ಕಲಬುರ್ಗಿ: ಹಿರಿಯ ಕವಿ, ದಲಿತ ಅಸ್ಮಿತೆಯ ಹಲವು ಕಾವ್ಯ ರಚಿಸಿದ್ದ ಸಿದ್ದಲಿಂಗಯ್ಯ ಅವರ ನಿಧನಕ್ಕೆ ನಗರದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಶನಿವಾರ ನುಡಿನಮನ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ: ಸಮಿತಿ ವತಿಯಿಂದ ನಗರದ ಜಗತ್ ವೃತ್ತದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಿತಿ ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ್, ಮಾಜಿ ಶಾಸಕ ಬಿ.ಆರ್. ಪಾಟೀಲ, ಸಮಿತಿ ಜಿಲ್ಲಾ ಸಂಚಾಲಕ ಸುರೇಶ ಹಾದಿಮನಿ, ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್, ಲೇಖಕ ಡಾ. ಎಚ್.ಟಿ. ಪೋತೆ, ಹಿರಿಯ ಸಾಹಿತಿ ಪ್ರೊ. ಆರ್.ಕೆ. ಹುಡಗಿ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ ನೀಲಾ, ಮೀನಾಕ್ಷಿ ಬಾಳಿ ಅವರು ಮಾತನಾಡಿ, ‘ಡಾ. ಸಿದ್ಧಲಿಂಗಯ್ಯನವರು ಸಮಾನತೆಗಾಗಿ ಕಾವ್ಯ ರಚಿಸಿದ್ದರು. ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿ ಶೋಷಿತ ಜನರು, ದುಡಿಯುವ ವರ್ಗದವರ ಪರವಾಗಿ ಧ್ವನಿ ಎತ್ತಿದ್ದಾರೆ. ಶೋಷಿತರ ಒಳಿತಿಗಾಗಿ ಕಾನೂನುಗಳನ್ನು ಮಾಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದರು.
‘ಸಿದ್ದಲಿಂಗಯ್ಯನವರು ಶೋಷಿತರಲ್ಲಿ ಧೈರ್ಯ, ಹೋರಾಟದ ಕಿಚ್ಚು ಹಚ್ಚಿದ್ದರಿಂದ ಇಂದು ಎಷ್ಟೋ ಮನೆಗಳ ದೀಪಗಳಾಗಿ ಬೆಳಗುತ್ತಿವೆ. ನೊಂದವರ ಆಕ್ರಂದನವನ್ನು ಹಾಡಾಗಿಸಿ ಕಾವ್ಯದ ನಾಡಿ ಬಡಿತಕ್ಕೆ ಹೊಸ ಬಗೆಯ ನಾದವಾಗಿದ್ದರು’ ಎಂದು ಹೇಳಿದರು.
ವಕೀಲ ಬಸಣ್ಣ ಸಿಂಗೆ, ರಾಜ್ಯ ಖಜಾಂಚಿ ಬಿ.ಸಿ. ವಾಲಿ, ಎಸ್.ಪಿ. ಸುಳ್ಳದ, ಪ್ರೊ. ಅಂಬಣ್ಣ ಜೀವಣಗಿ, ಪ್ರೊ. ಹೂವಣ್ಣ ಸಕ್ಪಲ್, ಜಿಲ್ಲಾ ಸಂಘಟನಾ ಸಂಚಾಲಕರಾದ ಕೃಷ್ಣಪ್ಪ ಕರಣಿಕ, ಉಮೇಶ ನರೋಣಾ, ರೇವಣಸಿದ್ದ ಜಾಲಿ, ನಗರ ಸಂಚಾಲಕ ರಾಜು ಸಂಕಾ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.
ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಸಿದ್ದಲಿಂಗಯ್ಯ ಅವರ ಸ್ಮರಣಾರ್ಥ ನುಡಿನಮನ ಕಾರ್ಯಕ್ರಮ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಯಶವಂತರಾಯ ಅಷ್ಠಗಿ, ‘ತಮ್ಮ ಕಾವ್ಯ ಮತ್ತು ವಿಮರ್ಶಾ ಕೃತಿಗಳ ಮೂಲಕ ಶೋಷಿತ ವರ್ಗಕ್ಕೆ ಸ್ವಾಭಿಮಾನದ ಕಿಚ್ಚು ಹಚ್ಚಿದಲ್ಲದೆ, ಸಮಾನತೆಗಾಗಿ ಹೋರಾಡಿದ ಮತ್ತು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿದ ಮಹಾನ್ ಕವಿ ಡಾ.ಸಿದ್ದಲಿಂಗಯ್ಯನವರು. ಅವರ ಹೊಲೆಮಾದಿಗರ ಹಾಡು, ಕಪ್ಪು ಕಾಡಿನ ಹಾಡು, ಮೆರವಣಿಗೆ, ಹಕ್ಕಿ ನೋಟ ಮತ್ತು ಅವರ ಆತ್ಮ ಕಥೆ ಊರುಕೇರಿ ಅವರನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾಗಿಸಿದೆ’ ಎಂದರು.
‘ಜೀವನದುದ್ದಕ್ಕೂ ಕನ್ನಡ ಸಾಹಿತ್ಯ ಹಾಗೂ ದಲಿತ–ದಮನಿತರ ನೋವಿಗೆ ತಮ್ಮ ಹರಿತವಾದ ಲೇಖನಗಳಿಂದ ದನಿಯಾಗಿದ್ದ ಅವರು, ಜ್ಞಾನಪೀಠ ಪ್ರಶಸ್ತಿಗೆ ಅರ್ಹರಾಗಿದ್ದರೂ, ಪ್ರಶಸ್ತಿ ಲಭಿಸದಿರುವುದು ಕನ್ನಡ ಸಾಹಿತ್ಯ ಮತ್ತು ಶೋಷಿತ ವರ್ಗಗಳಿಗೆ ಆದ ಅನ್ಯಾಯ’ ಎಂದು ಬೇಸರ ವ್ಯಕ್ತಪಡಿಸಿದರು.
ನುಡಿ–ನಮನ ಸಂದರ್ಭಲ್ಲಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕನ್ನಡ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಸಂಶೋಧಕ ಮುಡಬಿ ಗುಂಡೆರಾವ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ, ಮಂಜುನಾಥ ಕಂಬಳಿಮಠ, ಸಂತೋಷ ಜವಳಿ, ದೇವೇಂದ್ರಪ್ಪ ಬಡಿಗೇರ, ಸಂತೋಷ ಗುಡ್ಡಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.