ADVERTISEMENT

₹74 ಲಕ್ಷ ಮೌಲ್ಯದ ಸ್ವತ್ತು ವಾರಸುದಾರರಿಗೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 9:38 IST
Last Updated 2 ಜುಲೈ 2022, 9:38 IST
ಕಲಬುರಗಿ ನಗರದಲ್ಲಿ ದ್ವಿಚಕ್ರ ವಾರಸುದಾರರಿಗೆ ಕೀ ಹಸ್ತಾಂತರಿಸಿದ ಎಸ್‌ಪಿ ಇಶಾ ಪಂತ್
ಕಲಬುರಗಿ ನಗರದಲ್ಲಿ ದ್ವಿಚಕ್ರ ವಾರಸುದಾರರಿಗೆ ಕೀ ಹಸ್ತಾಂತರಿಸಿದ ಎಸ್‌ಪಿ ಇಶಾ ಪಂತ್   

ಕಲಬುರಗಿ: ಜಿಲ್ಲೆಯ ವ್ಯಾಪ್ತಿಯಲ್ಲಿ ನವೆಂಬರ್‌ನಿಂದ ಮೇ ವರೆಗಿನ ಅವಧಿಯಲ್ಲಿ ಸುಲಿಗೆ, ಸರಗಳ್ಳತನ, ದರೋಡೆ, ರಾತ್ರಿಕನ್ನ ಕಳವು, ಹಗಲು ಕನ್ನಕಳವು, ವಾಹನ, ಸಾಮಾನ್ಯ ಕಳವು ಪ್ರಕರಣ ಸೇರಿ ಒಟ್ಟು 152 ಪ್ರಕರಣ ವರದಿಯಾಗಿದ್ದು, 77 ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಲ್ಲಿನ ಡಿಎಆರ್‌ ಪರೇಡ್‌ ಆವರಣದಲ್ಲಿ ಶನಿವಾರ ಪ್ರಾಪರ್ಟಿ ರಿಟರ್ನ್‌ ಪರೇಡ್ ಕಾರ್ಯಕ್ರಮ ನಡೆಯಿತು. 77 ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ನಗದು, ಚಿನ್ನ–ಬೆಳ್ಳಿ ಆಭರಣಗಳು, ದ್ವಿಚಕ್ರ, ಟ್ರಾಕ್ಟರ್, ಕ್ರೂಸರ್, ಪಂಪ್‌ಸೈಟ್, ದೇವರ ಮೂರ್ತಿ ಸೇರಿದಂತೆ ಒಟ್ಟು ₹74.24 ಲಕ್ಷ ಮೌಲ್ಯದ ಸ್ವತ್ತುಗಳನ್ನು ಸಂಬಂಧಿಸಿದ ವಾರಸುದಾರರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಅವರು, ‘ಕಳೆದ 6 ತಿಂಗಳ ಅವಧಿಯಲ್ಲಿ ಜಿಲ್ಲೆಯ ಜೇವರ್ಗಿ, ಚಿಂಚೋಳಿ, ಶಹಾಬಾದ್, ಕಮಲಾಪುರ, ಮಾದನಹಿಪ್ಪರಗಾ, ಆಳಂದ ಸೇರಿದಂತೆ ಇತರೆ ಪೊಲೀಸ್ ಠಾಣೆಗಳಲ್ಲಿ 152 ಪ್ರಕರಣ ದಾಖಲಾಗಿದ್ದವು. ಈ ಪೈಕಿ 77 ಅಪರಾಧ ಪ್ರಕರಣಗಳನ್ನು ಭೇದಿಸಿ, 133 ಆರೋಪಿಗಳನ್ನು ಬಂಧಿಸಲಾಗಿದೆ’ ಎಂದರು.

ADVERTISEMENT

‘ವಿವಿಧ ಪ್ರಕರಣಗಳ ಬಂಧಿತರಿಂದ ₹44.42 ಲಕ್ಷ ಮೌಲ್ಯದ 1.12 ಕೆ.ಜಿ ಬಂಗಾರ, ₹5.96 ಲಕ್ಷ ಮೌಲ್ಯದ 8.481 ಕೆ.ಜಿ ಬೆಳ್ಳಿ, ₹11 ಲಕ್ಷ ಮೌಲ್ಯದ 34 ದ್ವಿಚಕ್ರ ವಾಹನ, ₹1.70 ಲಕ್ಷ ಮೌಲ್ಯದ 2 ಟ್ರಾಕ್ಟರ್ ಟ್ರಾಲಿ, ₹1.49 ಲಕ್ಷ ಮೌಲ್ಯದ 22 ಟ್ಯಾಬ್‌ಗಳು, ₹1.20 ಲಕ್ಷ ಮೌಲ್ಯದ ಕ್ರೂಸರ್ ವಾಹನ, ₹1.16 ಲಕ್ಷ ಮೌಲ್ಯ 10 ಸ್ಮಾರ್ಟ್‌ಫೋನ್‌, ಎತ್ತು, ಕುರಿ, ದೇವರ ಬೆಳ್ಳಿ ಮೂರ್ತಿ, ರೂಟರ್, ವಾಟರ್‌ ಪಂಪ್‌ಸೆಟ್ ಸೇರಿದಂತೆ ಒಟ್ಟು ₹74.27 ಲಕ್ಷ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಕಮಲಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಗಮೇಶ್ವರ ದೇವರ ಬೆಳ್ಳಿ ಮೂರ್ತಿಯನ್ನು ಮೂವರು ಕಳ್ಳರು ಕದ್ದು ಒಯ್ದಿದ್ದರು. ಪ್ರಕರಣ ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಮೂರ್ತಿಯನ್ನು ವಶಕ್ಕೆ ಪಡೆದು ಹಸ್ತಾಂತರಿಸಿದರು.

ಡಿಎಸ್‌ಪಿಯಾಗಿ ಬಸವರಾಜ ಅವರು ನೇಮಕವಾಗಿದ್ದಾರೆ.

ಕಳೆದುಕೊಂಡ ವಸ್ತುಗಳನ್ನು ಮತ್ತೆ ಪಡೆದಿದ್ದರಿಂದ ವಾರಸುದಾರರು ಸಂತಸ ವ್ಯಕ್ತಪಡಿಸಿ, ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.