ADVERTISEMENT

ಕಲಬುರಗಿ: ಇನ್ನೂ ಆರಂಭವಾಗದ ಇಂದಿರಾ ಕ್ಯಾಂಟೀನ್

ಹೊಸ ಸರ್ಕಾರ ರಚನೆಯಾಗಿ ಎಂಟು ತಿಂಗಳಾದರೂ ಬಗೆಹರಿಯದ ಸಮಸ್ಯೆ

ಮನೋಜ ಕುಮಾರ್ ಗುದ್ದಿ
Published 7 ಫೆಬ್ರುವರಿ 2024, 4:59 IST
Last Updated 7 ಫೆಬ್ರುವರಿ 2024, 4:59 IST
ಕಲಬುರಗಿಯ ರೈಲ್ವೆ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟೀನ್‌ಗೆ ಬಾಗಿಲು ಹಾಕಿರುವುದು
ಕಲಬುರಗಿಯ ರೈಲ್ವೆ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟೀನ್‌ಗೆ ಬಾಗಿಲು ಹಾಕಿರುವುದು   

ಕಲಬುರಗಿ: ಬಡವರ ಹಸಿವು ನೀಗಿಸುವ ಉದ್ದೇಶದಿಂದ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅತಿ ಕಡಿಮೆ ದರದಲ್ಲಿ ಊಟ, ಉಪಾಹಾರ ನೀಡುವ ಉದ್ದೇಶದಿಂದ ನಗರದಲ್ಲಿ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗಳಿಗೆ ಬೀಗ ಬಿದ್ದು ವರ್ಷ ಕಳೆದರು ಇನ್ನೂ ಆರಂಭವಾಗಿಲ್ಲ.

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗಳು 15 ದಿನಗಳಲ್ಲಿ ಆರಂಭವಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರ ರಚನೆಯಾದ ಆರಂಭದಲ್ಲಿ ಭರವಸೆ ನೀಡಿದ್ದರು. ಅವರ ಭರವಸೆ ಹುಸಿಯಾಗಿದ್ದು, ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳಾದರೂ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ರಾಜ್ಯ ಸರ್ಕಾರ, ಆಯಾ ಮಹಾನಗರ ಪಾಲಿಕೆಗಳ ಧನಸಹಾಯದೊಂದಿಗೆ ಯಶಸ್ವಿಯಾಗಿ ನಡೆಯುತ್ತಿವೆ. ಆದರೆ, ಕಲಬುರಗಿ ನಗರದಲ್ಲಿರುವ ಏಳು ಕ್ಯಾಂಟೀನ್‌ಗಳ ನಿರ್ವಹಣೆ ಮಾಡುತ್ತಿದ್ದ ಗುತ್ತಿಗೆದಾರರಿಗೆ ಸರ್ಕಾರ ₹ 6 ಕೋಟಿ ಬಾಕಿ ಉಳಿಸಿಕೊಂಡಿರುವುದರಿಂದ ವರ್ಷದ ಹಿಂದೆಯೇ ಅವುಗಳನ್ನು ಬಂದ್ ಮಾಡಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ನೇತೃತ್ವದ ಸರ್ಕಾರ ಕ್ಯಾಂಟೀನ್‌ಗಳನ್ನು ನಿರ್ವಹಿಸಲು ಅಷ್ಟಾಗಿ ಉತ್ಸುಕತೆ ತೋರಿಸದೇ ಇದ್ದುದರಿಂದ ಬಾಕಿ ಪಾವತಿಸುವ ಗೋಜಿಗೆ ಹೋಗಿರಲಿಲ್ಲ.

ADVERTISEMENT

2022ರ ಅಕ್ಟೋಬರ್ ಹೊತ್ತಿಗೆ 28 ತಿಂಗಳ ಬಾಕಿ ₹ 6 ಕೋಟಿಯನ್ನು ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆ ಬಾಕಿ ಉಳಿಸಿಕೊಂಡಿತ್ತು. ಕ್ಯಾಂಟೀನ್ ನಿರ್ವಹಣೆ ಗುತ್ತಿಗೆ ಪಡೆದಿದ್ದ ರಾಯಚೂರು ಮೂಲದ ಗುತ್ತಿಗೆದಾರರು ಕೆಲ ತಿಂಗಳು ನಡೆಸಿ ಅಂತಿಮವಾಗಿ ವರ್ಷದ ಹಿಂದೆ ಕ್ಯಾಂಟೀನ್ ಸೇವೆ ಸ್ಥಗಿತಗೊಳಿಸಿದರು. ನಿತ್ಯದ ಊಟಕ್ಕಾಗಿ ಕ್ಯಾಂಟೀನ್‌ಗಳನ್ನು ಆಶ್ರಯಿಸಿದ್ದ ಬಡವರು, ಕಾರ್ಮಿಕರು, ವಿದ್ಯಾರ್ಥಿಗಳು ಅನಿವಾರ್ಯವಾಗಿ ದುಬಾರಿ ಹಣ ನೀಡಿ ಖಾಸಗಿ ಹೋಟೆಲ್‌ಗಳಿಗೆ ಹೋಗಬೇಕಾಗಿದೆ.

ನಗರದ ಜನನಿಬಿಡ ಪ್ರದೇಶಗಳಾದ ಕಲಬುರಗಿ ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ, ಜಗತ್ ಸರ್ಕಲ್, ಗಂಜ್, ಜಿಮ್ಸ್ ಸೇರಿದಂತೆ ಏಳು ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಿತ್ತು. ಹಲವು ತಿಂಗಳಾದರೂ ಬಾಕಿ ಪಾವತಿಯಾಗದ್ದರಿಂದ ಗುತ್ತಿಗೆದಾರರು ಸೇವೆ ನಿಲ್ಲಿಸಿದರು.

ತಾಲ್ಲೂಕಿನಲ್ಲೂ ಇಲ್ಲ ಕ್ಯಾಂಟೀನ್: ಕಲಬುರಗಿಯಲ್ಲಿ ಇದ್ದ ಕ್ಯಾಂಟೀನ್‌ಗಳನ್ನು ಮುಚ್ಚಿದ್ದರೆ ಚಿಂಚೋಳಿ ಹೊರತುಪಡಿಸಿ ಉಳಿದ ತಾಲ್ಲೂಕು ಕೇಂದ್ರದಲ್ಲಿ ಇದುವರೆಗೂ ಇಂದಿರಾ ಕ್ಯಾಂಟೀನ್‌ಗಳು ಆರಂಭವಾಗಿಲ್ಲ. ಸೇಡಂನಲ್ಲಿ ಜಾಗ ಗುರುತಿಸಿ ಕಟ್ಟಡ ಕಟ್ಟಲು ಮುಂದಾಗಿದ್ದರೂ, ಅರ್ಧಕ್ಕೇ ನಿಂತಿದೆ. ಉಳಿದ ತಾಲ್ಲೂಕುಗಳಲ್ಲಿ ನಿವೇಶನ ಸಿಗದೇ ಇರುವುದು ಸೇರಿದಂತೆ ಇತರ ಕಾರಣಗಳಿಗಾಗಿ ಕ್ಯಾಂಟೀನ್‌ಗಳು ಆರಂಭವೇ ಆಗಿಲ್ಲ.  

ಎಸ್‌.ಎಂ.ಶರ್ಮಾ
ಭುವನೇಶ್ ಪಾಟೀಲ
ದಿನಾಲೂ ಕಲಬುರಗಿಗೆ ಬರುವ ದಿನಗೂಲಿ ಕಾರ್ಮಿಕರು ರೈತರು ಕಡಿಮೆ ವೇತನ ಉಳ್ಳವರಿಗೆ ಇಂದಿರಾ ಕ್ಯಾಂಟೀನ್ ಆಸರೆಯಾಗಿತ್ತು. ಅವುಗಳನ್ನು ಮರು ಆರಂಭಿಸಬೇಕು
ಎಸ್‌.ಎಂ. ಶರ್ಮಾ ಎಐಯುಟಿಯುಸಿ ಕಾರ್ಮಿಕ ಸಂಘಟನೆ ಜಿಲ್ಲಾ ಕಾರ್ಯದರ್ಶಿ

20 ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭ

‘ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದಲೇ ಟೆಂಡರ್ ಕರೆಯಲಾಗಿದ್ದು ಮುಂದಿನ 15ರಿಂದ 20 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಆರಂಭಗೊಳ್ಳಲಿವೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ ಮಾಹಿತಿ ನೀಡಿದರು. ‘ಪ್ರಜಾವಾಣಿ‘ಯೊಂದಿಗೆ ಮಾತನಾಡಿದ ಅವರು ‘ನಗರದಲ್ಲಿರುವ ಏಳು ಕ್ಯಾಂಟೀನ್‌ಗಳ ಜೊತೆಗೆ ಹೊಸದಾಗಿ ನಗರದ ಜಯದೇವ ಹೃದ್ರೋಗ ಆಸ್ಪತ್ರೆ ಆವರಣ ಹಾಗೂ ಕುಸನೂರು ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಉದ್ದೇಶಿಸಲಾಗಿದೆ. ಗಂಜ್‌ ಆವರಣದಲ್ಲಿರುವ ಕ್ಯಾಂಟೀನ್‌ಗೆ ಹೆಚ್ಚು ಜನರು ಹೋಗುತ್ತಿಲ್ಲ. ಅದನ್ನು ಸ್ಥಳಾಂತರಿಸಿ ಗಂಜ್ ನಿಲ್ದಾಣದ ರಸ್ತೆಯ ಪಕ್ಕದಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ’ ಎಂದರು. ‘ಗುತ್ತಿಗೆದಾರರ ₹ 5.5 ಕೋಟಿ ಬಾಕಿಯ ಪೈಕಿ ಕಾರ್ಮಿಕ ಇಲಾಖೆಯಿಂದ ₹ 2 ಕೋಟಿ ಬರಬೇಕಿದೆ. ಪಾಲಿಕೆಯ ತೆರಿಗೆ ಸಂಗ್ರಹವೂ ಉತ್ತಮವಾಗಿದ್ದು ಶೀಘ್ರವೇ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.