ADVERTISEMENT

ಸಂಭ್ರಮದ ನವರಾತ್ರಿ ಬ್ರಹ್ಮೋತ್ಸವ

ಸುಗೂರ ಕೆ. ವೆಂಕಟೇಶ್ವರ ಸ್ವಾಮಿ ದೇವಸ್ಥಾನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 12:27 IST
Last Updated 10 ಅಕ್ಟೋಬರ್ 2019, 12:27 IST
ಕಾಳಗಿ ತಾಲ್ಲೂಕಿನ ಸುಗೂರ ಕೆ. ಗ್ರಾಮದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಬ್ರಹ್ಮೋತ್ಸವ ಅಂಗವಾಗಿ ಗುರುವಾರ ಗಜವಾಹನ ಉತ್ಸವ ಅದ್ಧೂರಿಯಾಗಿ ಜರುಗಿತು
ಕಾಳಗಿ ತಾಲ್ಲೂಕಿನ ಸುಗೂರ ಕೆ. ಗ್ರಾಮದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಬ್ರಹ್ಮೋತ್ಸವ ಅಂಗವಾಗಿ ಗುರುವಾರ ಗಜವಾಹನ ಉತ್ಸವ ಅದ್ಧೂರಿಯಾಗಿ ಜರುಗಿತು   

ಕಾಳಗಿ: ತಿರುಮಲ ತಿರುಪತಿ ಹಾಥೀರಾಮಜಿ ಮಠದ ಕಾಳಗಿ ತಾಲ್ಲೂಕಿನ ಸುಗೂರ ಕೆ. ಗ್ರಾಮದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಬ್ರಹ್ಮೋತ್ಸವ ಸಮಾರಂಭ 8ನೇ ದಿನವಾದ ಗುರುವಾರ ಅದ್ಧೂರಿಯಾಗಿ ಜರುಗಿತು.

ಹಾಥೀರಾಮಜಿ ಮಠದ ಪೂಜ್ಯ ಅರ್ಜುನದಾಸ ಮಹಾಂತವಾರು ಸಾನ್ನಿಧ್ಯದಲ್ಲಿ ಬೆಳಿಗ್ಗೆ ವೆಂಕಟೇಶ್ವರಸ್ವಾಮಿ ಮೂರ್ತಿಗೆ ವಿಶೇಷ ಪೂಜೆ, ತುಳಸಿ ಅರ್ಚನೆ ನಂತರದಲ್ಲಿ ಹೋಮ, ಪೂಜೆ ನೆರವೇರಿತು.

ಬಳಿಕ ಹೂಹಾರ ಅಲಂಕೃತದ ಗಜವಾಹನ ಉತ್ಸವಕ್ಕೆ ಚಾಲನೆ ನೀಡಲಾಯಿತು. ಸ್ಥಳೀಯ ಮತ್ತು ತಾಂಡಾ ಶಾಲಾಮಕ್ಕಳ, ಯುವಕರ ಕೋಲಾಟ, ನೃತ್ಯದ ಆಕರ್ಷಣೆಯೊಂದಿಗೆ ಹನುಮಾನ ಗುಡಿ, ಬಡಿಗೇರ ಕಟ್ಟೆ ರಸ್ತೆ ಮಾರ್ಗವಾಗಿ ಉತ್ಸವವು ಸ್ವಸ್ಥಾನಕ್ಕೆ ಬಂದು ತಲುಪಿತು.

ADVERTISEMENT

ದೇವಸ್ಥಾನದ ಸಂಚಾಲಕ ಕೃಷ್ಣದಾಸ ಮಹಾರಾಜ, ಪ್ರಧಾನ ಅರ್ಚಕ ಪವನದಾಸ ಮಹಾರಾಜ, ಕೇಶವದಾಸ ಮಹಾರಾಜ, ನಾಗಸಾಧು ಬಾಲಿಕದಾಸ ಮಹಾರಾಜ, ಓಂಪ್ರಕಾಶ ಮಹಾರಾಜ, ಶಿವು ನಾರಾಯಣ ಮಹಾರಾಜರು ಉತ್ಸವದ ನೇತೃತ್ವ ವಹಿಸಿದ್ದರು.

ಹಲಗೆ, ಡೊಳ್ಳು, ಭಾಜಾ, ಭಜಂತ್ರಿ ವಾದ್ಯಮೇಳಗಳು ಝೇಂಕರಿಸಿದವು. ಸ್ಥಳೀಯರು, ನೆಂಟರು ರಸ್ತೆ ಬದಿಯ ಎಲ್ಲೆಂದರಲ್ಲಿ ನಿಂತುಕೊಂಡು ಉತ್ಸವವನ್ನು ಕಣ್ತುಂಬಿ ಕೊಂಡರು. ತದನಂತರದಲ್ಲಿ ಕುಸ್ತಿ ಪಂದ್ಯ ಜರುಗಿತು.

ಅರಣಕಲ್ ಜಿಲ್ಲಾ ಪಂಚಾಯಿತಿ ಸದಸ್ಯ ರಾಜೇಶ ಗುತ್ತೇದಾರ, ಮುಖಂಡ ಸುರಾಜ ತಿವಾರಿ, ಜಗದೀಶ ಪಾಟೀಲ ಪಾಲ್ಗೊಂಡಿದರು.

ಈ ಮುಂಚೆ ಬುಧವಾರ ರಾತ್ರಿ ಗಜವಾಹನ ವಿರಾಜಮಾನ ನಡೆಯಿತು. ಸೇಡಂನ ಸ್ವಾತಿ ಸಂಗಡಿಗರು ದಾಂಡಿಯಾ ನೃತ್ಯ ಪ್ರದರ್ಶಿಸಿದರು. ಐಶ್ವರ್ಯ ಕುಲಕರ್ಣಿ, ವೈಷ್ಣವಿದೇವಿ ಭರತನಾಟ್ಯ ಮಾಡಿದರು. ಕಲಾವಿದ ರಾಚಯ್ಯಸ್ವಾಮಿ ಖಾನಾಪುರ, ಶರಣು ದೇಸಾಯಿ ಅವರಿಂದ ನಗೆಹಬ್ಬ ಜರುಗಿತು.

ತಾಲ್ಲೂಕು ಪಂಚಾಯಿತಿ ಸದಸ್ಯೆ ನೀಲಾಬಾಯಿ ಭೀಮರಾವ ರಾಠೋಡ, ಗೋಟೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಮಾಣಿಕರಾವ ಪೊಲೀಸ್ ಪಾಟೀಲ, ಮುಖಂಡ ಸುಭಾಷ ರಾಠೋಡ, ಅರುಣಕುಮಾರ ಪವಾರ, ಪರಮೇಶ್ವರ ಪಾಟೀಲ, ಚಂದ್ರಕಾಂತ ರೆಮಾಣಿ, ಶರಣಯ್ಯ ಮಠಪತಿ, ಸಿದ್ದು ಕೇಶ್ವರ, ಪೀರಪ್ಪ ಚಿಂತಪಳ್ಳಿ, ಖೇಮು ರಾಠೋಡ, ಸಂಜು ಕಾರಬಾರಿ, ನಾಗೇಂದ್ರ ಅಂಕನ, ದತ್ತು ಮುಚೆಟ್ಟಿ, ಉದಯಕುಮಾರ ಹಡಪದ ಮೊದಲಾದವರು ಇದ್ದರು.

ಇಂದು ತೆರೆ: ಅಕ್ಟೋಬರ್ 3ರಂದು ಆರಂಭಗೊಂಡ ನವರಾತ್ರಿ ಬ್ರಹ್ಮೋತ್ಸವ ಶುಕ್ರವಾರ 9ನೇ ದಿನಕ್ಕೆ ಕಾಲಿಟ್ಟಿದೆ. ಹೋಮ, ಪೂಜೆ, ತುಳಸಿ ಅರ್ಚನೆ, ಪಲ್ಲಕ್ಕಿ ಉತ್ಸವ, ಚಕ್ರಸ್ನಾನ ಮತ್ತು ಶಯನ ಸೇವೆಯೊಂದಿಗೆ ಇಂದು ಸಂಭ್ರಮದ ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.