ಕಲಬುರಗಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಪರಸ್ಪರ ಸುಂಕ ನೀತಿ’ ದೀರ್ಘಾವಧಿಗಿಂತ ಹೆಚ್ಚು ಅಲ್ಪಾವಧಿಯ ಪರಿಣಾಮವನ್ನು ಬೀರುತ್ತದೆ ಮತ್ತು ಇದು ಆರ್ಥಿಕಕ್ಕಿಂತ ರಾಜಕೀಯ ಪ್ರೇರಿತವಾಗಿದೆ ಎಂದು ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಹೇಳಿದರು.
ಸಿಯುಕೆಯ ವ್ಯವಹಾರ ಅಧ್ಯಯನ ವಿಭಾಗವು ಮಂಗಳವಾರ ಆಯೋಜಿಸಿದ್ದ ‘ರಕ್ಷಣಾವಾದದ ರಾಜಕೀಯ: ಟ್ರಂಪ್‍ರ ಸುಂಕಗಳು ಭಾರತೀಯ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ?’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ‘ಅಮೆರಿಕದ ಆಮದಿನಲ್ಲಿ ಭಾರತದ ಪಾಲು ಕೇವಲ ಶೇ 2.8ರಷ್ಟು. ಅಮೆರಿಕವು ಭಾರತದೊಂದಿಗೆ ಕನಿಷ್ಠ ವ್ಯಾಪಾರ ಕೊರತೆಯನ್ನು ಹೊಂದಿದೆ. ಭಾರತದ ದೇಶೀಯ ಮಾರುಕಟ್ಟೆ ತುಂಬಾ ಪ್ರಬಲವಾಗಿರುವುದರಿಂದ, ಗ್ರಾಹಕರ ವಿಶ್ವಾಸ ಸೂಚ್ಯಂಕ ಉತ್ತಮವಾಗಿರುವುದು ಮತ್ತು ಜಿಎಸ್‍ಟಿ ದರಗಳಲ್ಲಿನ ಕಡಿತವು ಭಾರತವು ಅಮೆರಿಕದ ಸುಂಕದ ಆಘಾತಗಳನ್ನು ತಡೆದುಕೊಳ್ಳಲು ಸಹಾಯ ಮಾಡುತ್ತದೆ’ ಎಂದರು.
ಸಿಯುಕೆ ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಮೊಹಮ್ಮದ್ ಜೋಹೇರ್ ಮಾತನಾಡಿ, ‘ಅಭಿವೃದ್ಧಿಶೀಲ ರಾಷ್ಟ್ರಗಳು ಜಾಗತೀಕರಣ ನೀತಿಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಲಾಯಿತು. ಕಳೆದ ಮೂರು ದಶಕಗಳಲ್ಲಿ ಉದಾರೀಕರಣದ ಬಗ್ಗೆ ಪ್ರತಿಪಾದಿಸಿದವರು ಈಗ ಅಸಮಾನ ಸುಂಕ ದರಗಳ ಮೂಲಕ ಸುಂಕದ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ ಮತ್ತು ತಮ್ಮ ದೇಶಗಳ ಹಿತಾಸಕ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಟ್ರಂಪ್ ಅವರ ‘ಪರಸ್ಪರ ಸುಂಕ ನೀತಿ’ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಹೇಳಿದರು.
ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್‍ನ ಡೀನ್ ಪ್ರೊ. ಪಾಂಡುರಂಗ ವಿ.ಪತ್ತಿ ಮಾತನಾಡಿದರು.
ಕಾರ್ಯಕ್ರಮದ ಸಂಯೋಜಕಿ ಶ್ರೀಲಕ್ಷ್ಮಿ ಸ್ವಾಗತಿಸಿದರು. ಪರೋಮಿತ್ ರಾಯ್ ಮತ್ತು ಸೊಹೈಲ್ ಶೇಖ್ ನಿರೂಪಿಸಿದರು. ಗೀತಿಕಾ ವಂದಿಸಿದರು.
ಎ.ಎನ್.ವಿಜಯಕುಮಾರ್, ಗಣಪತಿ ಬಿ.ಸಿನ್ನೂರ, ಸುಷ್ಮಾ, ಸಫಿಯಾ ಪರ್ವೀನ್, ಶಿವಕುಮಾರ ಬೆಳ್ಳಿ, ಸುಮಾ ಸ್ಕಾರಿಯಾ, ಜೈಪಾಲ್, ಡಾ.ವಾಣಿ, ಕವಿತಾ ಸಂಗೋಳಗಿ, ವ್ಯಾಪಾರ ಅಧ್ಯಯನ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.