿಸ್‌ಮಸ್‌ ಉಡುಗೊರೆ

ಕೆಎಎಸ್‌ ಪರೀಕ್ಷೆಯಲ್ಲಿ 25ನೇ ರ‍್ಯಾಂಕ್‌ ಪಡೆದ ಕಲಬುರ್ಗಿಯ ಸಿರನೂರಿನ ಸ್ಟೆಲ್ಲಾ ವರ್ಗೀಸ್‌

ಮನೋಜ ಕುಮಾರ್ ಗುದ್ದಿ
Published 26 ಡಿಸೆಂಬರ್ 2019, 10:52 IST
Last Updated 26 ಡಿಸೆಂಬರ್ 2019, 10:52 IST
ಸಹೋದರ ಆಗ್ನೇಲ್‌, ತಾಯಿ ಆಗ್ನೇಸ್‌, ತಂದೆ ಜಾನ್‌ ಅವರೊಂದಿಗೆ ಕೆಪಿಎಸ್ಸಿ ಸಾಧಕಿ ಕಲಬುರ್ಗಿಯ ಸ್ಟೆಲ್ಲಾ ವರ್ಗೀಸ್‌ (ಹಸಿರು ಸೀರೆ ಉಟ್ಟವರು)
ಸಹೋದರ ಆಗ್ನೇಲ್‌, ತಾಯಿ ಆಗ್ನೇಸ್‌, ತಂದೆ ಜಾನ್‌ ಅವರೊಂದಿಗೆ ಕೆಪಿಎಸ್ಸಿ ಸಾಧಕಿ ಕಲಬುರ್ಗಿಯ ಸ್ಟೆಲ್ಲಾ ವರ್ಗೀಸ್‌ (ಹಸಿರು ಸೀರೆ ಉಟ್ಟವರು)   

ಕಲಬುರ್ಗಿ: ಉದಾತ್ತ ಗುರಿ ಹಾಗೂ ಸತತ ಪ್ರಯತ್ನ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲಿನ ಸಿರನೂರಿನ ಸ್ಟೆಲ್ಲಾ ವರ್ಗೀಸ್‌ ಜ್ವಲಂತ ನಿದರ್ಶನ. ಇಲ್ಲಿನ ಸೇಂಟ್‌ ಜೋಸೆಫ್‌ ಶಾಲೆಯಲ್ಲಿ ಓದಿದ ಸ್ಟೆಲ್ಲಾ ಇದೀಗ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 25ನೇ ರ‍್ಯಾಂಕ್‌ ಪಡೆಯುವ ಮೂಲಕ ಉಪವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಸೇಂಟ್‌ ಜೋಸೆಫ್‌ನಲ್ಲಿ ಹೈಸ್ಕೂಲ್‌, ವಿ.ಜಿ. ಮಹಿಳಾ ಕಾಲೇಜಿನಲ್ಲಿ ಪದವಿ ಪೂರೈಸಿದ ಬಳಿಕ ಉನ್ನತ ಶಿಕ್ಷಣಕ್ಕೆಂದು ಸ್ಟೆಲ್ಲಾ ಅವರು ತೆರಳಿದ್ದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ. ಅಲ್ಲಿನ ಕೌಸಾಳಿ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯಲ್ಲಿ ಎಂಬಿಎ ಪದವಿ ಪಡೆದ ಬಳಿಕ ಬೆಂಗಳೂರಿನಲ್ಲಿ ಕಂಪನಿಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸಿದರು. ಸ್ಟೆಲ್ಲಾ ಅವರಿಗೆ ಹೇಗಾದರೂ ಕೆಎಎಸ್‌ ಪರೀಕ್ಷೆ ಪಾಸು ಮಾಡಿ ಜನರ ಸೇವೆ ಮಾಡಬೇಕು ಎಂಬ ಇಚ್ಛೆಯಿತ್ತು. ಹೀಗಾಗಿ, ಇದ್ದ ಹುದ್ದೆಯನ್ನು ತೊರೆದು ದೆಹಲಿಗೆ ತೆರಳಿದರು. ಅಲ್ಲಿನ ಎಎಲ್‌ಎಸ್‌ ಸ್ಪರ್ಧಾತ್ಮಕ ತರಬೇತಿ ಕೇಂದ್ರದಲ್ಲಿ ಅಧ್ಯಯನ ಮುಂದುವರಿಸಿದರು.

2015ರಲ್ಲಿ ನಡೆದ ಕೆಪಿಎಸ್ಸಿ ಪರೀಕ್ಷೆಯಲ್ಲಿ ಪ್ರಿಲಿಮ್ಸ್‌ ಪರೀಕ್ಷೆ ಉತ್ತೀರ್ಣರಾದರೂ ಮುಖ್ಯ ಪರೀಕ್ಷೆಯಲ್ಲಿ ಯಶಸ್ಸು ದೊರೆಯಲಿಲ್ಲ. ಆದರೂ ಮುಂದಿಟ್ಟ ಹೆಜ್ಜೆ ಹಿಂದಿಡಲಿಲ್ಲ. ನಿರಂತರವಾಗಿ ಶ್ರಮ ವಹಿಸಿ ಭೂಗೋಳ ವಿಜ್ಞಾನ ವಿಷಯವನ್ನು ಆರಿಸಿಕೊಂಡು ಪ್ರಯತ್ನ ಮುಂದುವರಿಸಿದರು. 2017ರಲ್ಲಿ ಅದೇ ಹುಮ್ಮಸ್ಸಿನಲ್ಲಿಯೇ ಪರೀಕ್ಷೆ ಬರೆದರು. ಇದೀಗ 25ನೇ ರ‍್ಯಾಂಕ್‌ ಪಡೆಯುವ ಮೂಲಕ ತಂದೆ ತಾಯಿಯ ಖುಷಿ ಇಮ್ಮಡಿಗೊಳಿಸಿದ್ದಾರೆ.

ADVERTISEMENT

ಹಲವು ದಶಕಗಳಿಂದ ಜೇವರ್ಗಿ ರಸ್ತೆಯ ಸಿರನೂರನಲ್ಲಿ ವಾಸವಿರುವ ಜಾನ್‌ ಹಾಗೂ ಆಗ್ನೇಸ್‌ ವರ್ಗೀಸ್‌ ದಂಪತಿಯ ನಾಲ್ವರು ಮಕ್ಕಳ ಪೈಕಿ ಸ್ಟೆಲ್ಲಾ ಎರಡನೇಯವರು. ಅಕ್ಕ, ತಮ್ಮ ಹಾಗೂ ತಂಗಿ ಇದ್ದಾರೆ.

ತಂದೆ ಜಾನ್‌ ಅವರು ಸಾಮಗ್ರಿಗಳನ್ನು ವಾಹನದಲ್ಲಿ ಸಾಗಿಸುವ ಹಾಗೂ ತರಿಸುವ ವ್ಯವಹಾರ ನೋಡಿಕೊಂಡರೆ, ಆಗ್ನೇಸ್‌ ಅವರು ಗೃಹಿಣಿ. ಕ್ರಿಸ್‌ಮಸ್‌ ಹಬ್ಬದ ಸಡಗರದಲ್ಲಿ ಇರುವಾಗಲೇ ಕೆಪಿಎಸ್‌ಸಿ ‍‍ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಸೇಂಟ್‌ ಮೇರಿ ಚರ್ಚ್‌ನಲ್ಲಿ ಗುಲಬರ್ಗಾ ಧರ್ಮಪ್ರಾಂತ್ಯದ ಬಿಷಪ್‌ ಡಾ.ರಾಬರ್ಟ್‌ ಮೈಕೆಲ್‌ ಮಿರಾಂಡಾ ಅವರು ಮಂಗಳವಾರ ರಾತ್ರಿ ಸ್ಟೆಲ್ಲಾ ಅವರನ್ನು ಸನ್ಮಾನಿಸಿದರು.

‘ನಾನು ಎಂಬಿಎ ಮಾಡಿದ್ದರೂ ಭೂಗೋಳ ವಿಷಯ ಆಯ್ದುಕೊಂಡೆ. ನನ್ನ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಅನುಕೂಲವಾಯಿತು. ಈ ವಿಷಯವನ್ನೇ ಆಯ್ದುಕೊಂಡೆ. ಸಂಪೂರ್ಣ ಕೋಚಿಂಗ್‌ ಮೇಲೆ ಅವಲಂಬನೆಯಾಗದೇ ವೈಯಕ್ತಿಕ ಶ್ರಮವನ್ನೂ ಹಾಕಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.