ADVERTISEMENT

ಕಲಬುರಗಿ|ಇಟ್ಟುಕೊಂಡ ಗುರಿ ತಲುಪುವ ಜಿದ್ದಿರಲಿ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:05 IST
Last Updated 15 ಸೆಪ್ಟೆಂಬರ್ 2025, 5:05 IST
<div class="paragraphs"><p>ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ&nbsp;ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಸಾಧಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.&nbsp;</p></div>

ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಸಾಧಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. 

   

ಕಲಬುರಗಿ: ಅಲ್ಲಿ ಕಿಕ್ಕಿರಿದು ಜನ ಸೇರಿದ್ದರು. ಶ್ರದ್ಧೆಯಿಂದ ಓದಿದ್ದ ಆ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಶೇ 90ಕ್ಕೂ ಅಧಿಕ ಅಂಕ ಗಳಿಸಿದ ಸಾಧಕರು. ಸಾಧನೆಯ ಹೊಳಪು ಅವರೆಲ್ಲ ಮಂದಸ್ಮಿತ ಮೊಗದಲ್ಲಿ ಆತ್ಮವಿಶ್ವಾಸವಾಗಿ ಮಿನುಗುತ್ತಿತ್ತು. ಅವರ ಶ್ರಮದ ಬೆವರಿಗೆ ಗಣ್ಯರು ಸನ್ಮಾನದ ಗೌರವ ನೀಡಿದರು. ಗಂಭೀರ ವದನ ಸಾಧಕರು ಹೆಮ್ಮೆಯಿಂದ ಪ್ರೋತ್ಸಾಹದ ಪುಳಕದಲ್ಲಿ ಮಿಂದಿದ್ದೆದ್ದರು...

ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಇಂಥ ಅಪೂರ್ವ ಕ್ಷಣಗಳು ಕಂಡು ಬಂದವು. ನೂರಾರು ವಿದ್ಯಾರ್ಥಿಗಳೊಂದಿಗೆ ಅವರ ಪೋಷಕರೂ ಈ ಕ್ಷಣಗಳಿಗೆ ಸಾಕ್ಷಿಯಾದರು. ಮಕ್ಕಳನ್ನು ವೇದಿಕೆ ಎದುರು ನಿಲ್ಲಿಸಿ ಚಿತ್ರ, ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಕಲಬುರಗಿ, ಬೀದರ್‌ ಹಾಗೂ ಯಾದಗಿರಿ ಜಿಲ್ಲೆಗಳ ಸರ್ಕಾರಿ ನೌಕರರ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಸಾಧಕ ಮಕ್ಕಳಿಗೆ ಹಮ್ಮಿಕೊಂಡಿದ್ದ ಈ ಸಮಾರಂಭದಲ್ಲಿ 399 ವಿದ್ಯಾರ್ಥಿಗಳಿಗೆ ಒಟ್ಟು ₹ 5.99 ಲಕ್ಷ ಪುರಸ್ಕಾರ ಪ್ರದಾನ ಮಾಡಲಾಯಿತು. ಜೊತೆಗೆ ಒಂದು ಬ್ಯಾಗ್‌, ಒಂದು ಪ್ರೇರಣಾ ಪುಸ್ತಕ, ಸ್ಮರಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. 

ADVERTISEMENT

ಪ್ರೇರಣಾ ನುಡಿಗಳನ್ನಾಡಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌, ‘ನಾನೊಂದು ಸರಳ–ಸಾಧಾರಣ ಕುಟುಂಬದಲ್ಲಿ ಜನಿಸಿದೆ. ಆದರೆ, ನನ್ನನ್ನು ಇಂದು ಜಿಲ್ಲಾಧಿಕಾರಿಯಾಗಿ ನಿಲ್ಲಿಸಿದ್ದು ಶಿಕ್ಷಣ. ಶಿಕ್ಷಣ ಬದುಕು ಬದಲಿಸುವ ಮಂತ್ರ’ ಎಂದರು.

‘ನಾನು ಮನೆ ಸಮೀಪದ ಶಾಲೆ, ಮನೆಗೆ ಹತ್ತಿರವಾದ ಕಾಲೇಜಿನಲ್ಲೇ ಕಲಿತೆ. ನಾನೇ ದೊಡ್ಡ ಹುದ್ದೆಗೆ ಏರಲು ಸಾಧ್ಯವಾಗಿರುವುದಾದರೆ, ನಿಮ್ಮಿಂದಲೂ ದೊಡ್ಡ ಸಾಧನೆ ಖಂಡಿತ ಸಾಧ್ಯ. ಬದುಕಿನಲ್ಲಿ ಗುರಿಯೊಂದನ್ನು ಇಟ್ಟುಕೊಂಡು ಅದನ್ನು ತಲುಪುವ ತನಕ ಮಿರಮಿಸಲ್ಲ ಎಂಬ ಜಿದ್ದಿದ್ದರೆ ಸಾಕು, ನೀವು ಸಾಧನೆಯ ಶಿಖರ ಏರುವುದನ್ನು ಯಾರಿಂದಲೂ ತಡೆಯಲಾಗದು’ ಎಂದರು.

‘ಇಂದಿನ ಪೀಳಿಗೆಯವರು ಬಹಳ ಅದೃಷ್ಟವಂತರು. ಮೊಬೈಲ್‌ ಫೋನ್‌, ಕಂಪ್ಯೂಟರ್‌ ಅವರ ಅಂಗೈನಲ್ಲಿವೆ. ಅವಕಾಶಗಳು ವಿಪುಲವಾಗಿವೆ. ಸಮಯ ನಿರ್ವಹಣೆ, ಅದರ ಗುಣಮಟ್ಟದ ಬಳಕೆ, ಇರುವ ಸಂಪನ್ಮೂಲಗಳ ಸದ್ಬಳಕೆ ರೂಢಿಸಿಕೊಂಡರೆ ಸುಲಭವಾಗಿ ಸಾಧನೆ ಮಾಡಬಹುದು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಶಶೀಲ್ ನಮೋಶಿ, ‘ಸರ್ಕಾರದ ಯೋಜನೆಗಳನ್ನು ಸಮಾಜದ ಪ್ರತಿಯೊಬ್ಬರೂ ತಲುಪಿಸುವ ಸರ್ಕಾರಿ ನೌಕರರು ಯಾವುದೇ ಸರ್ಕಾರದ ಆಡಳಿತ ವ್ಯವಸ್ಥೆಯ ಹೃದಯವಿದ್ದಂತೆ. ಅಧಿಕಾರಕ್ಕೆ ಬಂದ ಕೂಡಲೇ ಎನ್‌ಪಿಎಸ್‌ ರದ್ದುಗೊಳಿಸಿ, ಹಳೆಯ ಪಿಂಚಣಿ ವ್ಯವಸ್ಥೆ (ಒಪಿಎಸ್‌) ಜಾರಿಗೊಳಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಕೂಡಲೇ ಒಪಿಎಸ್‌ ಜಾರಿಗೆ ಸರ್ಕಾರ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.

‘ಕಲ್ಯಾಣ ಭಾಗದಲ್ಲಿ ಶೇ 35ರಿಂದ 40ರಷ್ಟು ಸರ್ಕಾರಿ ಹುದ್ದೆಗಳು ಖಾಲಿಯಿವೆ. 51 ಸಾವಿರದಷ್ಟು ಶಿಕ್ಷಕ ಹುದ್ದೆಗಳು ಖಾಲಿಯಿವೆ. ಹೀಗಾದರೆ ಉತ್ತಮ ಫಲಿತಾಂಶ ಕೊಡಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.

ಸಮಾಜ ಎತ್ತ ಸಾಗುತ್ತಿದೆ?:

ಸಂಘದ ಗೌರವಾಧ್ಯಕ್ಷ ಎಸ್‌. ಬಸವರಾಜು ಮಾತನಾಡಿ, ‘ಇತ್ತೀಚೆಗೆ ಅವಿಭಕ್ತ ಕುಟುಂಬಗಳು ಕರಗುತ್ತಿವೆ. ಶಿಕ್ಷಣ ಪಡೆದು, ಪದವಿ ಗಳಿಸಿ, ಉನ್ನತ ಅಧಿಕಾರ ಹೊಂದಿ ಹಣ ಗಳಿಸಿ ಸಮಾಜದಲ್ಲಿ ಬದುಕುವ ಮನಸ್ಥಿತಿ ಕಾಣುತ್ತಿದ್ದೇವೆ. ಹೆಚ್ಚು ಶಿಕ್ಷಣ ಪಡೆದವರೆ ಸಮಾಜದಲ್ಲಿ ಉಗ್ರಗಾಮಿಗಳಾಗುತ್ತಿದ್ದಾರೆ. ಸಮಾಜ ಎತ್ತ ಸಾಗುತ್ತಿದೆ? ಹೀಗಾಗಿ ಬರೀ ಶಿಕ್ಷಣ ಪಡೆದರೆ ಸಾಲದು, ಸಂಸ್ಕಾರವನ್ನೂ ಪಡೆಯಬೇಕು. ವಿದ್ಯಾರ್ಥಿಗಳು ಸಮಾಜ, ತಂದೆ–ತಾಯಿ ಹಾಗೂ ದೇಶದ ಉಜ್ವಲ ಭವಿಷ್ಯದ ಬಗೆಗೆ ಕಾಳಜಿ ವಹಿಸಬೇಕಿದೆ’ ಎಂದು ಕಿವಿಮಾತು ಹೇಳಿದರು.

ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಯಾದಗಿರಿ ಜಿಲ್ಲಾಧ್ಯಕ್ಷ ರಾಯಪ್ಪಗೌಡ ಹುಡೇದ, ಬೀದರ್‌ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ಸೇರಿದಂತೆ ಸಂಘದ ಹಲವು ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕಿಕ್ಕಿರಿದು ನೆರೆದ್ದ ವಿದ್ಯಾರ್ಥಿಗಳು ಪೋಷಕರು... –ಪ್ರಜಾವಾಣಿ ಚಿತ್ರ
ಅಧಿಕಾರದ ಕುರ್ಚಿ ಎಲ್ಲರಿಗೂ ಸಿಗಲ್ಲ. ಕುರ್ಚಿ ಸಿಕ್ಕಾಗ ಅದರಿಂದ ಅಧಿಕಾರ ಪಡೆಯೋದಲ್ಲ. ಅವಿರತ ಕೆಲಸದ ಮೂಲಕ ಆ ಕುರ್ಚಿಗೆ ಎಷ್ಟು ಗೌರವ ತರುತ್ತೇವೆ ಎಂಬುದು ಮುಖ್ಯ
ಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿ
ಪ್ರಜಾಪ್ರಭುತ್ವದ ನಾಲ್ಕು ಅಂಗಳಲ್ಲಿ ಒಂದಾದ ಕಾರ್ಯಾಂಗ ಅಲುಗಾಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಬಿದ್ದು ಹೋಗುತ್ತದೆ. ನೆರೆಯ ಶ್ರೀಲಂಕಾ ನೇಪಾಳ ಅದಕ್ಕೆ ನಿದರ್ಶನ
ಅಲ್ಲಮಪ್ರಭು ಪಾಟೀಲ ಶಾಸಕ
ಪ್ಯಾಷನ್‌ ಅನ್ನು ಪ್ರೊಫೆಷನ್ನಾಗಿ ಆಯ್ದುಕೊಂಡವರು ಎಂದಿಗೂ ಸೋತಿಲ್ಲ. ಗುರಿ ಎಂಬುದು ಬದುಕಿನಲ್ಲಿ ಕಾಲಕಾಲಕ್ಕೆ ಬದಲಾಗುತ್ತದೆ. ಶ್ರದ್ಧೆಯಿಂದ ಪರಿಶ್ರಮಪಟ್ಟರೆ ಗುರಿ ಸಾಕಾರವಾಗುತ್ತದೆ
ರಮೇಶ ಸಂಗಾ ಕರ್ನಾಟಕ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ

‘ಆರೋಗ್ಯ ವಿಮೆ ಒಪಿಎಸ್‌ ಜಾರಿ ವಿಶ್ವಾಸ’

‘ಸರ್ಕಾರಿ ನೌಕರರ ಆರೋಗ್ಯ ವಿಮೆ ಯೋಜನೆ ಬೇಡಿಕೆ ಶೀಘ್ರವೇ ಈಡೇರಲಿದೆ. ಇನ್ನೊಂದು ತಿಂಗಳಲ್ಲಿ ಜಾರಿಗೆ ಬರಲಿದ್ದು ಇದರಿಂದ ಸರ್ಕಾರಿ ನೌಕರರು ಹಾಗೂ ಕುಟುಂಬಸ್ಥರು ಸೇರಿ 25 ಲಕ್ಷ ಮಂದಿಗೆ ನೆರವಾಗಲಿದೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಎನ್‌ಪಿಎಸ್‌– ಒಪಿಎಸ್‌ ಸಮಸ್ಯೆಯೂ ಸಂಘದ ಎದುರಿಗಿದೆ. ಈ ಕುರಿತು ಇನ್ನೊಂದು ಅಂತಿಮ ಸುತ್ತಿನ ಸಭೆ ಬಾಕಿಯಿರುವುದಾಗಿ ಸರ್ಕಾರ ಹೇಳಿದೆ. ಆದಷ್ಟು ಬೇಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಿ ಎನ್‌ಪಿಎಸ್‌ ಯುಪಿಎಸ್‌ ಅಲ್ಲ ಒಪಿಎಸ್‌ ಜಾರಿಗೊಳಿಸಲಾಗುವುದು. ರಾಜ್ಯದ 6 ಲಕ್ಷ ನೌಕರರು ನಿಗಮ–ಮಂಡಳಿ ನೌಕರರು ಸೇರಿಕೊಂಡು ಈ ನಿಟ್ಟಿನಲ್ಲಿ ನಿಶ್ಚಿತ ಗುರಿ ಮುಟ್ಟುವ ವಿಶ್ವಾಸವಿದೆ’ ಎಂದರು.

‘ಸರ್ಕಾರಿ ನೌಕರರು ಆತ್ಮವಂಚನೆ ಮಾಡಿಕೊಳ್ಳದೇ ಸರ್ಕಾರ ಕೊಡುವ ಸಂಬಳಕ್ಕೆ ತಕ್ಕಂತೆ ದುಡಿಯಬೇಕು. ಉತ್ತಮ ಕೆಲಸ ಮಾಡಿ ಸರ್ಕಾರ ಆತ್ಮವಿಶ್ವಾಸ ಹೆಚ್ಚಿಸಬೇಕು. ಅಂಥ ಕೆಲಸ ಭಗವಂತನಿಗೆ ಸಲ್ಲಿಸುವ ಗೌರವವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.