ಕಲಬುರಗಿ: ಹಿಂದೆ ಮುಂದೆ ಯಾರೂ ಇಲ್ಲದ, ಹಾದಿ ಬೀದಿಗಳಲ್ಲಿ ಬಿದ್ದು ಇಹಲೋಕ ತ್ಯಜಿಸಿದ ವಾರಸುದಾರರಿಲ್ಲದ ಶವಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಮೃತರ ವಿವರ, ಸಂಬಂಧಿಕರ ಮಾಹಿತಿ ಕಲೆ ಹಾಕುವುದು ಪೊಲೀಸರಿಗೆ ಸವಾಲಾಗಿದೆ.
ನಗರದ ರೈಲು ನಿಲ್ದಾಣ, ಬಸ್ ನಿಲ್ದಾಣ, ಸಾರ್ವಜನಿಕ ಉದ್ಯಾನ, ಧಾರ್ಮಿಕ ಕೇಂದ್ರಗಳು, ವೃತ್ತಗಳು, ಆಸ್ಪತ್ರೆಗಳ ಬಳಿ ಸಂಬಂಧಿಕರು ಇಲ್ಲದವರು ಅನಾರೋಗ್ಯ ಪೀಡಿತರ ಸ್ಥಿತಿಯಲ್ಲಿ ಪತ್ತೆಯಾಗುತ್ತಾರೆ. ಮತ್ತೆ ಕೆಲವು ವ್ಯಕ್ತಿಗಳು ಶವವಾಗಿ ಸಿಗುತ್ತಾರೆ.
ಕುಟುಂಬದ ಸದಸ್ಯರ ಯಾವುದೇ ಸುಳಿವು ಇಲ್ಲದೆ ಅನಾಥರಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಪುರುಷರ ಪ್ರಮಾಣವೇ ಹೆಚ್ಚಿದೆ. 2023ರಲ್ಲಿ 24 ಅಪರಿಚಿತರು ಶವವಾಗಿ ಪತ್ತೆಯಾಗಿದ್ದರು. ಅವರಲ್ಲಿ 20 ಮಂದಿ ಪುರುಷರೇ ಇದ್ದರು. ಮಹಿಳೆಯರು ಕೇವಲ ನಾಲ್ವರು ಇದ್ದರು ಎಂಬುದು ನಗರ ಪೊಲೀಸ್ ಕಮಿಷನರೇಟ್ ನೀಡಿದ ಮಾಹಿತಿಯಿಂದ ಗೊತ್ತಾಗಿದೆ.
2024ರಲ್ಲಿ ಅನಾಥವಾಗಿ ಇಹಲೋಕ ತ್ಯಜಿಸುವವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಅವರಲ್ಲಿ 44 ಮಂದಿ ಪುರುಷರು ಹಾಗೂ ಒಂಬತ್ತು ಮಂದಿ ಮಹಿಳೆಯರು ಇದ್ದಾರೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ 2024ರಲ್ಲಿ ದುಪ್ಪಟ್ಟು ಏರಿಕೆಯಾಗಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ 21 ಮಂದಿ ವಾರಸುದಾರರು ಇಲ್ಲದೆ ಶವವಾಗಿ ಪತ್ತೆಯಾಗಿದ್ದಾರೆ.
ಅನಾರೋಗ್ಯ ಪೀಡಿತರಾದ ನಿರ್ಗತಿಕರನ್ನು ಪೊಲೀಸರು ಸ್ಥಳೀಯರ ಸಹಾಯದಿಂದ ಜಿಮ್ಸ್ ಆಸ್ಪತ್ರೆಗೆ ಕರೆತಂದು ದಾಖಲಿಸಿ ಚಿಕಿತ್ಸೆ ಕೊಡಿಸುತ್ತಾರೆ. ಅವರಲ್ಲಿ ಕೆಲವರು ಚಿಕಿತ್ಸೆಗೆ ಸ್ಪಂದಿಸಿ ಬದುಕಿ ಉಳಿದರೆ, ಮತ್ತೆ ಕೆಲವರು ಅಸುನೀಗುತ್ತಾರೆ.
ಮೃತರ ಯಾವುದೇ ರೀತಿಯ ಸುಳಿವು ಸಿಗದಿದ್ದಾಗ ಪೊಲೀಸರು ಆ ಶವಗಳನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸುತ್ತಾರೆ. ವಾರಸುದಾರರು ಬಾರದೆ ಇದ್ದಾಗ ಇಹಲೋಕ ಯಾತ್ರೆ ಮುಗಿಸಿದವರನ್ನು ಪೊಲೀಸರೇ ಗೌರವಯುತವಾಗಿ ಕಳುಹಿಸಿಕೊಡುತ್ತಾರೆ.
‘ಅನಾಥ ಶವಗಳನ್ನು ಆಸ್ಪತ್ರೆಗೆ ಸಾಗಿಸಿ ಶವಾಗಾರದಲ್ಲಿ ಇರಿಸುತ್ತೇವೆ. ಶವದ ಭಾವಚಿತ್ರ, ದೇಹದ ಮೇಲಿನ ಗುರುತುಗಳು, ಚರ್ಮದ ಬಣ್ಣ, ಬಟ್ಟೆಗಳೊಂದಿಗಿನ ಮಾಹಿತಿಯ ಭಿತ್ತಿ ಪತ್ರವನ್ನು ಬಸ್ ನಿಲ್ದಾಣ, ರೈಲು ನಿಲ್ದಾಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗುತ್ತದೆ. ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಕಟಣೆ ಕೊಟ್ಟು ಸಂಬಂಧಿಕರನ್ನು ಮುಟ್ಟುವ ಪ್ರಯತ್ನ ಮಾಡುತ್ತೇವೆ’ ಎನ್ನುತ್ತಾರೆ ಪೊಲೀಸರು.
‘ಎರಡ್ಮೂರು ದಿನಗಳ ವರೆಗೆ ವಾರಸುದಾರರಿಗಾಗಿ ಕಾಯುತ್ತೇವೆ. ಯಾರೂ ಬರದಿದ್ದಾಗ ಎಂಎಲ್‌ಸಿ ಮಾಡಲಾಗುತ್ತದೆ. ಅಂತ್ಯ ಸಂಸ್ಕಾರದ ಬಳಿಕ ಯಾರಾದರೂ ಸಂಬಂಧಿಕರು ಬಂದರೆ ಅವರಿಗೆ ಮರಣ ಪ್ರಮಾಣ ಪತ್ರಗಳು ಸಿಗಲಿ ಎಂಬ ಕಾರಣಕ್ಕೆ ಪಾಲಿಕೆ ಅಥವಾ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯ ಅಧಿಕಾರಿಗಳ ಮೂಲಕ ಯುಡಿಆರ್ (ಅಸಹಜ ಸಾವು) ಪ್ರಕರಣವನ್ನು ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅಧಿಕಾರಿಗಳ ಸಮ್ಮುಖದಲ್ಲಿ ಮಣ್ಣು ಮಾಡುವುದು, ಇಲ್ಲವೆ ದಹನ ಮಾಡಲಾಗುತ್ತದೆ’ ಎಂದರು.
ಹಳ್ಳಿಗಳಲ್ಲಿ ಚಂದಾ ಎತ್ತಿ ಅಂತ್ಯಸಂಸ್ಕಾರ
‘ನಗರ ಪ್ರದೇಶದಲ್ಲಿ ಪತ್ತೆಯಾಗುವಷ್ಟು ಅನಾಥ ಶವಗಳು ಗ್ರಾಮೀಣದಲ್ಲಿ ಇರುವುದಿಲ್ಲ. ವರ್ಷದಲ್ಲಿ ಮೂರ್ನಾಲ್ಕು ಮಂದಿ ಸಂಬಂಧಿಕರಿಲ್ಲದ ಶವಗಳು ಕಂಡುಬರುತ್ತವೆ. ಊರಿನವರೆಲ್ಲರೂ ಸೇರಿ ಚಂದಾ ಎತ್ತಿ ಬಂದ ದುಡ್ಡಲ್ಲಿ ಅವರ ಜಾತಿ, ಧರ್ಮದ ಅನುಸಾರ ಅಂತ್ಯಸಂಸ್ಕಾರ ಮಾಡುವ ಪದ್ಧತಿ ಇನ್ನೂ ಇದೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಸುಧಾಮ ಧನ್ನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.