ADVERTISEMENT

ಬೆಲೆ ಏರಿಕೆ ವಿರುದ್ಧ ಮೊಳಗಿದ ಆಕ್ರೋಶ

ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದಿಂದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 13:28 IST
Last Updated 4 ಜುಲೈ 2022, 13:28 IST
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಕಲಬುರಗಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಬೇಕು, ಭ್ರಷ್ಟಾಚಾರ, ನಿರುದ್ಯೋಗ ಹಾಗೂ ಹಣದುಬ್ಬರವನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್‌ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಆರಂಭವಾದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಅಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್‌.ವಿ. ದಿವಾಕರ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುರಾಡಳಿತದಿಂದಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ದವಸ ಧಾನ್ಯಗಳು, ಔಷಧಿಗಳು, ಕಟ್ಟಡ ಸಾಮಗ್ರಿಗಳು, ಪೇಪರ್ ದರ, ವಿದ್ಯುತ್ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಗಳು ಏರಿಕೆಯಾಗಿದೆ. ಕೂಡಲೇ ಬೆಲೆಗಳನ್ನು ನಿಯಂತ್ರಿಸಬೇಕು’ ಎಂದು ಒತ್ತಾಯಿಸಿದರು.

‘ಅಚ್ಛೆ ದಿನಗಳನ್ನು ತರುತ್ತೇವೆಂದು ಅಧಿಕಾರದ ಗದ್ದುಗೆ ಹಿಡಿದು ಈಗ ಕೇವಲ ದೇಶದ ದೊಡ್ಡ ದೊಡ್ಡ ಬಂಡವಾಳಿಗರಿಗಾಗಿ ಹಾಗೂ ಕಾರ್ಪೊರೇಟ್ ಕಂಪನಿಗಳಿಗಾಗಿ ನೀತಿಗಳನ್ನು ತರುತ್ತಿರುವುದನ್ನು ನೋಡಿದರೆ ಸರ್ಕಾರವು ಸಾಮಾನ್ಯ ಜನರನ್ನು ಮರೆತಂತಿದೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳನ್ನು ಕಾಂಗ್ರೆಸ್ ಪಕ್ಷಕ್ಕಿಂತಲೂ ವೇಗವಾಗಿ ತಂದು ಸರ್ಕಾರಿ ಹಾಗೂ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ನೀಡುತ್ತಿರುವುದು ಖಂಡನೀಯ. ಕೊರೊನಾ ಮಹಾಮಾರಿಯಿಂದ ಜನತೆ ತತ್ತರಿಸಿದ್ದಾರೆ. ಅವೈಜ್ಞಾನಿಕ ಹಾಗೂ ಆತುರದ ಲಾಕ್‌ಡೌನ್‌ನಿಂದ ಕೋಟ್ಯಂತರ ಜನರು ಕೆಲಸ ಕಳೆದುಕೊಂಡು ಜನರ ಕೈಯಲ್ಲಿ ದುಡ್ಡಿಲ್ಲದೇ ನಿರ್ಗತಿಕರಾಗಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ದೇಶದಲ್ಲಿ ಹಣದುಬ್ಬರವು ಕಳೆದ 30 ವರ್ಷಗಳಲ್ಲೇ ಅಧಿಕವಾಗಿದೆ. ಸರ್ಕಾರದ ಇಲಾಖೆಗಳಲ್ಲಿ ಲಕ್ಷಾಂತರ ಕಾಯಂ ಉದ್ಯೋಗಗಳನ್ನು ಭರ್ತಿ ಮಾಡದೇ ರಾಜ್ಯದ ಯುವಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಲಾಗುತ್ತಿದೆ. ಕಳೆದ ನಾಲ್ಕು ದಶಕಗಳಲ್ಲೇ ಅತಿ ಹೆಚ್ಚು ನಿರುದ್ಯೋಗದ ಪ್ರಮಾಣ ದಾಖಲಾಗಿದೆ. ಸರ್ಕಾರದ ನೇಮಕಾತಿ ಪ್ರಕ್ರಿಯೆಯು ಕಾಮಗಾರಿಗಳಲ್ಲಿ ಹಾಗೂ ಎಲ್ಲಾ ಇಲಾಖೆಗಳಲ್ಲಿಯೂ ಭ್ರಷ್ಟಾಚಾರ ಹಾಗೂ ಕಮಿಷನ್ ದಂಧೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಹರಿಹಾಯ್ದರು.

‘ದಿನನಿತ್ಯ ಒಂದಲ್ಲ ಒಂದು ಕೋಮು ಭಾವನೆ ಕೆರಳಿಸುವ ವಿವಾದಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವೇ ಗೋಹತ್ಯೆ, ಹಿಜಾಬ್ ವಿಷಯ ಹಾಗೂ ಪಠ್ಯಪುಸ್ತಕಗಳ ತಿರುಚುವಿಕೆ ಹಾಗೂ ವಿರೂಪಗೊಳಿಸುವಂತಹ ಕೋಮು ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ. ಇಂತಹ ಕೋಮುಶಕ್ತಿಗಳಿಗೆ ಆಳುವ ಬಿಜೆಪಿ ಮತ್ತು ಅದರ ಸಂಘ ಪರಿವಾರ ಕುಮ್ಮಕ್ಕು ನೀಡುತ್ತಿವೆ. ಇಂತಹ ವಿಭಜಕ ಕೋಮು ಶಕ್ತಿಗಳಿಗೆ ಕಡಿವಾಣ ಹಾಕಿ, ರಾಜ್ಯದಲ್ಲಿ ಶಾಂತಿ–ಸೌಹಾರ್ದತೆಯನ್ನು ಪುನರ್ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಮುಖಂಡ ಬಿ. ಭಗವಾನ್ ರೆಡ್ಡಿ, ಜಿಲ್ಲಾ ಸಮಿತಿ ಸದಸ್ಯರಾದ ಗಣಪತರಾವ್ ಮಾನೆ, ಎಸ್‌.ಎಂ. ಶರ್ಮಾ, ವಿ.ಜಿ. ದೇಸಾಯಿ, ಮಹೇಶ ಎಸ್‌.ಬಿ, ಹಣಮಂತ ಎಚ್‌.ಎಸ್, ರಾಘವೇಂದ್ರ ಎಂ.ಜಿ, ರಾಧಾ, ಗೌರಮ್ಮ, ಸ್ನೇಹಾ ಕಟ್ಟಿಮನಿ, ಶಿಲ್ಪಾ ಬಿ.ಕೆ, ಸಂದೀಪ್ ಸೇರಿದಂತೆ ಚಿತ್ತಾಪುರ, ಜೇವರ್ಗಿ, ಅಫಜಲಪುರ, ಶಹಾಬಾದ್ ಸೇರಿದಂತೆ ವಿವಿಧ ತಾಲ್ಲೂಕುಗಳಿಂದ ಮಹಿಳೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.