ADVERTISEMENT

ಟನ್ ಕಬ್ಬಿಗೆ ₹ 3 ಸಾವಿರ ನೀಡಲು ಒತ್ತಾಯ

ಹವಳಗಾ ರೇಣುಕಾ ಸಕ್ಕರೆ ಕಾರ್ಖಾನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 12:12 IST
Last Updated 3 ಡಿಸೆಂಬರ್ 2019, 12:12 IST
ಪ್ರತಿ ಟನ್ ಕಬ್ಬಿಗೆ ₹2800 ದಿಂದ ₹3000 ವರೆಗೆ ಬೆಲೆ ನಿಗದಿ ಮಾಡಬೇಕು ಎಂದು ಅಫಜಲಪುರ ತಹಶೀಲ್ದಾರ್ ಕಚೇರಿ ಮುಂದೆ ಸಮಾಜ ಸೇವಕ ಜೆ.ಎಂ ಕೊರಬು ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು
ಪ್ರತಿ ಟನ್ ಕಬ್ಬಿಗೆ ₹2800 ದಿಂದ ₹3000 ವರೆಗೆ ಬೆಲೆ ನಿಗದಿ ಮಾಡಬೇಕು ಎಂದು ಅಫಜಲಪುರ ತಹಶೀಲ್ದಾರ್ ಕಚೇರಿ ಮುಂದೆ ಸಮಾಜ ಸೇವಕ ಜೆ.ಎಂ ಕೊರಬು ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು   

ಅಫಜಲಪುರ: ತಾಲ್ಲೂಕಿನ ಹವಳಗಾ ರೇಣುಕಾ ಸಕ್ಕರೆ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ ₹2800 ರಿಂದ ₹3000 ವರೆಗೆ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಸೋಮವಾರ ಇಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಸಮಾಜ ಸೇವಕ ಜೆ.ಎಂ ಕೊರಬು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕೊರಬು ಮಾತನಾಡಿ, ‘ಐದಾರು ವರ್ಷಗಳಿಂದ ರೈತರು ಅತಿವೃಷ್ಠಿ, ಅನಾವೃಷ್ಠಿ, ಬೆಲೆ ಕುಸಿತಗಳಿಂದ ರೈತರಿಗೆ ತುಂಬ ಹಾನಿಯಾಗಿದೆ. ಅದಕ್ಕಾಗಿ ಕಬ್ಬಿಗೆ ಯೋಗ್ಯ ಬೆಲೆ ನೀಡಬೇಕು. ರೈತರು ನೀಡಿದ ಕಬ್ಬಿಗೆ ವಾರದಲ್ಲಿ ಬಿಲ್‌ ಪಾವತಿ ಮಾಡಬೇಕು. ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ತಕ್ಷಣ ಸಭೆ ಕರೆದು ಕಬ್ಬಿಗೆ ಬೆಲೆ ನಿಗದಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ಒಂದು ವಾರದಲ್ಲಿ ತಾಲ್ಲೂಕು ಆಡಳಿತ ಹಾಗೂ ಸಕ್ಕರೆ ಕಾರ್ಖಾನೆಯವರು ಕ್ರಮ ಕೈಗೊಳ್ಳದಿದ್ದರೆ ಕಬ್ಬು ಬೆಳೆಗಾರರೊಂದಿಗೆ ಕಾರ್ಖಾನೆಗೆ ಮುತ್ತಿಗೆ ಹಾಕಲಾಗುವುದು’ ಎಂದರು.

ADVERTISEMENT

‘ಕಬ್ಬಿಗೆ ಬೆಲೆ ನಿಗದಿ ಮಾಡುವ ಕುರಿತು ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಹಕಾರ ಸಚಿವರಿಗೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಕಳುಹಿಸಲಾಗಿದೆ’
ಎಂದು ತಿಳಿಸಿದರು

ತಹಶೀಲ್ದಾರ್ ಮಧ್ವರಾಜ್ ಕೂಡಲಗಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ‘ಬೆಲೆ ನಿಗದಿ ಮಾಡುವ ಕುರಿತು ರೇಣುಕಾ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ ಮಾಹಿತಿ ನೀಡುತ್ತೇನೆ’ ಎಂದರು

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶಿವಪುತ್ರಪ್ಪ ಜಿಡಗಿ, ಸಿದ್ದು ದೊಡ್ಮನೆ ರಮೇಶ್ ಪೂಜಾರಿ, ಕರೆಪ್ಪ ದಿಕ್ಸಂಗಿ, ಸುರೇಶ್ ರಾಖಾ, ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.