ADVERTISEMENT

ಶಿಕ್ಷಣ ಸಂಸ್ಥೆ ಮುಖ್ಯಸ್ಥ ಆತ್ಮಹತ್ಯೆ: ತೀವ್ರ ಆಕ್ರೋಶ

ಸಾವಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 2:45 IST
Last Updated 27 ಫೆಬ್ರುವರಿ 2021, 2:45 IST
ಶಿಕ್ಷಣ ಸಂಸ್ಥೆ ಮುಖ್ಯಸ್ಥ ಶಂಕರ ಬಿರಾದಾರ ಅವರ ಸಾವಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು
ಶಿಕ್ಷಣ ಸಂಸ್ಥೆ ಮುಖ್ಯಸ್ಥ ಶಂಕರ ಬಿರಾದಾರ ಅವರ ಸಾವಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ಸಾಲ ಬಾಧೆ ತಾಳದೇಸೇಡಂನವಿಶ್ವಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರ ಬಿರಾದರ (49) ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಮುಖಂಡರು ಶುಕ್ರವಾರ ಉಗ್ರ ಪ್ರತಿಭಟನೆ ಮಾಡಿದರು.

ತಮ್ಮ ಶಾಲೆಗಳನ್ನು ಬಂದ್‌ ಮಾಡಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ವಿವಿಧ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮುಖಂಡರು ಹಾಗೂ ಶಿಕ್ಷಕರು ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ‘ಶಂಕರ ಬಿರಾದಾರ ಅವರ ಸಾವಿಗೆ ಮುಖ್ಯಮಂತ್ರಿ ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶಕುಮಾರ ಅವರ ನಿರ್ಲಕ್ಷ್ಯ ಧೋರಣೆ ಕಾರಣ. ನಮ್ಮ ಹೆಣಗಳನ್ನು ಹೂಳುವುದಕ್ಕಾದರೂ ಸಹಾಯ ಮಾಡಿ’ ಎಂದು ಘೋಷಣೆ ಆಕ್ರೋಶ ಹೊರಹಾಕಿದರು.

ಸಾಮೂಹಿಕವಾಗಿ ಪದೇಪದೇ ಬೊಬ್ಬೆ ಹೊಡೆದು ತಮ್ಮ ಅಳಲು ತೋಡಿಕೊಂಡರು.

ADVERTISEMENT

‘ಸೇಡಂನಲ್ಲಿ ಶಿಕ್ಷಣ ಸಂಸ್ಥೆ ತೆರೆದ ಶಂಕರ ಬಿರಾದಾರ ಅವರು ಇಷ್ಟು ದಿನ ಹೇಗೋ ನಡೆಸಿಕೊಂಡು ಬಂದಿದ್ದರು. ಆದರೆ, ಲಾಕ್‌ಡೌನ್‌ ಕಾರಣ ಎಲ್ಲ ಸಂಸ್ಥೆಗಳೂ ಹಾನಿಗೊಳಗಾಗಿವೆ. ಆದರೆ, ಸರ್ಕಾರ ಶಿಕ್ಷಕರಿಗೆ ಸಂಬಳವನ್ನೂ ಕೊಡಬೇಕು, ಮಕ್ಕಳ ಶುಲ್ಕವನ್ನೂ ವಸೂಲಿ ಮಾಡಬಾರದು ಎಂಬ ನಿಯಮ ಮಾಡಿದೆ. ಸಂಸ್ಥೆ ನಡೆಸುವ ಸಲುವಾಗಿ ಅವರು ₹ 3 ಕೋಟಿ ಸಾಲ ಮಾಡಿದ್ದಾರೆ. ಅದನ್ನು ಮರುಪಾವತಿ ಮಾಡಿಸಲು ಬ್ಯಾಂಕಿನವರು ಪದೇಪದೇ ಕಿರುಕುಳ ನೀಡಿದ್ದಾರೆ. ಸ್ವಾಭಿಮಾನಿ ಆಗಿದ್ದ ಶಂಕರ ಅವರು, ಕಿರುಕುಳ ತಾಳದೇ ವಿಷ ಕುಡಿದರು. ಅವರ ಹಿಂದೆಯೇ ಇನ್ನೂ ಹಲವರು ಸಾವಿಗೆ ಶರಣಾಗುವ ಹಂತ ತಲುಪಿದ್ದಾರೆ. ಇಷ್ಟಾದರೂ ಸರ್ಕಾರ ಕಣ್ಣು ತೆರೆಯುತ್ತಿಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಸುನೀಲ ಹುಡಗಿ ಆಕ್ರೋಶ ಹೊರಹಾಕಿದರು.

‘ಶಂಕರ ಅವರಿಗೆ ಕಿರುಕುಳ ನೀಡಿದ ಲೇವಾದೇವಿ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಬೇಕು. ಹಣ ವಸೂಲಿಗೆ ಬೆದರಿಕೆ ಹಾಕಿದವರನ್ನು ಬಂಧಿಸಬೇಕು. ಅವರ ಶಾಲಾ ವಾಹನವನ್ನು ಅತ್ಯಂತ ಕಡಿಮೆ ಬೆಲೆಗೆ ಹರಾಜು ಹಾಕಿದವರ ಮೇಲೂ ಕ್ರಮ ಕೈಗೊಳ್ಳಬೇಕು. ಕುಟುಂಬದವರಿಗೆ ₹ 50 ಲಕ್ಷ ಪರಿಹಾರ ಕೊಡಬೇಕು’ ಎಂದೂ ಆಗ್ರಹಿಸಿದರು.

‘ಪ್ರಸಕ್ತ ವರ್ಷ ಶಾಲೆಗಳು ಆರಂಭವಾಗದ ಕಾರಣ ಶಾಲೆಗಳ ಮೇಲಿನ ಸಾಲ ಹಾಗೂ ವಾಹನಗಳ ಮೇಲಿನ ಸಾಲದ ಕಂತುಗಳನ್ನು ಕಟ್ಟಲು ಮುಂದಿನ ಶೈಕ್ಷಣಿಕ ವರ್ಷದವರೆಗೆ ಅವಕಾಶ ನೀಡಬೇಕು. ಸಾಲ ವಸೂಲಿಗೆ ಗೂಂಡಾಗಳನ್ನು ಬಿಟ್ಟು ಬೆದರಿಕೆ ಹಾಕಿ, ಕಿರುಕುಳ ನೀಡುವ ಹಣಕಾಸು ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಬೇಕು. ಶಾಲೆಗಳ ನವೀಕರಣಕ್ಕೆ ನಿಯಮಗಳನ್ನು ಸಡಿಲಿಸಬೇಕು. ಪ್ರಸಕ್ತ ಸಾಲಿನ ಆರ್‌ಟಿಇ ಹಣವನ್ನು ಕೂಡಲೇ ಪಾವತಿಸಬೇಕು. 1ನೇ ತರಗತಿಯಿಂದ ಎಸ್ಸೆಸ್ಸೆಲ್ಸಿಯವರೆಗೆ ಎಲ್ಲ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಬೇಕು’ ಎಂದರು.

ಒಕ್ಕೂಟದ ವಿವಿಧ ಘಟಕಗಳ ಅಧ್ಯಕ್ಷರಾದ ಸಾಹೇಬಗೌಡ ಪುರದಾಳ, ಬಿ.ಜಿ. ಯಾಳಗಿ, ಶಿವಕುಮಾರ ಘಾವರಿಯಾ, ಚನ್ನಬಸಪ್ಪ ಗಾರಂಪಳ್ಳಿ, ವಿಜಯಕುಮಾರ ಸೂರವಾರ, ಭೀಮಶೆಟ್ಟಿ ಮುರುಡಾ, ಸಿದ್ದಾರೆಡ್ಡಿ, ಬಾಬುರಾವ್ ಸುಳ್ಳದ, ಮಹ್ಮದ್‌ ಇಬ್ರಾಹಿಂ ಪಟೇಲ್, ಗೊಲ್ಲಾಳಪ್ಪ ಬಿರಾದಾರ, ರಾಜಶೇಖರ ಮರಡಿ, ಮಹೇಶ ಧರಿ ಇದ್ದರು.

box-1

ಸುಸ್ತಾದ ನಮೋಶಿ, ಸ್ಥಳಕ್ಕೆ ಬಾರದ ಡಿ.ಸಿ

ಮನವಿ ಪಡೆಯಲು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಮೊಳಗಿಸಿದರು.

ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಒಂದು ತಾಸಿನ ನಂತರ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ ಅವರು, ‘ಜಿಲ್ಲಾಧಿಕಾರಿ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ನಾನೇ ಬಂದಿದ್ದೇನೆ’ ಎಂದು ಹೇಳಿ ಮನವಿ ಪಡೆದರು.

ಬಳಿಕ ಸ್ಥಳಕ್ಕೆ ಬಂದ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಪ್ರತಿಭಟನಾಕಾರರ ಅಳಲು ಆಲಿಸಿದರು. ಇದರ ಮಧ್ಯೆಯೇ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಸುಂಬಡ ಅವರು ನಮೋಶಿ ಅವರು ಎದುರಲ್ಲೇ ಕ್ರಿಮಿನಾಶಕ ಕುಡಿದರು. ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಯುತು,

ಬಿಸಿಲಿನ ಝಳಕ್ಕೆ ತಲೆಸುತ್ತು ಬಂದು ಸುಸ್ತಾದ ನಮೋಶಿ. ಮರದಡಿ ಹೋಗಿ ನರಳಿನ ಆಸರೆ ಪಡೆದರು. ಜೊತೆಗಿದ್ದವರು ಅವರನ್ನು ಕಾರಿನಲ್ಲಿ ವಿಶ್ರಾಂತಿಗಾಗಿ ಕರೆದೊಯ್ದರು.

ನಂತರ ಪ್ರತಿಭಟನಾಕಾರರು ಸ್ಥಳದಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.