ಕಲಬುರಗಿ: ‘2023ರಲ್ಲಿ ತಾಲ್ಲೂಕಿನ ಶರಣಸಿರಸಗಿಯ ಅಂಬೇಡ್ಕರ್ ನಗರದ ಉದಯಕುಮಾರ ಕಾಳೆ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದವರು ನೀಡಿರುವ ದೂರು ವಾಪಸ್ ಪಡೆಯುವಂತೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ’ ಎಂದು ಸತ್ಯ ಶೋಧನಾ ಸಮಿತಿಯ ಮುಖಂಡರು ಆರೋಪಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡ ಎ.ಬಿ.ಹೊಸಮನಿ, ‘ಲಾಕಪ್‌ಡೆತ್ ಪ್ರಕರಣದಲ್ಲಿ ಐವರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ. ಇದರಿಂದ ವಿಚಲಿತರಾಗಿರುವ ಪೊಲೀಸರು, ಕಾಳೆ ಕುಟುಂಬದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದಾರೆ’ ಎಂದು ದೂರಿದರು.
ಕಾಳೆ ಅವರ ಪತ್ನಿ ಇಮಾಲಾಬಾಯಿ ಕಾಳೆ ಮಾತನಾಡಿ, ‘ಪ್ರಕರಣ ವಾಸಪ್ ಪಡೆಯುವಂತೆ ಪೊಲೀಸರು ಒತ್ತಡ ಹೇರಿದ್ದಾರೆ. ವಾಪಸ್ ಪಡೆಯದಿದ್ದರೆ ನನ್ನ ಮಗನನ್ನು ಅಪರಾಧ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಈಗಾಗಲೇ ಗೃಹ ಸಚಿವರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ’ ಎಂದರು.
ಮುಖಂಡ ಸೂರ್ಯಕಾಂತ ನಿಂಬಾಳ್ಕರ್ ಮಾತನಾಡಿ, ‘ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಪೊಲೀಸರನ್ನು ಅದೇ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕೂಡಲೇ ಅವರನ್ನು ಅಮಾನತುಗೊಳಿಸಬೇಕು. ಸಾಕ್ಷ್ಯನಾಶ ಕಾಯ್ದೆಯಡಿ ಸಿಐಡಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಕಾನೂನು ಎಲ್ಲರಿಗೂ ಒಂದೇ. ಪೊಲೀಸರಿಗೆ ಈ ಪ್ರಕರಣದಲ್ಲಿ ವಿಶೇಷ ವಿನಾಯಿತಿ ಯಾಕೆ ನೀಡಲಾಗುತ್ತಿದೆ? ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಇಲ್ಲದಿದ್ದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.