ADVERTISEMENT

ಕಲಬುರ್ಗಿ; ತರಾತುರಿಯಲ್ಲಿ ಚುನಾವಣೆ ಏಕೆ: ಎಸ್‌ಯುಸಿಐ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 5:49 IST
Last Updated 13 ಆಗಸ್ಟ್ 2021, 5:49 IST
ಎಚ್‌.ವಿ.ದಿವಾಕರ್
ಎಚ್‌.ವಿ.ದಿವಾಕರ್   

ಕಲಬುರ್ಗಿ: ಕೋವಿಡ್‌ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಮಹಾನಗರ ಪಾಲಿಕೆ ಚುನಾವಣೆ ನಡೆಸುವ ಅಗತ್ಯವೇನಿದೆ? ಇಷ್ಟು ಕಡಿಮೆ ಅವಧಿಯಲ್ಲಿ ಚುನಾವಣೆ ನಡೆಸಿದರೆ ಜನರ ಭಾಗವಹಿಸುವಿಕೆ ಹೇಗೆ ಸಾಧ್ಯ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್‌.ವಿ. ದಿವಾಕರ್ ಪ್ರಶ್ನಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹಾನಗರ ಪಾಲಿಕೆಯ ಅವಧಿ ಎರಡು ವರ್ಷಗಳ ಹಿಂದೆಯೇ ಮುಗಿದಿದ್ದರೂ ಆಗ ಚುನಾವಣೆ ರಾಜಕೀಯ ಕಾರಣಗಳಿಂದಾಗಿ ವಿಳಂಬವಾದಾಗ ಸುಮ್ಮನಿದ್ದ ಚುನಾವಣಾ ಆಯೋಗ ಈಗ ಕೊರೊನಾ ಉಲ್ಬಣಗೊಳ್ಳುತ್ತಿದ್ದರೂ ಹಟಕ್ಕೆ ಬಿದ್ದವರಂತೆ ಚುನಾವಣೆ ನಡೆಸುವುದನ್ನು ನೋಡಿದರೆ ಆಯೋಗಕ್ಕೆ ಜನರ ಜೀವಕ್ಕಿಂತ ಚುನಾವಣೆ ನಡೆಸುವುದೇ ಆದ್ಯತೆಯಾದಂತಾಗಿದೆ ಎಂದು ಟೀಕಿಸಿದ್ದಾರೆ.

ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ತಜ್ಞರ ಸಲಹೆಯನ್ನು ಧಿಕ್ಕರಿಸಿ ಕೆಲ ರಾಜ್ಯಗಳಲ್ಲಿ ಚುನಾವಣೆ ನಡೆಸಿದಾಗ ಕೊರೊನಾ ವ್ಯಾಪಕವಾಗಿ ಉಲ್ಬಣಗೊಂಡು ಸಾವಿರಾರು ಜನ ಸಾರ್ವಜನಿಕರು ಹಾಗೂ ಚುನಾವಣಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ತಮಿಳುನಾಡು ಹೈಕೋರ್ಟ್‌ ಆಯೋಗಕ್ಕೆ ಛೀಮಾರಿ ಹಾಕಿದ್ದು ಇನ್ನೂ ಹಸಿರಾಗಿದೆ. ಆದರೂ ರಾಜ್ಯದಲ್ಲಿ ಚುನಾವಣೆಯನ್ನು ಅಷ್ಟೊಂದು ತರಾತುರಿಯಲ್ಲಿ ನಡೆಸುತ್ತಿರುವುದೇಕೆ ಎಂದಿದ್ದಾರೆ.

ADVERTISEMENT

ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಆಯೋಗ ಮಹಾನಗರ ಪಾಲಿಕೆ ಚುನಾವಣೆಗಳನ್ನು ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.