ADVERTISEMENT

ಮನೆ ಕಳವು: 24 ಗಂಟೆಯಲ್ಲಿ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 4:40 IST
Last Updated 2 ಜುಲೈ 2022, 4:40 IST
ಮನೆ ಕಳ್ಳತನ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ ರೋಜಾ ಪೊಲೀಸ್ ಠಾಣೆ ಸಿಬ್ಬಂದಿ
ಮನೆ ಕಳ್ಳತನ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ ರೋಜಾ ಪೊಲೀಸ್ ಠಾಣೆ ಸಿಬ್ಬಂದಿ   

ಕಲಬುರಗಿ: ಮನೆ ಕಳವು ಪ್ರಕರಣವನ್ನು 24 ಗಂಟೆ ಒಳಗೆ ಭೇದಿಸಿದ ರೋಜಾ ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿನ್ನಾಭರಣ, ನಗದು ವಶಪಡಿಸಿಕೊಂಡಿದ್ದಾರೆ.

ನಗರದ ಇಸ್ಲಾಮಾಬಾದ್ ಕಾಲೊನಿಯ ಶೇಖ್ ಅಮಿರ್ ಗೌಸ್ ಪಟೇಲ್(25) ಮತ್ತು ಮಹಮ್ಮದ್ ಗೌಸ್ ಶಬ್ಬೀರ್ (26) ಬಂಧಿತರು. ಮನೆಯ ಬೀಗ ಮುರಿದು ತಿಜೋರಿಯಲ್ಲಿದ್ದ ಚಿನ್ನ, ಬೆಳ್ಳಿ ಮತ್ತು ನಗದು ಹಣ ಕಳುವಾದ ಬಗ್ಗೆ ಜೂನ್ 30ರ ಸಂಜೆ ಇಸ್ಲಾಮಾಬಾದ್ ಕೊಲೊನಿಯ ನಿವಾಸಿ ಮಹಮ್ಮದ್ ರಫೀಕ್ ಇಸ್ಮಾಯಿಲ್ ದೂರು ನೀಡಿದ್ದರು.

‘ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರು ಸಿಸಿ ಟಿವಿ ಕ್ಯಾಮೆರಾ ಸೆರೆಯಾಗಿದ್ದರು. ಈ ದೃಶ್ಯಾವಳಿಗಳ ಮೂಲಕ ಆರೋಪಿಗಳ ಚಹರೆ ಪತ್ತ ಮಾಡಿ 24 ಗಂಟೆ ಒಳಗೆ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಬಂಧಿತರಿಂದ 4 ತೊಲಿ ಬಂಗಾರ, 20 ತೊಲಿ ಬೆಳ್ಳಿ, ₹18,000 ನಗದು ಸೇರಿ ₹2.32 ಲಕ್ಷದ ಸ್ವತ್ತು ವಶಕ್ಕೆ ಪಡೆಯಲಾಗಿದೆ.

ರೋಜಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸದಾಶಿವ ಎ.ಸೋನವನೆ, ಎಎಸ್‌ಐಗಳಾದ ಶಿವಪ್ಪ, ನಿಜಲಿಂಗಪ್ಪ, ಹೆಡ್‌ಕಾನ್‌ಸ್ಟೇಬಲ್‌ ನಾಗರಾಜ, ಶರಣಬಸಪ್ಪ, ಪುಂಡಲಿಕ, ಸಿಬ್ಬಂದಿ ಭೀಮಾಶಂಕರ, ಮಹಮ್ಮದ್ ಇರ್ಫಾನ್, ಲಕ್ಷ್ಮಮ್ಮ, ಅಮೃತಾ, ಖಾದರ ಪಾಷಾ ಕಾರ್ಯಾಚರಣೆ ನಡೆಸಿದರು.

96 ಗೋವು ರಕ್ಷಣೆ
ಕಲಬುರಗಿ: ಜಮೀನಿನಲ್ಲಿ ಅಕ್ರಮವಾಗಿ ಕೂಡಿ ಹಾಕಿದ್ದ 96 ಗೋವುಗಳನ್ನು ಶುಕ್ರವಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರಿಗೆ ನೋಟಿಸ್ ನೀಡಲಾಗಿದೆ. ಗೋವುಗಳನ್ನು ನಗರ ಹೊರವಲಯದ ಲಲಿತಾ ಗೋಶಾಲೆಯಲ್ಲಿ ಬಿಡಲಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಪೊಲೀಸರು ತಿಳಿಸಿದ್ದಾರೆ.

ಬಕ್ರಿದ್ ಹಬ್ಬದ ಹಿನ್ನಲ್ಲೆಯಲ್ಲಿ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ಗೋವುಗಳ ಸಾಗಾಣಿಕೆ ತಡೆಯಲು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.

ದಯಾನಂದ ಕೊಲೆ: ಐವರ ಬಂಧನ
ಕಲಬುರಗಿ: ನಗರದ ವಾಜಪೇಯಿ ಬಡಾವಣೆಯ ಬಯಲು ಪ್ರದೇಶದಲ್ಲಿ ದಯಾನಂದ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಸುರೇಶ, ಅಂಬಿಕಾ, ಕೃಷ್ಣ, ನೀಲಕಂಠ ಮತ್ತು ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾಗಿರುವ ಸಂತೋಷ ಬಂಧಿತ ಆರೋಪಿಗಳು.

‘ಕೊಲೆಯಾದ ದಯಾನಂದ ಅವರು ಪಕ್ಕದ ಮನೆಯ ನಿವಾಸಿ ಆಗಿದ್ದ ಅಂಬಿಕಾ ಜೊತೆಯಲ್ಲಿ ಸಲುಗೆ ಮತ್ತು ಅನುಚಿತವಾಗಿ ವರ್ತಿಸುತ್ತಿದ್ದ. ಇದೇ ಕಾರಣಕ್ಕೆ ಅಂಬಿಕಾ ಮತ್ತು ಆಕೆಯ ಸಂಗಡಿಗರು ಎಂದು ಹೇಳಲಾಗುವ ನಾಲ್ವರು ಸೇರಿ ಕೊಲೆ ಮಾಡಿದ್ದಾರೆ‌ ಎಂಬ ಆರೋಪವಿದೆ‌’ ಎಂದು ಪೊಲೀಸರು ತಿಳಿಸಿದ್ದಾರೆ.

ಜೂ.24ರಂದು ಮಾತನಾಡುವುದಾಗಿ ದಯಾನಂದ ಅವರನ್ನು ನಗರದ ಹೊರವಲಯದ ವಾಜಪೇಯಿಬಡಾವಣೆಯ ಬಯಲು ಪ್ರದೇಶಕ್ಕೆ ಕರೆಯಿಸಿಕೊಂಡಿದ್ದಾರೆ. ರಾಡು, ಇತರೆ ಆಯುಧಗಳಿಂದ ಒಡೆದು ಕೊಲೆ ಮಾಡಲಾಗಿದೆಎಂದಿದ್ದಾರೆ.

ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.