ADVERTISEMENT

ಹೊಸ ಪಿಯು ಕಾಲೇಜುಗಳಲ್ಲಿ ಪ್ರವೇಶಕ್ಕೆ ನಿರುತ್ಸಾಹ

ಅತಿಥಿ ಉಪನ್ಯಾಸಕರ ನೇಮಕ ವಿಳಂಬ; ಆರಂಭಗೊಳ್ಳದ ತರಗತಿಗಳು

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 6:23 IST
Last Updated 27 ಜೂನ್ 2025, 6:23 IST
ಆಳಂದ ತಾಲ್ಲೂಕಿನ ನಿಂಬಾಳ ಸರ್ಕಾರಿ ಪ್ರೌಢಶಾಲೆ ಕಟ್ಟಡದಲ್ಲಿ ಪಿಯು ಕಾಲೇಜು ಪ್ರಾರಂಭವಾಗಿರುವುದು 
ಆಳಂದ ತಾಲ್ಲೂಕಿನ ನಿಂಬಾಳ ಸರ್ಕಾರಿ ಪ್ರೌಢಶಾಲೆ ಕಟ್ಟಡದಲ್ಲಿ ಪಿಯು ಕಾಲೇಜು ಪ್ರಾರಂಭವಾಗಿರುವುದು    

ಆಳಂದ: ತಾಲ್ಲೂಕಿನ ಐದು ಗ್ರಾಮಗಳಲ್ಲಿ ಪ್ರಸಕ್ತ ವರ್ಷ ಪ್ರಾರಂಭಿಸಿದ ಹೊಸ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗೆ ನಿರುತ್ಸಾಹ ಕಂಡು ಬಂದಿದೆ. ತಿಂಗಳು ಕಳೆದರೂ ಅತಿಥಿ ಉಪನ್ಯಾಸಕರ ನೇಮಕ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೊಸ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹೊಸ ಐದು ಪಿಯು ಕಾಲೇಜುಗಳು ಮಂಜೂರಾಗಿವೆ. ತಾಲ್ಲೂಕಿನ ಜಿಡಗಾ, ಮಾಡಿಯಾಳ, ಧುತ್ತರಗಾಂವ, ನಿಂಬಾಳ ಹಾಗೂ ತಡಕಲ ಗ್ರಾಮದಲ್ಲಿ ಈ ವರ್ಷದಿಂದ ನೂತನ ಪದವಿ ಪೂರ್ವ ಕಾಲೇಜುಗಳು ಆರಂಭವಾಗಿವೆ. ತಾತ್ಕಾಲಿಕ ವ್ಯವಸ್ಥೆ ಹಿನ್ನೆಲೆಯಲ್ಲಿ ಆಯಾ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಪಿಯು ಕಾಲೇಜು ಕಚೇರಿ ತರೆಯಲಾಗಿದೆ. ಸಮೀಪದ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ಹೊಸ ಕಾಲೇಜುಗಳನ್ನು ಆರಂಭಿಸಿದರೂ ವಿದ್ಯಾರ್ಥಿಗಳು ಮತ್ತು ಪಾಲಕರು ಮಾತ್ರ ಸ್ಥಳೀಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ನಿರಾಸಕ್ತಿ ತೋರುತ್ತಿದ್ದಾರೆ. ತಿಂಗಳು ಕಳೆದರೂ ಧುತ್ತರಗಾಂವ ಕಾಲೇಜಿನಲ್ಲಿ 12 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಅದರಂತೆ ನಿಂಬಾಳ ಪಿಯು ಕಾಲೇಜಿನಲ್ಲಿ 18, ಜಿಡಗಾ- 12, ತಡಕಲ -7 ಹಾಗೂ ಮಾಡಿಯಾಳದಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಪ್ರಥಮ ಪಿಯು ತರಗತಿಗೆ ಪ್ರವೇಶ ಪಡೆದುಕೊಂಡಿದ್ದಾನೆ. ಐದೂ ಕಾಲೇಜುಗಳಲ್ಲಿ ಪ್ರಸಕ್ತ ವರ್ಷ ಕಲಾ ವಿಭಾಗದ ತರಗತಿಗಳನ್ನು ಮಾತ್ರ ಆರಂಭಿಸಲಾಗಿದೆ.

ADVERTISEMENT

ಪಿಯು ಕಾಲೇಜು ಪ್ರವೇಶಾತಿಗೆ ಪ್ರಭಾರ ಪ್ರಾಚಾರ್ಯರು, ಗ್ರಾ.ಪಂ.ಸದಸ್ಯರು, ಮುಖಂಡರು ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮೂಲಸೌಲಭ್ಯ ಮತ್ತು ಉಪನ್ಯಾಸಕರ ಕೊರತೆ ಹಿನ್ನಲೆಯಲ್ಲಿ ಹೊಸ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿರುವುದು ಸಾಮಾನ್ಯವಾಗಿದೆ. ಈ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತವೂ ಪಿಯು ಕಾಲೇಜುಗಳ ಪ್ರವೇಶದ ಮೇಲೆ ಪರಿಣಾಮ ಬೀರಿದೆ.

ಉಪನ್ಯಾಸಕರ ನೇಮಕ ವಿಳಂಬ: ಪಿಯು ಕಾಲೇಜುಗಳು ಆರಂಭವಾದರೂ ಅತಿಥಿ ಉಪನ್ಯಾಸಕರ ನೇಮಕ ಮಾತ್ರ ನಡೆದಿಲ್ಲ. ಜೂನ್‌ 28ಕ್ಕೆ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನಂತರ ಹೊಸ ಕಾಲೇಜುಗಳಿಗೆ ನಿಯೋಜನೆ ಮಾಡಲಾಗುವುದು. ಸ್ಥಳೀಯ ಅಭ್ಯರ್ಥಿಗಳನ್ನೇ ನೇಮಕ ಮಾಡಿಕೊಂಡರೆ ಪ್ರವೇಶಾತಿಯ ಹೆಚ್ಚಳಕ್ಕಾಗಿ ಅತಿಥಿ ಉಪನ್ಯಾಸಕರೂ ಶ್ರಮಿಸುತ್ತಿದ್ದರು. ನೇಮಕಾತಿ ಅಂಕಗಳ ಆಧಾರದ ಮೇಲೆ ನಡೆಯುವುದರಿಂದ ಸ್ಥಳೀಯವಾಗಿ ಪ್ರವೇಶಾತಿ ಜವಾಬ್ದಾರಿ ಹೊತ್ತುಕೊಳ್ಳಲು ಪ್ರಭಾರಿ ಪ್ರಾಚಾರ್ಯರಿಗೆ ಹೊರೆಯಾಗಿದೆ. 

ಆರಂಭಗೊಳ್ಳದ ತರಗತಿಗಳು

ಹೊಸ ಪಿಯು ಕಾಲೇಜುಗಳಲ್ಲಿ ತರಗತಿಗಳು ಆರಂಭಗೊಳ್ಳದ ಕಾರಣ ಪ್ರವೇಶಾತಿಗೂ ಹಿನ್ನಡೆಯಾಗಿದೆ. ಸ್ಥಳೀಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಒಂದು ಕೋಣೆಯಲ್ಲಿ ತರಗತಿ ನಡೆಸಲಾಗುತ್ತಿದೆ. ಯಾರೂ ಉಪನ್ಯಾಸಕರು ಬಂದಿಲ್ಲ. ಹೊಸ ಕಾಲೇಜುಗಳಲ್ಲಿ ತಿಂಗಳು ಕಳೆದರೂ ಕಲಿಕಾ ಚಟುವಟಿಕೆಗಳು ಜರುಗುತ್ತಿಲ್ಲ ಎಂದು ಕೆಲ ವಿದ್ಯಾರ್ಥಿಗಳು ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ‘ತರಗತಿ ಆರಂಭಿಸಿ ಇಲ್ಲವೇ ನಮ್ಮ ಮಕ್ಕಳ ಟಿ.ಸಿ ನೀಡಿ ಎಂದು ವಿದ್ಯಾರ್ಥಿಗಳ ಪಾಲಕರು ಒತ್ತಾಯಿಸುತ್ತಾರೆ. ಪ್ರಾಚಾರ್ಯರು ಸ್ಥಳೀಯ ಶಿಕ್ಷಣಾಸಕ್ತರು ಒಗ್ಗೂಡಿ ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ನೀಡಿ ಪ್ರವೇಶಾತಿ ಹೆಚ್ಚಿಸುವ ಕಾರ್ಯ ಮುಂದುವರಿದಿದೆ. ಹೊಸ ಪಿಯು ಕಾಲೇಜುಗಳಲ್ಲಿ ಪ್ರಸಕ್ತ ವರ್ಷ ತರಗತಿ ಆರಂಭಿಸಿದರೆ ಮುಂದಿನ ವರ್ಷ ಕೆಕೆಆರ್‌ಡಿಬಿ ಅನುದಾನದಲ್ಲಿ ಹೊಸ ಕಟ್ಟಡ ಉಪನ್ಯಾಸಕರ ನಿಯೋಜನೆ ಜರುಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.