ಕಮಲಾಪುರ: ಪಟ್ಟಣ ಸೇರಿದಂತೆ ಓಕಳಿ ಹಾಗೂ ಇತರೆ ಗ್ರಾಮದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜನ ಬೇಸತ್ತು ಹೋಗಿದ್ದಾರೆ.
ರಾತ್ರಿ ಹೊಲಗಳಲ್ಲಿ ಕಟ್ಟಿರುವ ಜಾನುವಾರು, ಸೋಲಾರ ಬೇಲಿ ಬ್ಯಾಟರಿ, ಪ್ಲೇಟ್, ಪಂಪಸೆಟ್‌ಗಳನ್ನು ಕದ್ದೊಯ್ಯುತ್ತಿದ್ದು, ರೈತರಿಗೆ ಹಾನಿಯುಂಟು ಮಾಡುತ್ತಿದ್ದಾರೆ.
ಕಮಲಾಪುರದ ಸಂತೋಷ ವಿಶ್ವನಾಥ ಕುಮ್ಮಣ ಅವರ ಜಮೀನಿನಲ್ಲಿ ಕಟ್ಟಿದ್ದ ಸುಮಾರು ₹40 ಸಾವಿರ ಮೌಲ್ಯದ ಆಕಳು ಹಾಗೂ ಪಕ್ಕದ ಜಮೀನಿನಲ್ಲಿ ಕಟ್ಟಿದ್ದ ಬರನಸಾಬ ಮಕಬುಲ್ ಸಾಬ್ ಅವರಿಗೆ ಸೇರಿದ್ದ ಸುಮಾರು ₹50 ಸಾವಿರ ಮೌಲ್ಯದ ಹೋರಿ ಈಚೆಗೆ ಕಳುವಾಗಿವೆ.
ಅದೇ ದಿನ ರಾತ್ರಿ ಓಕಳಿ ಗ್ರಾಮದ ಮಲ್ಲಿಕಾರ್ಜುನ ನರಸಪ್ಪ ಹೂಗಾರ, ವಿನಾಯಕರಾಯ ತಿಪ್ಪಣ್ಣ ಅಣಕಲ್, ಚೆನ್ನಬಸಪ್ಪ ವೀರಣಗೌಡ ಪೊಲೀಸ ಪಾಟೀಲ, ಮಹಾದೇವ ನಾಗಣ್ಣ ಸೇರಿ ಅವರ ಜಮೀನುಗಳಿಗೆ ಅಳವಡಿಸಿದ್ದ 4 ಸೋಲಾರ್ ಬೇಲಿಯ ಬ್ಯಾಟರಿ, ಸೋಲಾರ ಪ್ಲೇಟ್, ಸೋಲಾರ್ ಯಂತ್ರ ಕಳುವಾಗಿವೆ. ಇವು ತಲಾ ₹ 20 ಸಾವಿರ ಮೌಲ್ಯದ್ದಾಗಿವೆ ಎನ್ನಲಾಗಿದೆ.
ಇದೇ ಗ್ರಾಮದಲ್ಲಿ ಕಳೆದ ಕೆಲದಿನಗಳ ಹಿಂದೆ ವೀರಣ್ಣ ಚೆನ್ನಬಸಪ್ಪ ಸಂಪಳ್ಳಿ ಹಾಗೂ ದೇವಿಂದ್ರಪ್ಪ ಶರಣಪ್ಪ ಕಣಮಸ ಅವರಿಗೆ ಸೇರಿದ್ದ ಎರಡು ಪಂಪಸೆಟ್ ಕಳುವಾಗಿವೆ. ಇವು ತಲಾ ₹30 ಸಾವಿರ ಮೌಲ್ಯದಾಗಿವೆ.
‘ಪ್ರತಿ ವರ್ಷ ಬಕ್ರೀದ್ ಹಬ್ಬ ಸಮಯದಲ್ಲಿ ಜಾನುವಾರು ಕಳುವಾಗುತ್ತವೆ. ಕೆಲದಿನಗಳಲ್ಲಿ ಬಕ್ರೀದ್ ಹಬ್ಬವಿದೆ. ಹೀಗಾಗಿ ಈಗ ಜಾನುವಾರು ಕಳವು ಮಾಡುತ್ತಿದ್ದಾರೆ. ಪೊಲೀಸರು ಎಚ್ಚೆತ್ತು ಕಾರ್ಯಾಚರಣೆ ನಡೆಸಬೇಕು’ ಎನ್ನುತ್ತಾರೆ ಕಮಲಾಪುರ ರೈತ ಸಂತೋಷ ಕುಮ್ಮಣ.
ಓಕಳಿ ಗ್ರಾಮದಲ್ಲಿ ರೈತರ ಪಂಪಸೆಟ್, ಸೋಲಾರ ಸೇರಿದಂತೆ ಇತರೆ ಹೆಚ್ಚಿನ ಬೆಲೆಯ ಕೃಷಿ ಪರಿಕರ ಕಳುವು ಮಾಡುತ್ತಿದ್ದಾರೆ. ಇದರಿಂದ ಅನ್ನದಾತ ಸಂಕಷ್ಟ ಅನುಭವಿಸುತ್ತಿದ್ದಾನೆ. ಕೂಡಲೆ ಪೊಲೀಸರು ಕಾರ್ಯಪ್ರವೃತ್ತರಾಗಬೇಕು. ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಬೇಕು. ರೈತರ ಜಾನುವಾರು, ಪಂಪಸೆಟ್ ಮತ್ತಿತರ ಪರಿಕರಗಳನ್ನು ಜಪ್ತಿ ಮಾಡಿ ರೈತರಿಗೆ ಮರಳಿಸಬೇಕು ಎಂದು ಕೆಪಿಸಿಸಿ ಸದಸ್ಯ ಸಿ.ಬಿ.ಪಾಟೀಲ ಓಕಳಿ ಆಗ್ರಹಿಸಿದ್ದಾರೆ.
ಪೊಲೀಸರು ರೈತರನ್ನು ಸತಾಯಿಸದೆ ಕೂಡಲೇ ಪ್ರಕರಣ ದಾಖಲಿಸಬೇಕು. ಕಳ್ಳರನ್ನು ಬಂಧಿಸಬೇಕು -ಸಿ.ಬಿ.ಪಾಟೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.