ADVERTISEMENT

ದಿನವಿಡೀ ಸಂಚಾರ ಸ್ಥಗಿತ: ಕಮಲಾನಗರ-ಬೋಧನ ಮಧ್ಯದ ಸೇತುವೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 13:26 IST
Last Updated 21 ಸೆಪ್ಟೆಂಬರ್ 2025, 13:26 IST

ಆಳಂದ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಬೋಧನ -ಕಮಲಾನಗರ ಗ್ರಾಮದ ಮಧ್ಯದ ಸೇತುವೆ ಮೇಲಿಂದ ನೀರು ತುಂಬಿ ಹರಿಯುತ್ತಿರುವ ಪ್ರಮಾಣ ಹೆಚ್ಚಿದ್ದು, ಮುಖ್ಯ ರಸ್ತೆ ಸಂಚಾರವು ಭಾನುವಾರ ದಿನವಿಡೀ ಸ್ಥಗಿತಗೊಂಡಿದೆ.

ಕಲಬುರಗಿ, ಬಸವ ಕಲ್ಯಾಣ, ನರೋಣಾ, ವಿಕೆ ಸಲಗರ, ಚಿಂಚನಸೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿನ ವಿವಿಧ ಗ್ರಾಮಗಳಲ್ಲಿನ ಜನರು ಪರದಾಡಿದರು. ನೆರೆಯ ಮಹಾರಾಷ್ಟ್ರದ ಬೆಣ್ಣೆತೋರಾ ನದಿಯ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಿಂದ ಕಳೆದ ನಾಲ್ಕು ದಿನಗಳಿಂದ ಹಳ್ಳಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಕಮಲಾನಗರ -ಬೋಧನ ಗ್ರಾಮದ ದೇವಸ್ಥಾನದಲ್ಲಿ ಪ್ರಯಾಣಿಕರು ನೀರಿನ ಪ್ರವಾಹ ಕಡಿಮೆಯಾದರೆ ತಮ್ಮ ಮನೆಗಳಿಗೆ ತೆರಳಲು ಕಾದುಕುಳಿತ್ತಿದ್ದಾರೆ. ಸುತ್ತಲಿನ ರೈತರ ಹೊಲ ಗದ್ದೆಗಳಲ್ಲಿನ ಕಬ್ಬು, ಬಾಳೆ, ತೊಗರಿ, ಸೋಯಾಬಿನ್ ಬೆಳೆಯೂ ಸಂಪೂರ್ಣ ಜಲಾವೃತವಾಗಿವೆ.

ಮಹಾಲಯ ಅಮಾವಾಸ್ಯೆ ನಿಮಿತ್ತ ತುಳಜಾಪುರ, ಹುಮನಾಬಾದ್, ಗುರಣಾಪುರ, ಬಸವಣ್ಣ ಸಂಗೋಳಗಿ ಗ್ರಾಮಗಳಿಗೆ ತೆರಳಿದ ಭಕ್ತರು ಸ್ವಗ್ರಾಮಕ್ಕೆ ತಲುಪಲು ಬೋಧನ ಗ್ರಾಮದ ದೇವಸ್ಥಾನದಲ್ಲಿ ಬೀಡು ಬಿಟ್ಟಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.