ADVERTISEMENT

ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ತಡೆದ ಸರ್ಕಾರ: 28ರಂದು ವಿದ್ಯಾರ್ಥಿಗಳ ಆಂದೋಲನ

ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ತಡೆದ ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 11:24 IST
Last Updated 23 ನವೆಂಬರ್ 2020, 11:24 IST

ಕಲಬುರ್ಗಿ: ‘ಶಾಲೆ, ಕಾಲೇಜು ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ವಿಳಂಬ, ಅಲ್ಪಸಂಖ್ಯಾತ ಅಭ್ಯರ್ಥಿಗಳ ಫೆಲೋಷಿಪ್‌ಗೆ ನೀಡುವ ‍‍ಪ್ರೋತ್ಸಾಹ ಧನ ಕಡಿತ ಮಾಡಿದ ಸರ್ಕಾರದ ಕ್ರಮ ಖಂಡಿಸಿ ‘ಸ್ಕಾಲರ್‌ಷಿಪ್‌ ಕೊಡಿ’ ರಾಜ್ಯ ವ್ಯಾಪಿ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ನ. 28ರಂದು ಪ್ರತಿಭಟನೆ ನಡೆಸಲಾಗುವುದು’ ಎಂದು ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸದಾಖತ್‌ ಷಾ ತಿಳಿಸಿದರು.

‘ಕೊರೊನಾದಿಂದ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಪೋಷಕರು ಮಕ್ಕಳು ಪ್ರವೇಶ ಶುಲ್ಕ ಕಟ್ಟಲು ಪರದಾಡುವಂತಾಗಿದೆ. ಇನ್ನೊಂದೆಡೆ ಖಾಸಗಿ ಶಿಕ್ಷಣ ಸಂಸ್ಥೆಗಳು ಒಂದೇ ಕಂತಿನಲ್ಲಿ ಎಲ್ಲ ಶುಲ್ಕ ಕಟ್ಟುವಂತೆ ಒತ್ತಾಯಿಸುತ್ತಿವೆ. ಇದರ ಮಧ್ಯೆ ಸರ್ಕಾರದ ಸ್ಕಾಲರ್‌ಷಿಪ್‌ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಇದರಿಂದ ವಿದ್ಯಾರ್ಥಿಗಳ ಬದುಕು ಚಿಂತಾಜನಕವಾಗಿದೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

’ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಶಿಕ್ಷಣ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಪ್ರಿ–ಮೆಟ್ರಿಕ್‌, ಪೋಸ್ಟ್‌ ಮೆಟ್ರಿಕ್‌, ವಿದ್ಯಾಸಿರಿ, ಅರಿವು... ಮುಂತಾದ ಯೋಜನೆಗಳನ್ನು ಪ್ರಕಟಿಸಿದೆ. ಆದರೆ, ಅರ್ಜಿಯನ್ನು ಸಣ್ಣಪುಟ್ಟ ಕಾರಣವೊಡ್ಡಿ ವಿಲೇವಾರಿ ಮಾಡದೇ ಅನೂರ್ಜಿತಗೊಳಿಸಲಾಗುತ್ತಿದೆ. ಇದರಿಂದ ಶಿಷ್ಯವೇತನದಿಂದ ವಂಚನೆ ಮಾಡಲಾಗುತ್ತಿದೆ. ಕೆಲವರಿಗೆ ಮಂಜೂರಾದರೂ ಇದೂವರೆಗೆ ಖಾತೆಗೆ ಹಣ ಜಮೆ ಆಗಿಲ್ಲ. ವಿದ್ಯಾರ್ಥಿಗಳು ಕಲಿಕೆ ಬಿಟ್ಟು ಇಲಾಖೆಯ ಕಚೇರಿಗಳಿಗೆ ಅಲೆಯುವಂತಾಗಿದೆ’ ಎಂದು ಅವರು ಕಿಡಿ ಕಾರಿದರು.

ADVERTISEMENT

‘ಸರ್ಕಾರ ಈ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಲ್ಲ. ರಾಜ್ಯದಲ್ಲಿ 15 ಲಕ್ಷ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಅರ್ಹತೆ ಹೊಂದಿದ್ದಾರೆ. ಆದರೆ, ಇದೂವರೆಗೆ 6 ಲಕ್ಷ ಮಂದಿಗೆ ಮಾತ್ರ ಸಿಕ್ಕಿದೆ. ಉಳಿದವರಲ್ಲಿ ಶೇ 30ರಷ್ಟು ವಿದ್ಯಾರ್ಥಿಗಳನ್ನು ಅನರ್ಹ ಮಾಡಲಾಗಿದೆ’ ಎಂದರು.

‘ನ. 9ರಂದು ಅಲ್ಪಸಂಖ್ಯಾತರ ಇಲಾಖೆಯು ಪಿಎಚ್‌.ಡಿ ಮತ್ತು ಎಂಫಿಲ್‌ ಫೆಲೋಷಿಪ್‌ ನೆರವನ್ನು ಕಡಿತಗೊಳಿಸಿದೆ. ತಿಂಗಳಿಗೆ ತಲಾ ₹ 25 ಸಾವಿರ ಪ್ರತಿ ವಿದ್ಯಾರ್ಥಿಗೆ ಪ್ರೋತ್ಸಾಹ ಧನ ಹಾಗೂ ವಾರ್ಷಿಕ ₹ 10 ಸಾವಿರ ನಿರ್ವಹಣಾ ವೆಚ್ಚ ನೀಡಲಾಗುತ್ತಿತ್ತು. ಸರ್ಕಾರ ಈಗ ದಿಢೀರ್‌ ಆಗಿ ಪ್ರೋತ್ಸಾಹ ಧನವನ್ನು ₹ 10 ಸಾವಿರಕ್ಕೆ ಇಳಿಸಿದ್ದು, ವಾರ್ಷಿಕ ನಿರ್ವಹಣಾ ವೆಚ್ಚವನ್ನು ಸಂಪೂರ್ಣ ಹಿಂಪಡೆದಿದೆ. ಇದು ಉನ್ನತ ವ್ಯಾಸಂಗದ ಕನಸಿಗೆ ಪೆಟ್ಟು ನೀಡಿದೆ’ ಎಂದರು.

‘ಇದು ಸರ್ಕಾರದ ದುರುದ್ದೇಶದ ನಡೆ. ಫೆಲೋಷಿಪ್‌ ಮುಂದುವರಿಸಬೇಕು. ಸ್ಕಾಲರ್‌ಷಿಪ್‌ನಲ್ಲಿ ಉಂಟಾಗಿರುವ ಅವ್ಯವ‌ಸ್ಥೆ ಸರಿಪಡಿಸಬೇಕು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಪಟ್ಟ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದೂ ರಾಜ್ಯವಾ‍ಪಿ ಆಂದೋಲನ ಆಯೋಜಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಸಯ್ಯದ್‌ ಸರ್ಫರಾಜ್‌, ಜಿಲ್ಲಾ ಘಟಕದ ಕಾರ್ಯದರ್ಶಿ ಶೇಖ್‌ ಝಹೀಮ್‌, ಸದಸ್ಯ ಶೇಖ್‌ ತಹಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.