ADVERTISEMENT

ಅಫಜಲಪುರ: ಟಿಟಿ–ಲಾರಿ–ಬೈಕ್‌ ನಡುವೆ ಅಪಘಾತ: ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 12:49 IST
Last Updated 25 ಡಿಸೆಂಬರ್ 2024, 12:49 IST
   

ಅಫಜಲಪುರ (ಕಲಬುರಗಿ ಜಿಲ್ಲೆ): ಸೋಲಾಪುರ– ಕಲಬುರಗಿ ರಾಷ್ಟ್ರೀಯ ಹೆದ್ದಾರಿ– 151ರ ಗೊಬ್ಬರ (ಬಿ) ಗ್ರಾಮ ಸಮೀಪ ಬುಧವಾರ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

ಕಲಬುರಗಿ ನಗರದ ವಿನಿತಾ, ಅನುಪ್ ಬೆಂಗೇರಿ ಹಾಗೂ ಗೊಬ್ಬುರ (ಬಿ) ಗ್ರಾಮದ ಬಸವರಾಜ ಮೃತರು. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಕಲಬುರಗಿ ನಗರ ಮೂಲದ ವಿನಿತಾ, ಅನುಪ್ ಸೇರಿ ಸುಮಾರು 8 ಮಂದಿ ಟೆಂಪೋ ಟ್ರಾವಲ್‌ (ಟಿಟಿ) ವಾಹನದಲ್ಲಿ ದೇವಲ ಗಾಣಗಾಪುರದ ದತ್ತಾತ್ರೇಯ ದರ್ಶನಕ್ಕೆ ಹೋಗಿದ್ದರು. ದೇವರ ದರ್ಶನ ಮಾಡಿಕೊಂಡು ಸಂಜೆ ಮನೆಗೆ ವಾಪಸ್ ಆಗುತ್ತಿದ್ದರು. ಗೊಬ್ಬರ (ಬಿ) ಸಮೀಪ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಟಿಟಿ ಚಾಲಕ ಎದುರಿನಿಂದ ಬರುತ್ತಿದ್ದ ಕಬ್ಬಿನ ಲಾರಿಗೆ ಡಿಕ್ಕಿ ಹೊಡೆದರು. ಇವುಗಳ ನಡುವೆ ದ್ವಿಚಕ್ರ ವಾಹನ ಸವಾರನೂ ಸಿಲುಕಿಕೊಂಡರು’ ಎಂದು ಪಿಎಸ್‌ಐ ರಾಹುಲ್ ಪಾವಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಟಿಟಿಯಲ್ಲಿದ್ದ ವಿನಿತಾ, ಅನುಪ್ ಹಾಗೂ ದ್ವಿಚಕ್ರ ವಾಹನ ಸವಾರ ಬಸವರಾಜ ಸಾವನ್ನಪ್ಪಿದ್ದಾರೆ. ಟಿಟಿಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ’ ಎಂದರು.

ದೇವಲ ಗಾಣಗಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.