ಕಾಳಗಿ: ಈಗಾಗಲೇ ಅಧಿಕ ಮಳೆಯಾಗಿ ಭೂಮಿ ಹಸಿಯಾಗಿದೆ. ಮುಂಗಾರು ಕೆಲವೇ ದಿನಗಳಲ್ಲಿ ಆರಂಭವಾಗುತ್ತಿದೆ. ಗಿಡಮರ ಬೆಳೆಸಲು ಸಸಿ ವಿತರಣೆಗೆ ಅರಣ್ಯ ಇಲಾಖೆ ಪೂರ್ಣ ಸಿದ್ಧತೆ ಮಾಡಿಕೊಂಡಿದೆ.
‘ತಮ್ಮ ವ್ಯಾಪ್ತಿಯ ಕಾಳಗಿ, ಚಿತ್ತಾಪುರ, ಶಹಾಬಾದ್ ಮತ್ತು ಸೇಡಂ ತಾಲ್ಲೂಕಿನಲ್ಲಿ ಸಸಿ ನೆಡಲು ಮಾಡಬೂಳ ಮತ್ತು ಚಿತ್ತಾಪುರ ಸಸ್ಯಕ್ಷೇತ್ರದಲ್ಲಿ 70ಸಾವಿರ ಸಸಿಗಳನ್ನು ಸಂಗ್ರಹಿಸಿಡಲಾಗಿದೆ’ ಎಂದು ಪ್ರಾದೇಶಿಕ ಅರಣ್ಯ ಇಲಾಖೆ ವಲಯ ಅಧಿಕಾರಿ ವಿಜಯಕುಮಾರ ಬಡಿಗೇರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಈ ವರ್ಷದ ಬೇಡಿಕೆಯ ಅಂದಾಜಿನ ಪ್ರಕಾರ ಮಾಡಬೂಳ ಮತ್ತು ಚಿತ್ತಾಪುರ ಸಸ್ಯ ಕ್ಷೇತ್ರದಲ್ಲಿ ಶ್ರೀಗಂಧ, ಬಿದಿರು, ಹೆಬ್ಬೇವು, ರಕ್ತಚಂದನ, ಅರಳಿ, ಹೊಂಗೆ, ಬೇವು, ಬಸರಿ, ಬಸವನ ಪಾದ, ಮಹಾಗನಿ, ಸಿಹಿ ಹುಣಸೆ, ಗೋಣಿ, ಸಾಗವಾನಿ, ನೇರಳೆ ಸೇರಿದಂತೆ ವಿವಿಧ ಜಾತಿಯ ಒಟ್ಟು 67ರಿಂದ 70ಸಾವಿರ ಸಸಿಗಳನ್ನು ಸಜ್ಜುಗೊಳಿಸಿಕೊಳ್ಳಲಾಗಿದೆ.
‘ಈ ಪೈಕಿ ರೈತರಿಗಾಗಿಯೇ 21,800 ಸಸಿಗಳನ್ನು ಮೀಸಲು ಇಡಲಾಗಿದೆ. ಅವರು ಪಹಣಿ, ಆಧಾರ್, ಬ್ಯಾಂಕ್ ಪಾಸ್ ಬುಕ್, ಫೋಟೊ ಕೊಟ್ಟು ₹10 ಶುಲ್ಕ ನೀಡಿ ನೋಂದಣಿ ಮಾಡಿಕೊಂಡರೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಆದ್ಯತೆ ಮೇರೆಗೆ ಸಸಿಗಳನ್ನು ನೀಡಲಾಗುವುದು. ಆ ಸಸಿಗಳನ್ನು ಚೆನ್ನಾಗಿ ಬೆಳೆಸಿ, ಉಳಿಸಿದಾಗ ಮೂರುವರ್ಷದ ಮೇಲೆ ಒಂದು ಸಸಿಗೆ ₹125ರಂತೆ ಪ್ರೋತ್ಸಾಹ ಧನ ನೀಡಲಾಗುವುದು’ ಎಂದರು.
ಜಮೀನು, ಪಹಣಿ ಇಲ್ಲದವರು ₹3ರಿಂದ ₹6 ನೀಡಿದರೆ ಆರ್.ಎಸ್.ಪಿ.ಡಿ ಯೋಜನೆಯಡಿ ರಿಯಾಯಿತಿ ದರದಲ್ಲಿ ಸಸಿ ನೀಡಲಾಗುವುದು.
‘ಇನ್ನು ಶಾಲಾ-ಕಾಲೇಜುಗಳಲ್ಲಿ ಪರಿಸರ ದಿನಾಚರಣೆ, ವನ ಮಹೋತ್ಸವ ಕಾರ್ಯಕ್ರಮಕ್ಕೆ ಅರ್ಜಿಗಳ ಆದ್ಯತೆ ಮೇರೆಗೆ ಹಸಿರು ಕರ್ನಾಟಕ ಯೋಜನೆಯಡಿ 500 ಸಸಿಗಳನ್ನು ನೀಡಬಹುದು. ಒಟ್ಟಾರೆ ಅರಣ್ಯಪ್ರದೇಶ ಪ್ರಮಾಣ ಹೆಚ್ಚಿಸುವುದಕ್ಕಾಗಿ ಕಾಡುಗಳಲ್ಲಿ, ರಸ್ತೆಬದಿ ನೆಡುತೋಪು ಮಾಡುವ ಗುರಿ ಹೊಂದಲಾಗಿದೆ’ ಎಂದು ಅವರು ಹೇಳಿದರು.
ಜೂನ್ ತಿಂಗಳಲ್ಲಿ ಪರಿಸರ ದಿನಾಚರಣೆ ಜುಲೈ ತಿಂಗಳಲ್ಲಿ ವನಮಹೋತ್ಸವ ಹಮ್ಮಿಕೊಳ್ಳಲಾಗುವುದು. ಜನತೆಗೆ ಆದ್ಯತೆ ಮೇರೆಗೆ ಸಸಿಗಳನ್ನು ನೀಡಲಾಗುವುದು- ವಿಜಯಕುಮಾರ ಬಡಿಗೇರ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ಚಿತ್ತಾಪುರ
ಯಾರು ಸ್ವ-ಇಚ್ಛೆಯಿಂದ ಸಸಿ ನೆಡಲು ಮುಂದೆ ಬರುತ್ತಾರೊ ಅಂಥವರಿಗೆ ಬೇಡಿಕೆಯಷ್ಟು ಸಸಿಗಳು ನೀಡಿದರೆ ಅವರು ಉತ್ಸಾಹದಿಂದ ಸಸಿನೆಟ್ಟು ಪೋಷಿಸುತ್ತಾರೆಶ್ರೀನಿವಾಸ ಗುರುಮಠಕಲ್ ಪರಿಸರ ಪ್ರೇಮಿ ಕಾಳಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.