ಕಲಬುರ್ಗಿ: ‘ರಸ್ತೆ ಅಪಘಾತದಲ್ಲಿ ಬಲಗೈ ತುಂಡರಿಸಿದ್ದ 19 ವರ್ಷದ ಯುವಕನಿಗೆ ಇಲ್ಲಿನಮಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದೊಂದು ಅಪರೂಪದ ಪ್ರಕರಣ’ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಫಾರೂಖ್ ಮನೂರ ತಿಳಿಸಿದ್ದಾರೆ.
‘ನಗರದ ಸೋನಿಯಾ ಗಾಂಧಿ ಕಾಲೊನಿಯ ನಿವಾಸಿ ಇಸ್ಮಾಯಿಲ್ ವಾಜೀದ್ ಎಂಬ ಯುವಕನಿಗೆ ಅಪಘಾತದಲ್ಲಿ ಮೊಣಕೈ, ತೋಳು, ಭುಜಕ್ಕೆ ತೀವ್ರ ಪೆಟ್ಟುಬಿದ್ದಿತ್ತು. ತೀವ್ರ ರಕ್ತಸ್ರಾವವಾಗಿತ್ತು. ಮನೂರ ಆಸ್ಪತ್ರೆಯ ವೈದ್ಯರ ತಂಡ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಸತತ ಆರು ತಾಸು ಶಸ್ತ್ರಚಿಕಿತ್ಸೆ ನಡೆಸಿತು. ಈಗ ಯುವಕ ಸಂಪೂರ್ಣ ಗುಣಮುಖವಾಗಿದ್ದಾನೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.
‘ಮೊಣಕೈ ಸ್ನಾಯು ತುಂಡರಿಸಿದ ಕಾರಣ ಎಲುಬಿನ ಸ್ಥಿರೀಕರಣಕ್ಕೆ (ಸಾಮಾನ್ಯ ಫ್ಲೆಕ್ಟರ್ ಸ್ನಾಯುವಿನ ದುರಸ್ತಿ) ಒಳಪಡಿಸಲಾಯಿತು. ಹಿಮೋಡೈನಮಿಕ್ ಆಗಿ ಸ್ಥಿರಗೊಳಿಸಿದ ನಂತರ ಯುವಕನ ಮೊಳಕಾಲಿನ ಚರ್ಮ ಲೇಪಿಸಿ ಕಸಿ ಮಾಡಲಾಗಿದೆ’ ಎಂದು ಪ್ಲಾಸ್ಟಿಕ್ ಸರ್ಜನ್ ಡಾ.ಅನೀಲ್ ಮಲ್ಹಾರಿ ಮಾಹಿತಿ ತಿಳಿಸಿದ್ದಾರೆ.
ಡಾ.ಫಾರೂಖ ಅಹ್ಮದ್ ಮನೂರ ಮಾರ್ಗದರ್ಶನದಲ್ಲಿ ಅರಿವಳಿಕೆ ತಜ್ಞ ಡಾ.ಎಸ್.ಕೆ.ಅನಿಲ್, ಪ್ಲಾಸ್ಟಿಕ್ ಸರ್ಜನ್ ಡಾ.ಪವನ್, ಮುಖ್ಯ ಆರ್ಥೊ ಸರ್ಜರಿ ಡಾ.ಎಂ.ಡಿ. ಎಸ್. ಅಹ್ಮದ್, ಅಂಥೋಸ್ಟಿಟ್ ಡಾ.ಶಫಿಯಾ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು. ಡಾ.ಸನಾ, ಡಾ.ಜುಬೇದಾ, ಜನರಲ್ ಮ್ಯಾನೇಜರ್ ರೂಪಾತಾರಾ, ಮ್ಯಾನೇಜರ್ ಸೂರ್ಯ ರೆಡ್ಡಿ ಇದಕ್ಕೆನೆರವಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.