ADVERTISEMENT

ಶಿಕ್ಷಕ ಹುದ್ದೆ ವಂಚಿತರ ಹೋರಾಟ ಸಮಿತಿ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 16:33 IST
Last Updated 5 ಡಿಸೆಂಬರ್ 2022, 16:33 IST
ಕಲಬುರಗಿಯಲ್ಲಿ ಅಖಿಲ ಭಾರತ ಯುವಜನ ಒಕ್ಕೂಟದ ಸದಸ್ಯರು ಸಭೆ ನಡೆಸಿದರು
ಕಲಬುರಗಿಯಲ್ಲಿ ಅಖಿಲ ಭಾರತ ಯುವಜನ ಒಕ್ಕೂಟದ ಸದಸ್ಯರು ಸಭೆ ನಡೆಸಿದರು   

ಕಲಬುರಗಿ: ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಮದುವೆಯಾದ ಮಹಿಳಾ ಅಭ್ಯರ್ಥಿಗಳಿಗೆ ಗಂಡನ ಆದಾಯ ಪ್ರಮಾಣ ಪತ್ರ ನೀಡದ ಕಾರಣ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರು ಕೈಬಿಟ್ಟ ಧೋರಣೆಯನ್ನು ಖಂಡಿಸಲು ಹಾಗೂ ಸರ್ಕಾರದ ಮೇಲೆ ಒತ್ತಡ ಹೇರಲು ಅಖಿಲ ಭಾರತ ಯುವಜನ ಒಕ್ಕೂಟದ ನೇತೃತ್ವದಲ್ಲಿ ಹೋರಾಟ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಹಣಮಂತರಾಯ ಅಟ್ಟೂರ, ‘ಬರುವ ಅಧಿವೇಶನದಲ್ಲಿ ಚರ್ಚಿಸಿ ಅನ್ಯಾಯವಾದ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಬೇಕು. ಆಡಳಿತ ಹಾಗೂ ವಿರೋಧ ಪಕ್ಷದ ಜನಪ್ರತಿನಿಧಿಗಳಿಗೆ ಮನವಿ ಪತ್ರ ನೀಡಬೇಕು. ಒಂದು ವೇಳೆ ನ್ಯಾಯ ದೊರೆಯದಿದ್ದರೆ ರಾಜ್ಯದಾದ್ಯಂತ ಉಗ್ರ ಸ್ವರೂಪದ ಹೋರಾಟ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದರು.

ರಾಜ್ಯದ ಸುಮಾರು 2,500 ಅಭ್ಯರ್ಥಿಗಳಲ್ಲಿ ಕಲ್ಯಾಣ ಕರ್ನಾಟಕ ವಿಭಾಗದ 189 ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಸುಪ್ರೀಂ ಕೋರ್ಟ್ ಹಲವಾರು ಪ್ರಕರಣಗಳಲ್ಲಿ ಮದುವೆಯಾದ ಮಹಿಳೆಯರು ತಾಯಿ, ತಂದೆಯ ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ನೀಡಿದರೆ ಸಾಕು ಗಂಡನ ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರ ನೀಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟವಾಗಿ ತೀರ್ಪು ನೀಡಿದೆ. ಸರ್ಕಾರ ಮಾಡಿದ ತಪ್ಪನ್ನು ಸರಿಪಡಿಸಿಕೊ೦ಡು ಅರ್ಹತೆಯಿರುವ ಅಭ್ಯರ್ಥಿಗಳಿಗೆ ಸರ್ಕಾರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.

ADVERTISEMENT

ಹೋರಾಟ ಸಮಿತಿಗೆ ಈ ಕೆಳಕಂಡ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಹಣಮಂತರಾಯ ಎಸ್. ಅಟ್ಟೂರ (ಅಧ್ಯಕ್ಷ), ಲೀಲಾ ಹಿರೇಮಠ, ನಿರ್ಮಲಾ ವಿಲಾಸ (ಉಪಾಧ್ಯಕ್ಷರು), ಶ್ರುತಿ ಪಾಟೀಲ (ಪ್ರಧಾನ ಕಾರ್ಯದರ್ಶಿ), ಅಂಬಿಕಾ ಜಿ. ಪೂಜಾರಿ (ಸಹ ಕಾರ್ಯದರ್ಶಿ), ಉಮಾದೇವಿ ಬಿ.ಮದಗುಣಕಿ (ಖಜಾಂಚಿ), ಸಂತೋಷ ದೊಡ್ಡಮನಿ, ಪೂಜಾ ವಿಠಲ ಕುಂಬಾರ (ಸಂಘಟನಾ ಕಾರ್ಯದರ್ಶಿಗಳು), ಭೀಮಾಶಂಕರ ಮಾಡಿಯಾಳ (ಕಾನೂನು ಸಲಹೆಗಾರ), ಶಾರದಾ ವಿಶ್ವಕರ್ಮ ಯಾದಗಿರಿ, ಊರ್ಮಿಳಾ ಗಾಯಕವಾಡ ಬೀದರ್, ವಾಣಿಶ್ರೀ ರೆಡ್ಡಿ ಸಂಚಾಲನ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.

ಹೋರಾಟಗಾರರಾದ ಪ್ರಭುದೇವ ಯಳಸಂಗಿ, ಅಸ್ಲಾಂ ಶೇಖ್, ವಿಠಲ ಕುಂಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.