ADVERTISEMENT

ಕಾಳಗಿ: ನಿವೃತ್ತ ಯೋಧನಿಗೆ ಭವ್ಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 2:24 IST
Last Updated 4 ನವೆಂಬರ್ 2020, 2:24 IST
ಕಾಳಗಿ ತಾಲ್ಲೂಕಿನ ವಜೀರಗಾಂವ ಗ್ರಾಮದಲ್ಲಿ ನಿವೃತ್ತ ಯೋಧ ರೇವಣಸಿದ್ದಪ್ಪ ಸುಬೇದಾರ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು
ಕಾಳಗಿ ತಾಲ್ಲೂಕಿನ ವಜೀರಗಾಂವ ಗ್ರಾಮದಲ್ಲಿ ನಿವೃತ್ತ ಯೋಧ ರೇವಣಸಿದ್ದಪ್ಪ ಸುಬೇದಾರ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು   

ಕಾಳಗಿ: ಭಾರತ ದೇಶದ ವಿವಿಧೆಡೆ 33 ವರ್ಷ ಸಿಆರ್‌ಪಿಎಫ್ ಯೋಧನಾಗಿ ಸೇವೆ ಸಲ್ಲಿಸಿ ಈಚೆಗೆ ಸ್ವಯಂ ನಿವೃತ್ತಿ ಪಡೆದು ಹುಟ್ಟೂರಿಗೆ ಮರಳಿದ ತಾಲ್ಲೂಕಿನ ವಜೀರಗಾಂವ ಗ್ರಾಮದ ರೇವಣಸಿದ್ದಪ್ಪ ಸಂಬಣ್ಣ ಸುಬೇದಾರ ಅವರನ್ನು ಗ್ರಾಮಸ್ಥರು ಭಾನುವಾರ ಅದ್ಧೂರಿಯಾಗಿ ಸ್ವಾಗತಿಸಿದರು.

ಜಮ್ಮು, ಹರಿಯಾಣ, ಕಾಶ್ಮೀರ, ದಿಲ್ಲಿ, ಉತ್ತರಪ್ರದೇಶ, ತ್ರಿಪುರ, ಮಣಿಪುರ, ಅಸ್ಸಾಂ, ನಾಗಾಲ್ಯಾಂಡ್, ಬಿಹಾರ, ಜಾರ್ಖಂಡ್, ಛತ್ತೀಸ್‌ಘಡ, ಪಶ್ಚಿಮಬಂಗಾಳ ಮತ್ತು ಒಡಿಸ್ಸಾದಲ್ಲಿ ಸೇವೆ ಸಲ್ಲಿಸಿ ಹಿಂದಿರುಗಿದ ಅವರನ್ನು ಹೊಸಳ್ಳಿ ಕ್ರಾಸ್ ನಿಂದ ವಜೀರಗಾಂವ ಗ್ರಾಮದವರೆಗೆ ಪತ್ನಿ, ಶಿಕ್ಷಕಿ ಅಂಜನಾದೇವಿ ಜತೆಯಲ್ಲಿ ಹಲಗೆ, ಡೊಳ್ಳು, ಭಾಜಾ ಬಜಂತ್ರಿ ವಾದ್ಯಮೇಳದೊಂದಿಗೆ ಅಲಂಕೃತ ರಥದಲ್ಲಿ ಮೆರವಣಿಗೆ ಮಾಡಿದರು.

ನಿವೃತ್ತ ಯೋಧ ಹುಟ್ಟೂರೊಳಗೆ ಕಾಲಿಡುತ್ತಿದ್ದಂತೆ ಮಹಿಳೆಯರು ಆರುತಿ ಬೆಳಗಿದರು. ಮೆರವಣಿಗೆ ಮಧ್ಯೆ ಜೈಕಾರ ಮೊಳಗಿದವು. ಬಳಿಕ ನಡೆದ ಸಮಾರಂಭದಲ್ಲಿ ಅನೇಕ ಹಿರಿಯರು, ಮುಖಂಡರು, ಅಧಿಕಾರಿಗಳು, ಶಿಕ್ಷಕರು ಸನ್ಮಾನಿಸಿ ಗೌರವಿಸಿದರು.

ADVERTISEMENT

ರೇವಣಸಿದ್ದಪ್ಪ ಸಂಬಣ್ಣ ಸುಬೇದಾರಮಾತನಾಡಿ, ‘ಮನೆ ಮಂದಿ, ಬಂಧು-ಬಳಗ ಬಿಟ್ಟು ದೇಶದ ಸೇವೆ ಮಾಡಿದ್ದಕ್ಕೆ ಈ ದಿನ ತಾವು ನೀಡಿದ ಗೌರವಕ್ಕೆ ಚಿರ ಋಣಿಯಾಗಿದ್ದೇನೆ. ನಾನೀಗ ಸ್ವಯಂ ನಿವೃತ್ತಿ ಪಡೆದಿದ್ದರೂ ದೇಶಕ್ಕಾಗಿ ಅಗತ್ಯ ಎನಿಸಿದರೆ ಯಾವುದೇ ಸಂದರ್ಭದಲ್ಲಿ ದುಡಿಯಲು ಸಿದ್ಧನಿದ್ದೇನೆ. ನಮ್ಮ ಸೇನೆಯನ್ನು ಹೊರಗಿನ ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲದಷ್ಠು ಬಲಿಷ್ಠವಾಗಿದೆ’ ಎಂದರು.

ನಿವೃತ್ತ ಯೋಧನ ವಿದ್ಯಾಗುರುಗಳಾದ ಜಗನ್ನಾಥರೆಡ್ಡಿ ಪೊಂಗ, ಶರಣಪ್ಪ ಕೆರೊಳ್ಳಿ, ಪರ್ವತಯ್ಯ ಸಪಗೋಳ, ಹಿರಿಯ ಮುಖಂಡ ನೀಲಕಂಠಪ್ಪ ಗೌಡ, ಕೃಷಿ ಸಹಾಯಕ ನಿರ್ದೇಶಕ ಅನಿಲಕುಮಾರ ರಾಠೋಡ, ಅಭಿಲಾಷ್ ಸುಬೇದಾರ, ಪ್ರಕಾಶ ರಾಠೋಡ, ಭೀಮರೆಡ್ಡಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.