ADVERTISEMENT

ಕಾಳಗಿ: ಎತ್ತಿನಬಂಡಿಯಲ್ಲಿ ಕುಳಿತು ಹೊಲಕ್ಕೆ ತೆರಳಿದ ಡಿಸಿ

​ಪ್ರಜಾವಾಣಿ ವಾರ್ತೆ
Published 24 ಮೇ 2025, 16:15 IST
Last Updated 24 ಮೇ 2025, 16:15 IST
ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಎತ್ತಿನಬಂಡಿಯೊಳಗೆ ಕುಳಿತು ರೈತರ ಹೊಲಕ್ಕೆ ತೆರಳಿದರು
ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಎತ್ತಿನಬಂಡಿಯೊಳಗೆ ಕುಳಿತು ರೈತರ ಹೊಲಕ್ಕೆ ತೆರಳಿದರು   

ಕಾಳಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್ ಶನಿವಾರ ತಾಲ್ಲೂಕಿನ ರಟಕಲ್ ಗ್ರಾಮಕ್ಕೆ ಭೇಟಿ ನೀಡಿದರು.

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗೆ ಆಗಮಿಸಿ ಸಂಘದ ಚಟುವಟಿಕೆಗಳನ್ನು ಆಲಿಸಿದರು.

ಬಳಿಕ ರೈತರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಬಿ.ಫೌಜಿಯಾ, ‘ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಪರಿಹಾರದ ಹಣ ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಗ್ರಾಮದಲ್ಲಿ ಈರುಳ್ಳಿ ಶೇಖರಣಾ ಘಟಕದ ಸ್ಥಾಪನೆಗಾಗಿ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಹೇಳಿದರು.

ADVERTISEMENT

ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ ‘ರೈತರಿಗೆ ರಸಗೊಬ್ಬರ, ಬೀಜ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಡಿಎಪಿ ಪರ್ಯಾಯವಾಗಿ ಕಾಂಪ್ಲೆಕ್ಸ್ ಗೊಬ್ಬರ ಬಳಸಬೇಕು’ ಎಂದರು.

ತಮ್ಮ ಇಲಾಖೆಯಿಂದ ದೊರೆಯುವ ಕೃಷಿ ಯಂತ್ರೋಪಕರಣಗಳು ಮತ್ತು ಹೈನುಗಾರಿಕೆ ಬಗ್ಗೆ ವಿವರಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರೇವಣಸಿದ್ದ ಬಡಾ ಮಾತನಾಡಿ ‘ಸಹಕಾರ ಸಂಘಗಳಿಗೆ ರಸಗೊಬ್ಬರ, ಬೀಜಗಳ ಅಭಾವ ಇದೆ. ರೈತರಿಗೆ ಸಕಾಲದಲ್ಲಿ ದೊರಕುವಂತೆ ಮತ್ತು ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡಬೇಕು. ರೈತರ ಬಹುದಿನಗಳ ಬೇಡಿಕೆಯಾದ ಬೀಜ ವಿತರಣಾ ಕೇಂದ್ರ ಸ್ಥಾಪಿಸಬೇಕು’ ಎಂದು ಮನವಿ ಮಾಡಿದರು.

ನಂತರ ಜಿಲ್ಲಾಧಿಕಾರಿ ಮತ್ತು ಕೃಷಿ ಜಂಟಿ ನಿರ್ದೇಶಕರು ಎತ್ತಿನ ಬಂಡಿಯೊಳಗೆ ಕುಳಿತು ಪ್ರಗತಿಪರ ರೈತ ನರಸಪ್ಪ ರೇಕುಳಗಿ ಹೊಲಕ್ಕೆ ಹೋಗಿ ಮಾವು, ಪೇರು, ಹುಣಸೆ, ಜಂಬು, ನೀಲದಹಣ್ಣು, ಕೋಳಿ–ಕುರಿ ಸಾಕಾಣಿಕೆ ವೀಕ್ಷಣೆ ಮಾಡಿದರು. ಇದೇ ವೇಳೆ ಇನ್ನೂ ಅನೇಕ ರೈತರ ಜಮೀನು ವೀಕ್ಷಿಸಿದರು.

ರೈತ ಶರಣಬಸಪ್ಪ ಭೈರಪ್ಪ, ಗುಂಡಯ್ಯಸ್ವಾಮಿ ಮಠಪತಿ, ಮಲ್ಲಿಕಾರ್ಜುನ ಬುಳ್ಳಾ, ಚಂದ್ರಕಾಂತ ಸೀಗಿ, ಚಂದ್ರಕಾಂತ ರಾಮ, ರಮೇಶ ಪಾಟೀಲ, ದತ್ತಾತ್ರೇಯ ಕುಲಕರ್ಣಿ, ರೇವಣಸಿದ್ಧ ಅರಣಕಲ್, ಸೋಮಣ್ಣ ಡೊಣ್ಣೂರ, ಸಿದ್ದಲಿಂಗಯ್ಯ ಕಿಣ್ಣಿ, ಯಶವಂತ ಏರಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.