ADVERTISEMENT

ಕಲಬುರಗಿ: ತಾಲ್ಲೂಕು ವಿಸ್ತರಣಾಧಿಕಾರಿ ಆತ್ಮಹತ್ಯೆ

ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿಯಾಗಿದ್ದ ಮೆಹಮೂದ್ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 16:37 IST
Last Updated 5 ನವೆಂಬರ್ 2022, 16:37 IST
ಶರಣಬಸಪ್ಪ
ಶರಣಬಸಪ್ಪ   

ಕಲಬುರಗಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲ್ಲೂಕು ವಿಸ್ತರಣಾಧಿಕಾರಿಯಾಗಿದ್ದ ಶರಣಬಸಪ್ಪ ಪಾಟೀಲ (32) ಅವರು ಗುರುವಾರ ರಾತ್ರಿ ಕೆಎಚ್‌ಬಿ ಗ್ರೀನ್‌ ಪಾರ್ಕ್‌ನ ತಮ್ಮ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇಲಾಖೆಯ ಜಿಲ್ಲಾ ಅಧಿಕಾರಿಯಾಗಿದ್ದ ಮೆಹಮೂದ್ ಅವರ ಕಿರುಕುಳವೇ ಕಾರಣ ಎಂದು ಅವರ ಸಹೋದರ ಪಂಡಿತರಾವ್ ಪಾಟೀಲ ಪೊಲೀಸರಿಗೆ ದೂರು ನೀಡಿದ್ದಾರೆ.

ಆಳಂದ ತಾಲ್ಲೂಕಿನ ಖಂಡಾಳ ಗ್ರಾಮದ ಶರಣಬಸಪ್ಪ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದರು. ಇತ್ತೀಚೆಗೆ ತಾಲ್ಲೂಕು ವಿಸ್ತೀರ್ಣಾಧಿಕಾರಿಯಾಗಿ ನೇಮಕಗೊಂಡಿದ್ದರು. ಡಿಸೆಂಬರ್ 2ರಂದು ಅವರ ಮದುವೆ ನಿಶ್ಚಯವಾಗಿತ್ತು. ಮದುವೆ ಸಿದ್ಧತೆಯಲ್ಲಿ ಇರುವಾಗಲೇ ಆತ್ಮಹತ್ಯೆಗೆ ಮೊರೆ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ (ಪ್ರಸ್ತುತ ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ) ಮೆಹಮೂದ್ ಅವರು ಹುಡುಗರನ್ನು ಕಳುಹಿಸಿ ಜೀವ ಬೆದರಿಕೆ ಹಾಕಿದ್ದರ ಬಗ್ಗೆ ಮನೆಯಲ್ಲಿ ತಿಳಿಸಿದ್ದರು. ವೈಯಕ್ತಿಕ ದ್ವೇಷ ಸಾಧಿಸಿದ ಅಧಿಕಾರಿ ಬಡ್ತಿಯನ್ನು ತಡೆ ಹಿಡಿದು, ಒಂದು ವರ್ಷದ ಸಂಬಳವನ್ನು ಬಿಡುಗಡೆ ಮಾಡಿರಲಿಲ್ಲ. ಆಗಾಗ ವಿನಾಕಾರಣ ಕರೆ ಮಾಡಿ ತೊಂದರೆ ಕೊಡುತ್ತಿದ್ದರು. ಹೀಗಾಗಿ, ಮಾನಸಿಕ ವೇದನೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ರಾಘವೇಂದ್ರ ನಗರ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಪಂಡಿತರಾವ್ ಆರೋಪಿಸಿದ್ದಾರೆ.

ADVERTISEMENT

ಎರಡೂವರೆ ತಿಂಗಳು ಗೈರು: ಆತ್ಮಹತ್ಯೆ ಮಾಡಿಕೊಂಡ ಶರಣಬಸಪ್ಪ ಪಾಟೀಲ ಅವರು 2021ರ ಆಗಸ್ಟ್ 24ರಿಂದ ನವೆಂಬರ್ 5ರವರೆಗೆ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗಿದ್ದರು. 2022ರ ಜನವರಿ 1ರಂದು ಕರ್ತವ್ಯಕ್ಕೆ ಹಾಜರಾಗಿದ್ದ ಶರಣಬಸಪ್ಪ ಪುನಃ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಜನವರಿ 21ರಿಂದ ಎರಡು ತಿಂಗಳ ಕಾಲ ಮತ್ತೆ ಪರಿವರ್ತಿತ ರಜೆ ಮಂಜೂರಾತಿ ನೀಡುವಂತೆ ಕೋರಿದ್ದರು. ಆದರೆ, ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸದೇ ಇದ್ದುದರಿಂದ ರಜೆ ಮಂಜೂರಾತಿ ನೀಡಿಲ್ಲ ಎಂದು ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ಮೆಹಮೂದ್ ಅವರು ಇಲಾಖೆಯ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

‘ಶರಣಬಸಪ್ಪ ನನ್ನೊಂದಿಗೆ ಅಗೌರವದಿಂದ ನಡೆದುಕೊಂಡಿದ್ದಲ್ಲದೇ ಸುಳ್ಳು ಆರೋಪ ಮಾಡುವ ಮೂಲಕ ವೈಯಕ್ತಿಕ ದ್ವೇಷ ಸಾಧಿಸಿದ್ದಾರೆ’ ಎಂದು ಮಾರ್ಚ್ 16ರಂದು ಬರೆದ ಪತ್ರದಲ್ಲಿ ವಿವರಿಸಿದ್ದಾರೆ. ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಸಾಯುತ್ತೇನೆಂದು ಸ್ಟೇಟಸ್ ಇಟ್ಟಿದ್ದ ಅಧಿಕಾರಿ
ಕೆಲ ತಿಂಗಳ ಹಿಂದೆ ತಾನು ಸಾಯುತ್ತೇನೆ ಎಂದು ಶರಣಬಸಪ್ಪ ತಮ್ಮ ವಾಟ್ಸ್‌ ಆ್ಯಪ್‌ನಲ್ಲಿ ಸ್ಟೇಟಸ್ ಇಟ್ಟುಕೊಂಡಿದ್ದರು ಎಂದು ಅವರ ಕುಟುಂಬದ ಆಪ್ತರೊಬ್ಬರು ತಿಳಿಸಿದ್ದಾರೆ.

ಇದನ್ನು ನೋಡಿ ಹಲವರು ಬುದ್ಧಿ ಹೇಳಿದ್ದರು. ಗುರುವಾರ ರಾತ್ರಿ ಏಕಾಏಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿಯಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ಒಬ್ಬರೇ ಇರುತ್ತಿದ್ದರು ಎಂದು ಗೊತ್ತಾಗಿದೆ.

*

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ವರ್ಗಾವಣೆಯಾಗಿ ಬಿಸಿಎಂ ಇಲಾಖೆಗೆ ಬಂದು ಐದು ತಿಂಗಳಾಗಿವೆ. ಈಗ ಕಿರುಕುಳ ಆರೋಪ ಮಾಡಿರುವುದು ಅಚ್ಚರಿಯಾಗಿದೆ. ಇಲಾಖೆಯಲ್ಲಿದ್ದಾಗ ನಾನು ಯಾವುದೇ ಕಿರುಕುಳ ನೀಡಿಲ್ಲ.
–ಮೆಹಮೂದ್,ಜಿಲ್ಲಾ ಬಿಸಿಎಂ ಅಧಿಕಾರಿ

*

ಮೃತ ಶರಣಬಸಪ್ಪ ಸಹೋದರ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆರೋಪಿ ಅಧಿಕಾರಿ ಊರಲ್ಲಿಲ್ಲ. ಬಂದ ಬಳಿಕ ವಿಚಾರಣೆ ನಡೆಸುತ್ತೇವೆ.
–ಶಿವಾನಂದ ಘಾಣಿಗೇರ,ಪೊಲೀಸ್ ಇನ್‌ಸ್ಪೆಕ್ಟರ್, ರಾಘವೇಂದ್ರ ನಗರ ಠಾಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.