ADVERTISEMENT

ಕಲಬುರಗಿ | ‘ಆಯುಷ್ಮಾನ್ ಕಾರ್ಡ್ ಸದ್ಬಳಕೆ ಮಾಡಿ’

ಕಮಲಾಪುರ: ತಾಲ್ಲೂಕು ಮಟ್ಟದ ಆರೋಗ್ಯ ಮೇಳ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 4:50 IST
Last Updated 19 ಏಪ್ರಿಲ್ 2022, 4:50 IST
ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕು ಮಟ್ಟದ ಆರೋಗ್ಯ ಮೇಳವನ್ನು ಸಂಸದ ಉಮೇಶ ಜಾಧವ ಉದ್ಘಾಟಿಸಿದರು, ಶಾಸಕ ಬಸವರಾಜ ಮತ್ತಿಮೂಡ, ಜಿಲ್ಲಾಧಿಕಾರಿ ಯಶವಂತ ಗುರುಕರ್‌ ಇದ್ದರು
ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕು ಮಟ್ಟದ ಆರೋಗ್ಯ ಮೇಳವನ್ನು ಸಂಸದ ಉಮೇಶ ಜಾಧವ ಉದ್ಘಾಟಿಸಿದರು, ಶಾಸಕ ಬಸವರಾಜ ಮತ್ತಿಮೂಡ, ಜಿಲ್ಲಾಧಿಕಾರಿ ಯಶವಂತ ಗುರುಕರ್‌ ಇದ್ದರು   

ಕಮಲಾಪುರ: ‘ಆರೋಗ್ಯ ಸಂಬಂಧಿ ಸಮಸ್ಯೆಯಾದಲ್ಲಿ ಸರ್ಕಾರದ ನೆರವು ಪಡೆಯಲು ಅರ್ಹರೆಲ್ಲರೂ ಆಯುಷ್ಮಾನ್ ಭಾರತ ಕಾರ್ಡ್‌ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಂಸದ ಉಮೇಶ ಜಾಧವ್‌ ಕರೆ ನೀಡಿದರು.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಆರೋಗ್ಯಮೇಳ ಉದ್ಘಾಟಿಸಿ ಮಾತನಾಡಿದ ಅವರು, ‘ಬಿಪಿಎಲ್‌ ಪಡಿತರ ಚೀಟಿದಾರರು ಆಯುಷ್ಮಾನ ಕಾರ್ಡ್‌ ಹೊಂದಿದರೆ ಯಾವುದೇ ಆರೋಗ್ಯ ಸಮಸ್ಯೆಯಿಂದ ಬಳಲುವವರಿಗೆ ವರ್ಷಕ್ಕೆ ₹ 5ಲಕ್ಷದವರಗೆ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ’ ಎಂದರು.

‘ರಾಜ್ಯ ಸೇರಿದಂತೆ ಬೇರೆ ರಾಜ್ಯಗಳ ಪ್ರತಿಷ್ಠಿತ ಆಸ್ಪತ್ರೆಗಳಲ್ಲೂ ಚಿಕತ್ಸೆ ಪಡೆಯಬಹುದು. ಕೇವಲ ₹ 10 ದರದಲ್ಲಿ ಆಯುಷ್ಮಾನ್ ಕಾರ್ಡ್‌ ಮಾಡಿಸಿಕೊಂಡರೆ ₹ 5 ಲಕ್ಷ ವಿಮೆ ದೊರೆಯಲಿದೆ. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲರಿಗೂ ಮಾಹಿತಿ ನೀಡಬೇಕು. ಒಂದು ತಿಂಗಳಲ್ಲಿ ಕಮಲಾಪುರ ತಾಲ್ಲೂಕಿನಲ್ಲೆ ಶೇ100 ಜನರಿಗೆ ಆಯುಷ್ಮಾನ ಕಾರ್ಡ್‌ ಮಾಡಿಸಿ ಕೊಡಬೇಕು’ ಎಂದು ಅವರು ಸೂಚಿಸಿದರು.

ADVERTISEMENT

ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ, ‘ಕಮಲಾಪುರ ಆರೋಗ್ಯ ಕೇಂದ್ರದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ತಾಲ್ಲೂಕು ಮಟ್ಟದ ಆರೋಗ್ಯ ಮೇಳವನ್ನು ಜಿಲ್ಲೆಯಲ್ಲೆ ಮೊದಲಬಾರಿಗೆ ಕಮಲಾಪುರದಲ್ಲೆ ಆಯೋಜಿಸಿರುವುದು ಸಂತಸ ತಂದಿದ’ ಎಂದರು.

‘15 ತರಹದ ಕಾಯಿಲೆಗಳಿಗೆ ತಪಾಸಣೆ, ಚಿಕಿತ್ಸೆ ನೀಡಲು ನುರಿತ ತಜ್ಞ ವೈದ್ಯರು ಭಾಗವಹಿಸಿದ್ದಾರೆ. ಕಮಲಾಪುರ ‌ಆರೋಗ್ಯ ಕೇಂದ್ರಕ್ಕೆ ನನ್ನ ಸ್ವಂತ ಖರ್ಚಿನಲ್ಲೇ ಆಂಬುಲೆನ್ಸ್ ಒದಗಿಸುವೆ’ ಎಂದರು.

ಜಿಲ್ಲಾಧಿಕಾರಿ ಯಶವಂತ ಗುರುಕರ್‌, ‘ಬಡವರು, ಜನಸಾಮಾನ್ಯರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರವು ಹಲವು ಯೋಜನೆಗಳನ್ನು ಪರಿಚಯಿಸುತ್ತಿದೆ. ಸೌಲಭ್ಯ ಪಡೆಯಲು ಜನರು ಮುಂದಾಗಬೇಕು’ ಎಂದರು.

ತಹಶೀಲ್ದಾರ್ ಸುರೇಶ ವರ್ಮಾ ಮಾತನಾಡಿದರು. ಕಮಲಾಪುರ ಶಾಂತವೀರ ದೇವರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಶ ಶಶಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಮುಳಗೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಗುರುಲಿಂಗಪ್ಪ. ಜಿಲ್ಲಾ ಆರೋಗ್ಯಾಧಿಕಾರಿ ಶರಣಬಸಮ್ಮ ಗಣಜಲಖೇಡ, ತಾಲ್ಲೂಕು ಆರೋಗ್ಯಾಧಿಕಾರಿ ಮಾರುತಿ ಕಾಂಬಳೆ, ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಕುಷ್ಟರೋಗ ಆಧಿಕಾರಿ ರಾಜಕುಮಾರ ಕುಲಕರ್ಣಿ, ಆಯುಷ್‌ ಸಹಾಯಕ ನಿರ್ದೇಶಕಿ ಗಿರಿಜಾ, ಅಂಕಿತ ಅಧಿಕಾರಿ ಡಾ.ಶಿವಶರಣಪ್ಪ, ಕಮಲಾಪುರ ವೈದ್ಯಾಧಿಕಾರಿ ವಿಜಯ ಸಾಮುವಲ್‌, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಶಿವಕುಮಾರ ದೇಶಮುಖ, ಮುಖಂಡರಾದ ಶೃತಿ ಬಿರಾದಾರ, ರಾಜು ಕೋಟೆ, ಅಮೃತ ಗೌರೆ, ಶಿವಕುಮಾರ ದೋಶೆಟ್ಟಿ, ಸುರೇಶ ರಾಠೋಡ್‌, ಪ್ರಶಾಂತ ಮಾನಕಾರ, ಶರಣು ರಟಕಲ್‌, ನಾಗರಾಜ ಹುಣಚಿಗಿಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.