ADVERTISEMENT

ಕಬ್ಬಿಗೆ ಅವೈಜ್ಞಾನಿಕ ಬೆಲೆ: ಆ 22ರಂದು ಸಂಸತ್ ಎದುರು ಧರಣಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 13:22 IST
Last Updated 8 ಆಗಸ್ಟ್ 2022, 13:22 IST
ಜಗದೀಶ ಪಾಟೀಲ
ಜಗದೀಶ ಪಾಟೀಲ   

ಕಲಬುರಗಿ: ಕೇಂದ್ರ ಸರ್ಕಾರವು ಕಬ್ಬಿಗೆ ನಿಗದಿ ಪಡಿಸಿದ ಎಫ್‌ಆರ್‌ಪಿ ಬೆಲೆ ಅವೈಜ್ಞಾನಿಕವಾಗಿದ್ದು ಮರು ಪರಿಶೀಲಿಸಬೇಕು. ರಾಜ್ಯ ಸರ್ಕಾರ ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಇದೇ 22ರಂದು ದೆಹಲಿಯ ಸಂಸತ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ಪಾಟೀಲ ರಾಜಾಪುರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಬ್ಬಿನಿಂದ ಸಕ್ಕರೆ ಇಳುವರಿ ಆಧರಿತ ಪರಿಗಣನೆಯ ಪ್ರಮಾಣ ಶೇ 10ರಿಂದ 10.25ರಷ್ಟು ಏರಿಕೆ ಮಾಡಿದೆ. ಇದರಿಂದ ಕಡಿಮೆ ಸಕ್ಕರೆ ಇಳುವರಿ ಬರುವ ರೈತರಿಗೆ ಟನ್‌ಗೆ ₹ 75 ನಿಗದಿಯಾಗಿರುವ ಹಣದಲ್ಲಿ ಕಡಿತವಾಗುತ್ತದೆ. ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆ ಮಾಲೀಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ’ ಎಂದು ಟೀಕಿಸಿದರು.

ಕೇಂದ್ರ ಸರ್ಕಾರಿ ಕಬ್ಬಿನ ಖರೀದಿಗೆ ಬೆಲೆಯನ್ನು ಪ್ರತಿ ಟನ್‌ಗೆ ₹ 3050 ನಿಗದಿ ಮಾಡಿದೆ. ಆದರೆ, ರಾಜ್ಯದಲ್ಲಿ ಇಷ್ಟೊಂದು ದರ ರಾಜ್ಯದಲ್ಲಿ ಸಿಗುವುದೇ ಇಲ್ಲ. ಅಲ್ಲದೇ, ಕಬ್ಬು ಬೆಳೆಯಲು ಅಗತ್ಯವಾದ ಗೊಬ್ಬರದ ಬೆಲೆಯನ್ನು ಏರಿಕೆ ಮಾಡಿದೆ. ಡಿಎಪಿ ಗೊಬ್ಬರದ ಬೆಲೆ ₹ 1050 ಇದ್ದುದು ₹ 1450 ಆಗಿದೆ. ಗೊಬ್ಬರ ಸೇರಿದಂತೆ ಕೃಷಿ ಸಂಬಂಧಿ ವಸ್ತುಗಳನ್ನು ಹೆಚ್ಚಳ ಮಾಡಿ ಕಬ್ಬಿನ ಖರೀದಿ ಬೆಲೆ ಅಲ್ಪ ಏರಿಕೆ ಮಾಡಿದರೆ ಏನು ಉಪಯೋಗ ಎಂದು ಪ್ರಶ್ನಿಸಿದರು.

ADVERTISEMENT

ಕೇಂದ್ರ ಸರಕಾರ ಕೂಡಲೇ ರೈತರ ಖರ್ಚು ವೆಚ್ಚಗಳನ್ನು ಲೆಕ್ಕಹಾಕಿ ನ್ಯಾಯಯುತ ಕಬ್ಬು ದರ ನಿಗದಿಪಡಿಸಬೇಕು. ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ಹೆಚ್ಚುವರಿ ಎಸ್‌ಎಪಿ ಬೆಲೆ ನಿಗದಿ ಮಾಡಬೇಕು. ಕೂಡಲೇ ವೈಜ್ಞಾನಿಕ ಸಮೀಕ್ಷೆ ನಡೆಸಿ ಅತಿವೃಷ್ಟಿ ಬೆಳೆನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಚಿಂಚೋಳಿ, ಕಾಳಗಿ ತಾಲ್ಲೂಕುಗಳಲ್ಲಿ ತೊಗರಿ, ಹೆಸರು, ಉದ್ದು, ಸೋಯಾ ಬೆಳೆ ಅತಿವೃಷ್ಟಿಯಿಂದಾಗಿ ನಾಶವಾಗಿದೆ. ಈ ಬಗ್ಗೆ ಬೆಳೆ ವಿಮಾ ಕಂಪನಿ ಅಧಿಕಾರಿಗಳು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಮೀಕ್ಷೆ ನಡೆಸಬೇಕು. ರೈತರು ದೂರು ಸಲ್ಲಿಸಲು ಯತ್ನಿಸಿದರೆ ಆನ್‌ಲೈನ್‌ನಲ್ಲಿ ದೂರು ದಾಖಲಾಗುತ್ತಿಲ್ಲ ಎಂದು ಆರೋಪಿಸಿದರು.

ಕಳೆದ ಐದು ವರ್ಷಗಳಲ್ಲಿ ಶ್ರೀಮಂತ ಉದ್ಯಮಿಗಳ ₹ 9.60 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಎಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಹೇಳಿಕೆ ಕೊಟ್ಟಿದೆ. ಆದರೆ, ದೇಶದ ರೈತ ಕೊರೊನಾ ಲಾಕ್‌ಡೌನ್ ಸಮಸ್ಯೆಯಿಂದ ಬಳಲಿ ಸಂಕಷ್ಟ ಅನುಭವಿಸುತ್ತಿದ್ದಾನೆ. ಇಂತಹ ಕಷ್ಟ ಕಾಲದಲ್ಲಿ ರೈತರ ಸಾಲ ₹ 5.5 ಲಕ್ಷ ಕೋಟಿ ಮನ್ನಾ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಯಾರ ಪರ ಇದೆ ಎಂದು ಪ್ರಶ್ನಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಬಸವರಾಜ ಅಂಕಲಗಿ, ಜಿಲ್ಲಾ ಕಾರ್ಯದರ್ಶಿ ರಮೇಶ ಹೂಗಾರ, ಜೇವರ್ಗಿ ತಾಲ್ಲೂಕು ಘಟಕದ ಅಧ್ಯಕ್ಷ ಶರಣು ಬಿಲ್ಲಾಡ, ಚಿತ್ತಾಪುರ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಂದ್ರರಾವ್ ದೇಶಮುಖ, ಜಿಲ್ಲಾ ಉಪಾಧ್ಯಕ್ಷರಾದ ಶಾಂತವೀರಪ್ಪ ಕಲಬುರಗಿ, ನರಹರಿ ಪಾಟೀಲ, ರಾಜಶೇಖರ ಪೆದ್ದಿ, ಸದಸ್ಯ ಕರಬಸಪ್ಪ ಉಜ್ಜಾ ಹರಸೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.