ADVERTISEMENT

ಚಿತ್ತಾಪುರ | ಮೃತ ಎಂಜಿನಿಯರ್‌ಗೂ ವರ್ಗಾವಣೆ: ನಗರಾಭಿವೃದ್ಧಿ ಇಲಾಖೆ ಎಡವಟ್ಟು

ಆರು ತಿಂಗಳ ಹಿಂದೆಯೇ ಮೃತಪಟ್ಟಿದ್ದ ಸೇಡಂ ಪುರಸಭೆಯ ಎಂಜಿನಿಯರ್‌

ಮಲ್ಲಿಕಾರ್ಜುನ ಎಚ್.ಎಂ
Published 13 ಜುಲೈ 2024, 1:05 IST
Last Updated 13 ಜುಲೈ 2024, 1:05 IST
   

ಚಿತ್ತಾಪುರ: ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್‌ ಅಶೋಕ ಪುಟಪಾಕ್‌ ಅವರು ಆರು ತಿಂಗಳ ಹಿಂದೆಯೇ ಮೃತಪಟ್ಟಿದ್ದರೂ ರಾಜ್ಯ ಸರ್ಕಾರ ಅವರನ್ನು ಕೊಡಗಿಗೆ ವರ್ಗಾವಣೆ ಮಾಡಿ ಜುಲೈ 9ರಂದು ಆದೇಶ ಹೊರಡಿಸಿದೆ!

ನಗರಾಭಿವೃದ್ಧಿ ಇಲಾಖೆಯು ಕಿರಿಯ ಎಂಜಿನಿಯರ್ ಅಶೋಕ ಪುಟಪಾಕ್ ಅವರನ್ನು ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯ ಕಿರಿಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ವಿಧಾನಸಭಾ ಕ್ಷೇತ್ರದಲ್ಲಿ ಈ ಎಡವಟ್ಟು ನಡೆದಿದೆ. 

ಚಿತ್ತಾಪುರ ತಾಲ್ಲೂಕಿನ ದಿಗ್ಗಾಂವ ಗ್ರಾಮದ ಅಶೋಕ ಭೀಮರಾಯ ಪುಟಪಾಕ್ (54) ಸೇಡಂ ಪುರಸಭೆಯಲ್ಲಿ ಕಿರಿಯ ಎಂಜಿನಿಯರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತೀವ್ರ ಅನಾರೋಗ್ಯದ ಕಾರಣ ಅವರು ಸೇಡಂನಲ್ಲಿ ಜನವರಿ 12ರಂದು ಮೃತಪಟ್ಟಿದ್ದರು. ಜ.13ರಂದು ದಿಗ್ಗಾಂವ ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಚಿತ್ತಾಪುರ, ವಾಡಿ, ಸೇಡಂ ಪುರಸಭೆಯ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.

ADVERTISEMENT

ಇಲಾಖೆಯ ನೌಕರರೊಬ್ಬರು ಮೃತಪಟ್ಟಿರುವ ಬಗ್ಗೆ ಪೌರಾಡಳಿತ ವಿಭಾಗಕ್ಕೆ ಮಾಹಿತಿ ಇರಲಿಲ್ಲವೇ? ಒಂದು ವೇಳೆ ಮೃತಪಡುವ ಮುಂಚೆ ಅಶೋಕ ಅವರು ವರ್ಗಾವಣೆ ಕೋರಿದ್ದರೆ, ಅವರ ಮರಣದ ನಂತರ ವರ್ಗಾವಣೆ ಕಡತ ಮರು ಪರಿಶೀಲನೆ ಮಾಡದೇ ವರ್ಗಾವಣೆ ಮಾಡಲಾಗಿದೆಯೇ ಎಂಬ ಚರ್ಚೆ ನಡೆಯುತ್ತಿದೆ.

ಸೇಡಂ ಪುರಸಭೆಯಲ್ಲಿಯೇ ಅಶೋಕ ಅವರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಕಿರಿಯ ಎಂಜಿನಿಯರ್ ಸಂಪತ್‌ಕುಮಾರ ಅವರನ್ನೂ ಕೊಡಗು ಜಿಲ್ಲೆಯ ವಿರಾಜಪೇಟೆ ಪುರಸಭೆ ಕಿರಿಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ಅಶೋಕ ಪುಟಪಾಕ್ ಅವರು ಮೃತಪಟ್ಟಿರುವ ಕುರಿತು ಸೇಡಂ ಪುರಸಭೆಯವರು ಪೌರಾಡಳಿತ ನಿರ್ದೇಶನಾಲಯಕ್ಕೆ ಮಾಹಿತಿ ನೀಡಬೇಕಿತ್ತು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ.
ಮುನಾವರ್ ದೌಲಾ ಯೋಜನಾ ನಿರ್ದೇಶಕ ಜಿಲ್ಲಾ ನಗರಾಭಿವೃದ್ಧಿ ಕೋಶ ಕಲಬುರಗಿ
ಮೃತಪಟ್ಟ ಕಿರಿಯ ಎಂಜಿನಿಯರ್ ಅವರನ್ನು ವರ್ಗಾವಣೆ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸುತ್ತೇನೆ.
ಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.