ಕಲಬುರಗಿ: ನಗರದ ಐವಾನ್ ಇ ಶಾಹಿ ಕಾಲೊನಿಯ ಸೈಬರ್ ಆರ್ಥಿಕ ಹಾಗೂ ಮಾದಕವಸ್ತು ಅಪರಾಧ ಪೊಲೀಸ್ ಠಾಣೆ ಎಡಬದಿಯಿಂದ ವಸತಿ ಸಮುಚ್ಚಯದ ವರೆಗಿನ ಒಳರಸ್ತೆ ತುಂಬಾ ಹದಗೆಟ್ಟಿದೆ.
ರಸ್ತೆಯಲ್ಲಿ ಕೈಗೊಂಡ ಒಳಚರಂಡಿ ಕಾಮಗಾರಿಯಿಂದಾಗಿ ತಗ್ಗುಗಳು ಬಿದ್ದಿವೆ. ಮ್ಯಾನ್‌ಹೋಲ್‌ಗಳ ಸಮೀಪ ದೊಡ್ಡಮಟ್ಟದ ತಗ್ಗುಗಳು ಬಿದ್ದಿವೆ. ಇದರಿಂದ ವಾಹನ ಚಾಲಕರು ಮತ್ತು ಬೈಕ್ ಸವಾರರು ಹರಸಾಹಸ ಮಾಡಬೇಕಾಗಿದೆ. ಸಾರ್ವಜನಿಕರು ಓಡಾಟಕ್ಕೆ ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಈ ಕಾಲೊನಿಯಲ್ಲಿ ಎಚ್‌ಕೆಇಎಸ್ ಬಾಲಕಿಯರ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು, ಮಹಿಳಾ ಪಾಲಿಟೆಕ್ನಿಕ್, ವಿ.ಜಿ.ಮಹಿಳಾ ಕಾಲೇಜು ವಸತಿನಿಲಯ, ನರ್ಸಿಂಗ್ ಕಾಲೇಜು ವಸತಿನಿಲಯ, ಮಹಿಳಾ ಸೇವಾ ಸಮಾಜ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಮಹಿಳಾ ಪೊಲೀಸ್ ಠಾಣೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ ಇದೆ. ರಸ್ತೆಯ ಕೊನೆಯಲ್ಲಿ ಜಿಲ್ಲಾ ನ್ಯಾಯಾಧೀಶರ ವಸತಿಗೃಹ ಕೂಡ ಇದೆ. ಅಲ್ಲದೇ, ನೂರಾರು ಸರ್ಕಾರಿ ನೌಕರರು ಈ ಕಾಲೊನಿಯ ವಸತಿ ಗೃಹಗಳು ಮತ್ತು ವಸತಿ ಸಮುಚ್ಚಯದಲ್ಲಿ ವಾಸವಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ ಎದುರಿನ ಮ್ಯಾನ್‌ಹೋಲ್ ಬಳಿ ಕೂಡ ದೊಡ್ಡ ತಗ್ಗುಬಿದ್ದಿದೆ. ಉಳಿದಂತೆ ಕಾಲೊನಿಯ ಅಲ್ಲಲ್ಲಿ ರಸ್ತೆ ಹದಗೆಟ್ಟಿದ್ದು, ಸಣ್ಣಪುಟ್ಟ ತಗ್ಗುಗಳು ಬಿದ್ದಿವೆ.
ರಸ್ತೆ ಕೆಲಸ ಮಾಡಿದ ಮೇಲೆ ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿದೆ. ಇದರಿಂದ ದೊಡ್ಡದೊಡ್ಡ ತಗ್ಗುಗಳು ಬಿದ್ದಿವೆ. ವಿದ್ಯಾವಂತರೇ ಈ ರೀತಿ ಕೆಲಸ ಮಾಡಿದರೆ ಹೇಗೆ? ಒಂದೆಡೆ ರಸ್ತೆ ಹಾಳಾದರೆ, ಮತ್ತೊಂದೆಡೆ ಸರ್ಕಾರದ ಹಣ ಪೋಲಾಗುವುದಿಲ್ಲವೇ? ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
‘ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ ಮತ್ತು ವಿವಿಧ ಕಚೇರಿಗಳಿರುವ ರಸ್ತೆಯೇ ತೀರಾ ಹದಗೆಟ್ಟಿದೆ. ಇದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಣಿಸುತ್ತಿಲ್ಲ. ಅಲ್ಲದೇ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಕಚೇರಿ ಕೂಡ ಈ ಕಾಲೊನಿಯಲ್ಲಿತ್ತು’ ಎಂದು ನಿವಾಸಿಗಳು ತಿಳಿಸಿದರು.
‘ಮಳೆ ಬಂದರೆ ರಸ್ತೆಯ ತುಂಬಾ ನೀರು ನಿಲ್ಲುತ್ತದೆ. ಬೈಕ್ ಮತ್ತು ಕಾರು ಚಾಲಕರಿಗೆ ರಸ್ತೆ ಯಾವುದು? ತಗ್ಗು ಯಾವುದು ಎಂದು ಗೊತ್ತಾಗುವುದಿಲ್ಲ. ಒಳಚರಂಡಿ ಮ್ಯಾನ್‌ಹೋಲ್‌ಗಳು ಕೂಡ ಸಮತಟ್ಟಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.
ರಸ್ತೆ ತುಂಬಾ ಹದಗೆಟ್ಟಿದೆ. ಜಲ್ಲಿಕಲ್ಲುಗಳು ಮೇಲೆದ್ದಿರುವುದರಿಂದ ನಡೆದಾಡಲು ಆಗುತ್ತಿಲ್ಲ. ಮಳೆ ಬಂದರೆ ಮತ್ತಷ್ಟು ತೊಂದರೆಯಾಗುತ್ತದೆ. ಬೇಸಿಗೆ ಮುಗಿಯುವ ಮುನ್ನ ದುರಸ್ತಿ ಮಾಡಬೇಕುಪದ್ಮಿನಿಬಾಯಿ ಕಾಲೊನಿ ನಿವಾಸಿ
ಐವಾನ್ ಇ ಶಾಹಿ ಕಾಲೊನಿಯಲ್ಲಿನ ರಸ್ತೆ ಹದಗೆಟ್ಟಿರುವ ಬಗ್ಗೆ ಸಿಬ್ಬಂದಿ ಮೂಲಕ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದುಆರ್.ಪಿ.ಜಾಧವ ಮಹಾನಗರ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.