ಕಲಬುರಗಿ: ಬದಲಾದ ಆಹಾರ ಪದ್ಧತಿ ಸಿರಿಧಾನ್ಯಗಳಿಗೆ ಬೇಡಿಕೆ ಕುಸಿಯುವಂತೆ ಮಾಡಿದೆ. ಬಹುಕಾಲ ಪಾರಂಪರಿಕ ಆಹಾರ ಪದ್ಧತಿಯನ್ನೇ ನೆಚ್ಚಿಕೊಂಡಿದ್ದ ಜಿಲ್ಲೆಯ ಗ್ರಾಮೀಣರೂ ಈಗ ಸಿರಿಧಾನ್ಯಗಳನ್ನು ಮರೆಯುತ್ತಿದ್ದಾರೆ.
ಜಿಲ್ಲೆ ಕಡಿಮೆ ನೀರಾವರಿ ಪ್ರದೇಶ ಹೊಂದಿದ್ದರೂ ರೈತರು ಸಿರಿಧಾನ್ಯ ಕೃಷಿ ಕಡೆ ಮುಖ ಮಾಡದಿರುವುದೇ ಇದಕ್ಕೆ ನಿದರ್ಶನ. ಮಾರುಕಟ್ಟೆ ಹಾಗೂ ಸಂಸ್ಕರಣಾ ಘಟಕಗಳ ಕೊರತೆಯೂ ಇದಕ್ಕೆ ಕಾರಣ.
ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಭೂಮಿ ಮಾತ್ರ ನೀರಾವರಿಗೆ ಒಳಪಟ್ಟಿದೆ. ಕೇವಲ ಅಫಜಲಪುರ ಹಾಗೂ ಜೇವರ್ಗಿ ತಾಲ್ಲೂಕುಗಳು ನೀರಾವರಿ ಸೌಲಭ್ಯ ಹೊಂದಿವೆ. ಜಿಲ್ಲೆಯ ಒಟ್ಟು 10 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ ನೀರಿನ ಕೊರತೆಯಿಂದಾಗಿ 8.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವರ್ಷಕ್ಕೆ ಒಂದೇ ಬೆಳೆ ಬೆಳೆಯಲಾಗುತ್ತದೆ.
ಇಲ್ಲಿಯ ರೈತರು ತೊಗರಿ ಹಾಗೂ ಕಡಲೆ ಬೆಳೆಗೆ ಒಗ್ಗಿಕೊಂಡಿದ್ದಾರೆ. ಅದೂ ಮಾನ್ಸೂನ್ ಜೊತೆಗಿನ ಜೂಜಾಟದಂತಾಗಿದೆ. ಇದರ ನಡುವೆಯೂ ಅನಿವಾರ್ಯ ಕಾರಣಗಳಿಗಾಗಿ ಅಲ್ಲಲ್ಲಿ ಸಿರಿಧಾನ್ಯಗಳಾದ ಜೋಳ, ಸಜ್ಜೆ ಹಾಗೂ ನವಣೆ ಬೆಳೆಯಲಾಗುತ್ತದೆ.
ಜಿಲ್ಲೆಯಲ್ಲಿ 58,609 ಹೆಕ್ಟೇರ್ ಪ್ರದೇಶದಲ್ಲಿ ಜೋಳ, 333 ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ ಹಾಗೂ 210 ಹೆಕ್ಟೇರ್ ಪ್ರದೇಶದಲ್ಲಿ ನವಣೆ ಬೆಳೆಯಲಾಗುತ್ತದೆ. ವರ್ಷಕ್ಕೆ 70,661 ಟನ್ ಜೋಳ, 396 ಟನ್ ಸಜ್ಜೆ ಹಾಗೂ 72 ಟನ್ ನವಣೆ ಉತ್ಪಾದಿಸಲಾಗುತ್ತಿದೆ.
ಸರ್ಕಾರ ಸಿರಿಧಾನ್ಯ ಕೃಷಿ ಪ‍್ರೋತ್ಸಾಹಿಸುವ ಸಲುವಾಗಿ 2020–21ನೇ ಸಾಲಿನಲ್ಲಿ ರೈತಸಿರಿ ಯೋಜನೆ ಜಾರಿ ಮಾಡಿತ್ತು. ಯೋಜನೆಯಡಿ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ಪ್ರತಿ ಹೆಕ್ಟೇರ್‌ಗೆ ₹10,000 ಪ್ರೋತ್ಸಾಹ ಧನ ನೀಡುತ್ತಿತ್ತು. ಈಗ ಅದೂ ನಿಲ್ಲುವ ಹಂತ ತಲುಪಿದೆ ಎಂದು ರೈತರು ಆರೋಪಿಸುತ್ತಾರೆ.
ಬೇಳೆ ಕಾಳುಗಳು ಮತ್ತು ಸಿರಿಧಾನ್ಯಗಳ ಧಾರಣೆಯಲ್ಲಿ ಅಂತರ, ಮಾರುಕಟ್ಟೆ ಮತ್ತು ಮೌಲ್ಯವರ್ಧನೆಗೆ ಬೇಕಾದ ಸೌಲಭ್ಯಗಳ ಕೊರತೆಯಿಂದಾಗಿ ಸಿರಿಧಾನ್ಯ ಕೃಷಿ ಕ್ಷೇತ್ರ ಹೆಚ್ಚುತ್ತಿಲ್ಲ. ಆದ ಕಾರಣ ಜಿಲ್ಲೆಯಲ್ಲಿ ಕಡಿಮೆ ಫಲವತ್ತತೆಯ ಭೂಮಿ ಪಾಳು ಬಿದ್ದಿದೆ.
ಒಂದೇ ಸರ್ಕಾರಿ ಸಂಸ್ಕರಣಾ ಘಟಕ: ಜಿಲ್ಲೆಯಲ್ಲಿ ಒಂದು ಸರ್ಕಾರಿ ಹಾಗೂ ಒಂದು ಖಾಸಗಿ ಸಂಸ್ಕರಣಾ ಘಟಕ ಇದೆ. ನಗರದ ಆಳಂದ ರಸ್ತೆಯಲ್ಲಿರುವ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಒಂದು ಹಾಗೂ ನಂದೂರ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಮಾಲೀಕತ್ವದ ಬಹುಧಾನ್ಯ ಸಂಸ್ಕರಣಾ ಘಟಕ ಇದೆ. ಕಪನೂರ ಕೈಗಾರಿಕಾ ಪ್ರದೇಶದಲ್ಲಿ ಇದ್ದ ಘಟಕ ಈಗ ಕಾರ್ಯನಿರ್ವಹಿಸುತ್ತಿಲ್ಲ.
‘ಕಲಬುರಗಿ ನಗರದ ಘಟಕಗಳಿಗೆ ಉತ್ಪನ್ನ ತರಲು ಸಾಗಣೆ ವೆಚ್ಚ ತಗಲುತ್ತದೆ. ಎರಡೇ ಘಟಕಗಳಿರುವ ಕಾರಣ ಸಂಸ್ಕರಣೆಗೆ ಕಾಯಬೇಕಾಗುತ್ತದೆ. ಆದ್ದರಿಂದ ಸಿರಿಧಾನ್ಯ ಹೆಚ್ಚು ಬೆಳೆಯುವ ತಾಲ್ಲೂಕುಗಳಲ್ಲಿಯೂ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು. ಅನುಕೂಲ ಮಾಡಿಕೊಡಬೇಕು’ ಎಂದು ರೈತರು ಒತ್ತಾಯಿಸುತ್ತಾರೆ.
‘ಮೌಲ್ಯವರ್ಧನೆ ತರಬೇತಿ ಅಗತ್ಯ’: ‘ಸಿರಿಧಾನ್ಯಗಳನ್ನು ಬಳಸಿಕೊಂಡು ಮೌಲ್ಯವರ್ಧಿತ ಉತ್ಪನ್ನ ತಯಾರಿಸದಿದ್ದರೆ ರೈತರಿಗೆ ಲಾಭ ದೂರದ ಮಾತು. ಅದಕ್ಕೆ ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಯುವವರಿಗೆ ತರಬೇತಿ ನೀಡಬೇಕು. ಕೃಷಿ ಇಲಾಖೆಯು ಇದಕ್ಕೆ ವೇಗ ನೀಡಬೇಕು. ತರಬೇತಿ ಪಡೆದವರು ತಿಂಡಿ–ತಿನಿಸು, ಮಾಲ್ಟ್‌ನಂಥ ಉತ್ಪನ್ನಗಳನ್ನು ತಯಾರಿಸಿ ಪೊಟ್ಟಣ ಮಾಡಿ ಮಾರಾಟ ಮಾಡಿ ಲಾಭ ಗಳಿಸಬಹುದು’ ಎಂದು ರೈತರು ತಿಳಿಸುತ್ತಾರೆ.
ಸಿರಿಧಾನ್ಯದ ಕೃಷಿ ಅಗ್ಗದ ಖರ್ಚಿನ ಕೃಷಿಯಾಗಿದೆ. ಧಾನ್ಯಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ರೈತರಿಗೆ ಲಾಭವಾಗುತ್ತದೆ. ಸಿರಿಧಾನ್ಯ ಕೃಷಿಯ ಉತ್ತೇಜನಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಅವುಗಳ ಲಾಭ ಪಡೆಯಬೇಕು.–ಸಮದ್ ಪಟೇಲ್, ಜಂಟಿ ಕೃಷಿ ನಿರ್ದೇಶಕ
ಸಿರಿಧಾನ್ಯಗಳಿಗೆ ಮಾರುಕಟ್ಟೆ ಇಲ್ಲ. ಜಿಲ್ಲೆಯಲ್ಲಿ ಬೆಳೆಯುವ ಬೇರೆ ಕೃಷಿ ಉತ್ಪನ್ನಗಳಿಗೆ ಹೋಲಿಸಿದರೆ ಇವುಗಳ ದರ ಕಡಿಮೆ ಇದೆ. ಆದ್ದರಿಂದ ರೈತರು ಜಿಲ್ಲೆಯಲ್ಲಿ ಆ ಬೆಳೆಗಳನ್ನು ಬೆಳೆಯುವುದು ಕಡಿಮೆ ಮಾಡಿದ್ದಾರೆ.–ನಾಗಿಂದ್ರಪ್ಪ ಥಂಬೆ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
‘ಕಲಬುರಗಿ ರೊಟ್ಟಿ’ ಬ್ರ್ಯಾಂಡ್
‘ಸಿರಿಧಾನ್ಯ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರೊಟ್ಟಿಗೆ ಮಾರುಕಟ್ಟೆ ಕಲ್ಪಿಸಲು ‘ಕಲಬುರಗಿ ರೊಟ್ಟಿ’ ಬ್ರ್ಯಾಂಡ್ ಮಾಡಲಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದರು. ರೊಟ್ಟಿ ತಯಾರಿಕರಿಗೆ 100 ಯಂತ್ರ ನೀಡಲಾಗಿದೆ. ಪ್ರತಿದಿನ ಸಾವಿರಾರು ರೊಟ್ಟಿಗಳನ್ನು ರಾಜ್ಯದ ಬೇರೆ ನಗರಗಳಿಗೆ ಕಳುಹಿಸಲಾಗುತ್ತಿದೆ. ಆನ್‌ಲೈನ್‌ನಲ್ಲಿಯೂ ಮಾರಾಟ ಮಾಡಲಾಗುತ್ತಿದೆ. ನಗರದಲ್ಲಿ ಫ್ರಾಂಚೈಸಿ ಮಳಿಗೆ ತೆರೆಯಲಾಗಿದೆ. ಸಜ್ಜೆ ರೊಟ್ಟಿ ಹಾಗೂ ದಪಾಟಿಗಳನ್ನೂ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಸಾವಯವ ಮೇಳದಂಥ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
‘2 ಕಡೆ ಸಂಸ್ಕರಣಾ ಘಟಕ’
ಸಿರಿಧಾನ್ಯ ಕೃಷಿಯನ್ನು ಪ್ರೋತ್ಸಾಹಿಸಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಜಿಲ್ಲೆಯ ಎರಡು ಕಡೆ ಸಂಸ್ಕರಣಾ ಘಟಕಗಳನ್ನು ಆರಂಭಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದರು. ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೊಬ್ಬೂರ ಹಾಗೂ ಚಿತ್ತಾಪುರ ಪಟ್ಟಣದಲ್ಲಿ ಘಟಕ ಆರಂಭಿಸಲು ಕೆಕೆಆರ್‌ಡಿಬಿಯಿಂದ ಅನುಮೋದನೆ ಸಿಕ್ಕಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಘಟಕಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಬರಗಾಲದ ಮಿತ್ರ ‘ಸಿರಿಧಾನ್ಯ’
ಸಿರಿಧಾನ್ಯಗಳನ್ನು ಕಡಿಮೆ ಫಲವತ್ತತೆಯ ಹಾಗೂ ಮಳೆಯಾಶ್ರಿತ ಭೂಮಿಯಲ್ಲಿ ಬೆಳೆಯಬಹುದಾದ್ದರಿಂದ ‘ಬರಗಾಲದ ಮಿತ್ರ’ ಎಂದು ಕರೆಯಲಾಗುತ್ತದೆ. ಈ ಬೆಳೆಗಳು ಕಡಿಮೆ ನೀರು ಬೇಡುತ್ತವೆ. ರಸಗೊಬ್ಬರ ಹಾಕುವ ಅಗತ್ಯವಿರುವುದಿಲ್ಲ. ಬೇಗ ಕಟಾವಿಗೆ ಬರುತ್ತವೆ. ಇವುಗಳನ್ನು ಆಹಾರ ಹಾಗೂ ಮೇವಿಗಾಗಿ ಬೆಳೆಯಲಾಗುತ್ತದೆ. ಪೌಷ್ಟಿಕಾಂಶದ ಆಗರ: ನವಣೆ ಕೊರಲೆ ಸಾಮೆ ಸಜ್ಜೆ ಹಾರಕ (ಅರ್ಕ) ಬರಗು ಉದಲು ರಾಗಿ ಜೋಳ ಪೌಷ್ಟಿಕಾಂಶದ ಆಗರವಾಗಿವೆ. ಇವು ಪ್ರೋಟಿನ್ ಕೊಬ್ಬು ನಾರಿನಾಂಶ ಶರ್ಕರ ಪಿಷ್ಠ ಮೆಗ್ನಿಸಿಯಂ ಕ್ಯಾಲ್ಸಿಯಂ ಮ್ಯಾಂಗನೀಸ್ ರಂಜಕ ಹಾಗೂ ಕಬ್ಬಿಣದ ಅಂಶವನ್ನು ಹೊಂದಿರುತ್ತವೆ.
‘ಸಮರ್ಪಕ ಬೆಲೆ ನಿಗದಿಪಡಿಸಿ’
‘ಕಳೆದ ಬಾರಿ ಸಿರಿಧಾನ್ಯ ಬೆಳೆದಿದ್ದೆ ಫಸಲು ಅಷ್ಟಕಷ್ಟೇ ಬಂದಿತ್ತು. ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಲಿಲ್ಲ. ಆದ್ದರಿಂದ ಈ ಬಾರಿ ಆ ಸಾಹಸ ಮಾಡಲು ಹೋಗಿಲ್ಲ. ತೊಗರಿ ಬೆಳೆದಿದ್ದೇನೆ’ ಎಂದು ಸಾವಯವ ಕೃಷಿಕ ಹಣಮಂತಪ್ಪ ಬೆಳಗುಂಪಿ ತಿಳಿಸಿದರು. ‘ಸಂಸ್ಕರಣೆ ರೈತರಿಗೆ ಹೊರೆಯಾಗಿ ಪರಿಣಮಿಸಿದೆ. ಮೌಲ್ಯವರ್ಧನೆಗೆ ಸಮಯ ಹಿಡಿಯುತ್ತದೆ. ಆದ್ದರಿಂದ ಯಾರೂ ಸಿರಿಧಾನ್ಯ ಬೆಳೆಯುತ್ತಿಲ್ಲ. ಸಿರಿಧಾನ್ಯ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾದ ಕಾರಣಜಿಲ್ಲೆಯಲ್ಲಿ ಸಂಸ್ಕರಣಾ ಘಟಕಗಳೂ ತಲೆ ಎತ್ತುತ್ತಿಲ್ಲ. ಇರುವ ಘಟಕಗಳನ್ನೂ ಮುಚ್ಚಲಾಗುತ್ತಿದೆ’ ಎಂದು ಹೇಳಿದರು. ‘ಸರ್ಕಾರ ಸಿರಿಧಾನ್ಯಕ್ಕೆ ಸಮರ್ಪಕ ಬೆಲೆ ನಿಗದಿಪಡಿಸಬೇಕು. ಬೇರೆ ಬೆಳೆಗಳಂತೆ ಉತ್ತಮ ಬೆಲೆ ಸಿಕ್ಕರೆ ಯಾರೂ ಸಿರಿಧಾನ್ಯ ಕೃಷಿಯಿಂದ ವಿಮುಖರಾಗುವುದಿಲ್ಲ’ ಎಂದರು.
‘ಕೆವಿಕೆಯಲ್ಲಿ ಕೆ.ಜಿ ₹6ಕ್ಕೆ ಸಂಸ್ಕರಣೆ’
ಆಳಂದ ರಸ್ತೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ 8 ತಿಂಗಳುಗಳ ಹಿಂದೆ ಸಿರಿಧಾನ್ಯ ಸಂಸ್ಕರಣಾ ಘಟಕ ಆರಂಭವಾಗಿದೆ. ಇಲ್ಲಿ ಕೆ.ಜಿ ಸಿರಿಧಾನ್ಯವನ್ನು ₹6 ವೆಚ್ಚದಲ್ಲಿ ಸಂಸ್ಕರಣೆ ಮಾಡಿಕೊಡಲಾಗುತ್ತಿದೆ. ಖಾಸಗಿ ಕೇಂದ್ರಗಳಿಗೆ ಹೋಲಿಸಿದರೆ ಇದು ಕಡಿಮೆ ಎಂದು ಸಹಾಯಕ ಪ್ರಾಧ್ಯಾಪಕ ಅಂಬರೀಶ ಗಣಾಚಾರಿ ಅವರು ಹೇಳುತ್ತಾರೆ. ‘ಜಿಲ್ಲೆಯ ವಿವಿಧ ತಾಲ್ಲೂಕುಗಳು ಗ್ರಾಮಗಳು ಹಾಗೂ ಪಕ್ಕದ ವಿಜಯಪುರ ಜಿಲ್ಲೆಯಿಂದಲೂ ರೈತರು ಬರುತ್ತಾರೆ. ಸಿರಿಧಾನ್ಯ ಬೆಳೆದವರು ಇಲ್ಲಿಗೆ ಬಂದು ಧಾನ್ಯ ಸಂಸ್ಕರಣೆ ಮಾಡಿಸಿಕೊಂಡು ಹೋಗಬಹುದು’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.