ADVERTISEMENT

ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ಒತ್ತು: ಬಸವರಾಜ ಮತ್ತಿಮೂಡ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 3:55 IST
Last Updated 28 ಸೆಪ್ಟೆಂಬರ್ 2021, 3:55 IST
ಕಮಲಾಪುರ ತಾಲ್ಲೂಕಿನ ಹೊಳಕುಂದಾ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಚ್ಛತಾ ಪಕ್ವಾಡಾ ಕಾರ್ಯಕ್ರಮಕ್ಕೆ ಶಾಸಕ ಬಸವರಾಜ ಮತ್ತಿಮೂಡ ಅವರು ಕಸ ಕೀಳುವ ಮೂಲಕ ಚಾಲನೆ ನೀಡಿದರು
ಕಮಲಾಪುರ ತಾಲ್ಲೂಕಿನ ಹೊಳಕುಂದಾ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಚ್ಛತಾ ಪಕ್ವಾಡಾ ಕಾರ್ಯಕ್ರಮಕ್ಕೆ ಶಾಸಕ ಬಸವರಾಜ ಮತ್ತಿಮೂಡ ಅವರು ಕಸ ಕೀಳುವ ಮೂಲಕ ಚಾಲನೆ ನೀಡಿದರು   

ಕಲಬುರ್ಗಿ: ‘ಗ್ರಾಮೀಣ ಮತಕ್ಷೇತ್ರದಲ್ಲಿ ಹಲವು ಪುರಾತನ ಕುರುಹುಗಳಿದ್ದು, ಅವುಗಳನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸುವ ಮೂಲಕ ಪ್ರಸಿದ್ಧ ಪ್ರವಾಸಿ ತಾಣ ಮಾಡಲು ಯತ್ನಿಸಲಾಗುವುದು’ ಎಂದು ಶಾಸಕ ಬಸವರಾಜ ಮತ್ತಿಮೂಡ ಹೇಳಿದರು.

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಪ್ರವಾಸೋದ್ಯಮ ಇಲಾಖೆ, ಕಮಲಾಪುರ ತಹಶೀಲ್ದಾರ್‌ ಕಚೇರಿ ಹಾಗೂ ಇನ್‌ಟ್ಯಾಕ್ ಸಹಯೋಗದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಸೋಮವಾರ ಹೊಳಕುಂದಾ ಗ್ರಾಮದಲ್ಲಿ ಸೋಮವಾರ ‘ಸ್ವಚ್ಛತಾ ಪಕ್ವಾಡಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಹೊಳಕುಂದಾದ 15ನೇ ಶತಮಾನದ ಸೂಫಿ ಸಂತರ ಸ್ಮಾರಕಗಳ ಸ್ಥಳ ಅಭಿವೃದ್ಧಿಗೆ ಕಳೆದ ಬಾರಿ ₹ 15 ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿತ್ತು. ಆದರೆ, ಆಡಳಿತದ ಕಾರಣಾಂತರಗಳಿಂದ ಅನುದಾನದ ಕಾರ್ಯ ನೆರವೇರಲಿಲ್ಲ. ಇದೀಗ ಪ್ರವಾಸೋದ್ಯಮ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಆನಂದ ಸಿಂಗ್ ಅವರ ಗಮನಕ್ಕೆ ತಂದು, ಈ ಸ್ಥಳದ ಅಭಿವೃದ್ಧಿಗೆ ₹ 12 ಕೋಟಿ ಮಂಜೂರು ಮಾಡಿಸುವುದಾಗಿ’ ಹೇಳಿದರು.

ADVERTISEMENT

ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ರಿತೇಂದ್ರನಾಥ್ ಸೂಗುರ, ‘ನಗರದಲ್ಲಿ32 ವಿವಿಧ ಐತಿಹಾಸಿಕ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಕೂಡಲೇ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯಕೈಗೊಳ್ಳಲಾಗುವುದು’ ಎಂದರು.

ಇತಿಹಾಸ ತಜ್ಞ ಪ್ರೊ.ಎಸ್.ಎಸ್.ವಾಣಿ ಉಪನ್ಯಾಸ ನೀಡಿದರು. ಹೊಳಕುಂದಾ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಭೀಮಬಾಯಿ ಹಣಮಂತ, ಉಪಾಧ್ಯಕ್ಷ ಶಾಂತವೀರ ಸೂರ್ಯಕಾಂತ, ತಹಶೀಲ್ದಾರ್ ಅಂಜುಮ್ ತಬಸುಮ, ಪ್ರಾವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಪ್ರಭುಲಿಂಗ ಎಸ್.ತಳಕೇರಿ, ಪಿಎಸ್ ಐ ಹುಸೇನ್ ಭಾಷ, ಪ್ರವಾಸಿ ಅಧಿಕಾರಿ ಸಂಜಯ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.