ADVERTISEMENT

ಪರೀಕ್ಷೆಗೆ ಅರ್ಧದಷ್ಟು ಮಾತ್ರ ಹಾಜರ್‌

ಪೊಲೀಸ್‌ ನೇಮಕಾತಿ: ಅರ್ಜಿ ಸಲ್ಲಿಸಿದ 13,996 ಪೈಕಿ 7,796 ಮಂದಿ ಗೈರು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 4:18 IST
Last Updated 23 ನವೆಂಬರ್ 2020, 4:18 IST
ಕಲಬುರ್ಗಿಯಲ್ಲಿ ಭಾನುವಾರ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಹಾಜರಿ ಸಂಖ್ಯೆಯನ್ನು ಹುಡುಕಲು ಮುಗಿಬಿದ್ದರು
ಕಲಬುರ್ಗಿಯಲ್ಲಿ ಭಾನುವಾರ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಹಾಜರಿ ಸಂಖ್ಯೆಯನ್ನು ಹುಡುಕಲು ಮುಗಿಬಿದ್ದರು   

ಕಲಬುರ್ಗಿ: ಜಿಲ್ಲೆಯಲ್ಲಿ ಭಾನುವಾರ ನಡೆದ ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೆಬಲ್ (ಕೆಎಸ್ಆರ್‌ಪಿ, ಐಆರ್‌ಬಿ)‍ ಪರೀಕ್ಷೆಗೆ ಅರ್ಧದಷ್ಟು ಅಭ್ಯರ್ಥಿಗಳು ಗೈರಾದರು. ಅರ್ಜಿ ಹಾಕಿದ್ದ 13,996 ಪೈಕಿ 7,796 ಅಭ್ಯರ್ಥಿಗಳು ಮಾತ್ರ ಹಾಜರಾದರು. ಉಳಿದ 6,200 ಮಂದಿ ಪರೀಕ್ಷೆಯಿಂದ ದೂರ ಉಳಿದರು.

ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ 14 ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆಯಿಂದ 13 ಸೇರಿ ಜಿಲ್ಲೆಯಲ್ಲಿ 27 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಬೆಳಿಗ್ಗೆ 11ರಿಂದ ಮಧ್ಯಾಹ್ನ 12.30ರವರೆಗೆ ನಡೆದವು.

ಜಿಲ್ಲೆಯ ವಿವಿಧೆಡೆ ತೆರೆದ 13 ಕೇಂದ್ರಗಳಲ್ಲಿಅರ್ಜಿ ಹಾಕಿದ್ದ 4,996 ಜನರ ಪೈಕಿ 2,796 ಅಭ್ಯರ್ಥಿಗಳು ಮಾತ್ರ ಹಾಜರಾದರು. ಉಳಿದ 2,200 ಮಂದಿ ಪರೀಕ್ಷೆಯಿಂದ ದೂರ ಉಳಿದರು. ಪರೀಕ್ಷೆಯಲ್ಲಿ ಎಲ್ಲಿಯೂ ಅಕ್ರಮ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಮಾಹಿತಿ ನೀಡಿದರು.

ADVERTISEMENT

ಕಲಬುರ್ಗಿ, ಬೀದರ್‌, ರಾಯಚೂರು, ಯಾದಗಿರಿ, ಕೊಪ್ಪಳ, ವಿಜಯಪುರ ಜಿಲ್ಲೆಗಳೂ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ಅಭ್ಯರ್ಥಿಗಳು ಕೂಡ ಇಲ್ಲಿಯೇ ಪರೀಕ್ಷೆ ತೆಗೆದುಕೊಂಡಿದ್ದರು.

ಪರೀಕ್ಷೆ ಮುಗಿದ ಬಳಿಕ ಮಧ್ಯಾಹ್ನ 1ರಿಂದ 4ರವರೆಗೆ ಅಭ್ಯರ್ಥಿಗಳು ತಂಡೋಪತಂಡವಾಗಿ ಬಸ್‌ ನಿಲ್ದಾಣದತ್ತ ಸಾಗಿದರು. ಬೈಕ್‌, ಆಟೊ, ಜೀಪ್‌ ಮುಂತಾದ ವಾಹನಗಳಲ್ಲಿ ಬಂದವರು, ಕಾಲ್ನಡಿಗೆಯಲ್ಲಿ ಹೊರಟವರೆಲ್ಲ ಬಸ್‌ ನಿಲ್ದಾಣದಲ್ಲಿ ಸೇರಿದ್ದರಿಂದ ಜನಸಂದಣಿ ಕಂಡುಬಂತು.

ಕೊಠಡಿಗಳಲ್ಲಿ ವ್ಯವಸ್ಥೆ: ‌ಪರೀಕ್ಷೆಯಲ್ಲಿ ಅಕ್ರಮ ತಡೆಯುವ ಉದ್ದೇಶದಿಂದ ಈ ಬಾರಿ ಬಿಗಿ ಕ್ರಮ ಕೈಗೊಳ್ಳಲಾಗಿತ್ತು. ಪ್ರತಿ ಪರೀಕ್ಷಾ ಕೊಠಡಿಗೂ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು ಕಡ್ಡಾಯ ಮಾಡಲಾಗಿತ್ತು. ಇದರ ವೀಕ್ಷಣೆಗೆ ಪ್ರತ್ಯೇಕ ಸಿಬ್ಬಂದಿ ಕೂಡ ನೇಮಿಸಲಾಗಿತ್ತು.

ಕೇಂದ್ರಗಳ ಗೇಟ್‌ ಬಳಿಯೇ ಎಲ್ಲರೂ ಮಾಸ್ಕ್‌ ಧರಿಸುವಂತೆ ನೋಡಿಕೊಳ್ಳಲಾಯಿತು. ಮಾಸ್ಕ್‌ ಹಾಕದವರಿಗೆ ಇಲಾಖೆಯಿಂದಲೇ ನೀಡಲಾಯಿತು. ಪ್ರತಿಯೊಬ್ಬರಿಗೂ ಸ್ಯಾನಿಟೈಸರ್‌ ನೀಡಿ, ಥರ್ಮಲ್‌ ಗನ್‌ನಿಂದ ಅವರ ದೇಹದ ಉಷ್ಣಾಂಶ ತಪಾಸಣೆ ಮಾಡಲಾಯಿತು.

ಹೆಚ್ಚಿನ ಉಷ್ಣಾಂಶ ಕಂಡುಬಂದವರಿಗಾಗಿ ಎರಡು ಪ್ರತ್ಯೇಕ ಪರೀಕ್ಷಾ ಕೊಠಡಿಗಳನ್ನು ಸಿದ್ಧಗೊಳಿಸಲಾಗಿತ್ತು. ಆದರೆ, ಯಾರಲ್ಲೂ ಜ್ವರ, ಕೆಮ್ಮು ಅಥವಾ ಇತರ ರೀತಿಯ ಲಕ್ಷಣಗಳು ಕಂಡುಬರಲಿಲ್ಲ.

ಕೊಠಡಿಗಳಲ್ಲಿ ತಲಾ 20 ಅಭ್ಯರ್ಥಿಗಳನ್ನು ಮಾತ್ರ (ಒಂದು ಡೆಸ್ಕ್‌ನಲ್ಲಿ ಒಬ್ಬರು) ಬಿಡಲಾಯಿತು. ಇದರಿಂದ ಒಬ್ಬರಿಂದ ಒಬ್ಬರಿಗೆ ಕನಿಷ್ಠ ದೈಹಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಯಿತು.

ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಇನ್‌ಸ್ಪೆಕ್ಟರ್‌, ಪ್ರತಿ ಮೂರು ಸೆಂಟರ್‌ಗಳಿಗೆ ಒಬ್ಬ ಡಿಎಸ್‌ಪಿ ಹಾಗೂ ಇವರಿಗೆ ತಲಾ ನಾಲ್ವರು ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು.‌ 20 ಅಭ್ಯರ್ಥಿಗಳಿಗೆ ಒಬ್ಬ ಪರೀಕ್ಷಾ ಮೇಲ್ವಿಚಾ ರಕರನ್ನು ನೇಮಕ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.