ಕಲಬುರಗಿ: ನಗರದ ಜಾಧವ ಲೇಔಟ್‌ನಲ್ಲಿನ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರ ಮನೆ ಬಾಗಿಲಿನ ಕೀಲಿಕೊಂಡಿ ಮುರಿದ ಕಳ್ಳರು, ಮನೆಯ ಅಲ್ಮೆರಾದಲ್ಲಿ ಇರಿಸಿದ್ದ ಚಿನ್ನಾಭರಣ ಕದ್ದೊಯ್ದಿದ್ದಾರೆ.
ಮಹಾಗಾಂವ್ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್, ಲೇಔಟ್‌ನ ನಿವಾಸಿ ಮಂಜುಳಾ ನಾರಾಯಣ ಅವರ ಮನೆಯಲ್ಲಿ ಕಳ್ಳತನವಾಗಿದೆ. ಸಬ್‌ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಕ್ಷಾ ಬಂಧನ ಪ್ರಯುಕ್ತ ಮಂಜುಳಾ ಹಾಗೂ ಕುಟುಂಬಸ್ಥರು ಮನೆಗೆ ಬೀಗ ಹಾಕಿ, ತವರು ಮನೆಗೆ ಹೋಗಿದ್ದರು. ರಾತ್ರಿ ವೇಳೆ ಮನೆ ಬಾಗಿಲಿನ ಕೀಲಿ ಕೊಂಡಿ ಮುರಿದು ಕಳ್ಳರು ಒಳ ನುಗ್ಗಿದ್ದರು. ಮನೆಯ ಅಲ್ಮೆರಾದಲ್ಲಿ ಇರಿಸಿದ್ದ ₹1.20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನ ಅಡ್ಡಗಟ್ಟಿ ಸುಲಿಗೆ, ಮೂವರ ಬಂಧನ: ನಗರದ ಖರ್ಗೆ ಪೆಟ್ರೋಲ್ ಬಂಕ್– ಹುಮನಾಬಾದ್ ಕ್ರಾಸ್ ನಡುವಿನ ರಿಂಗ್ ರಸ್ತೆಯಲ್ಲಿ ತಡರಾತ್ರಿ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಿ, ಚಾಲಕರನ್ನು ಹೆದರಿಸಿ ಅವರಿಂದ ಹಣ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಎಂಬಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆಟೊ ಚಾಲಕ ಲೋಕೇಶ ಸಾತಪೊತೆ (23), ಬೀದರ್ ಜಿಲ್ಲೆಯ ಬಸವಕಲ್ಯಾಣದ ಜಾದವ ಮುಗಳಿಯ ಪಾನಿಪೂರಿ ವ್ಯಾಪಾರಿ ಶುಭಂ ಪನಬೊನೆ (26) ಹಾಗೂ ಕಟ್ಟಡ ಕಾರ್ಮಿಕ ಸೈಯದ್ ಅಲ್ತಾಪ್ (22) ಬಂಧಿತ ಆರೋಪಿಗಳು.
ಸೆಕ್ಯೂರಿಟಿ ಗಾರ್ಡ್ ಸಾವು: ಆಳಂದ ರಸ್ತೆಯ ರೈಲ್ವೆ ಮೇಲ್ಸೇತುವೆಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ಮಾಲ್‌ವೊಂದರ ಸೆಕ್ಯೂರಿಟಿ ಗಾರ್ಡ್‌ಗೆ ಅಪರಿಚಿತ ವಾಹನ ಡಿಕ್ಕಿಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಗರದ ನಿವಾಸಿ ಶಿವಾನಂದ ಮೇಟೇಕರ (36) ಮೃತರು. ಸಂಚಾರಿ ಪೊಲೀಸ್ ಠಾಣೆ –2ರಲ್ಲಿ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿವಾನಂದ ಅವರು ಆಗಸ್ಟ್ 20ರ ರಾತ್ರಿ ಹೊರಗಡೆ ಹೋಗಿ ಬರುವುದಾಗಿ ಬೈಕ್‌ನಲ್ಲಿ ತೆರಳಿದ್ದರು. ತಡರಾತ್ರಿಯಾದರು ವಾಪಸ್ ಬಾರದೆ ಇದ್ದಾಗ, ಕೆಲಸ ಮುಗಿಸಿಕೊಂಡು ಬೆಳಿಗ್ಗೆ ಬರಬಹುದು ಎಂದು ಕುಟುಂಬಸ್ಥರು ಸುಮ್ಮನಿದ್ದರು. ಮರುದಿನ ಬೆಳಿಗ್ಗೆ ಪರಿಚಯಸ್ಥರು ಬಂದು ಅಪಘಾತದ ಬಗ್ಗೆ ತಿಳಿಸಿದಾಗ ಮೃತಪಟ್ಟಿದ್ದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.