ADVERTISEMENT

ಕಲಬುರಗಿ | ‘ತೀವ್ರ ದೃಷ್ಟಿದೋಷ ನಿವಾರಣೆಗೆ ಐಸಿಎಲ್‌’

ಸಿದ್ಧರಾಮೇಶ್ವರ ಕಣ್ಣಿನ ಆಸ್ಪತ್ರೆಯಲ್ಲಿ ಸುಲಭ ಶಸ್ತ್ರಚಿಕಿತ್ಸೆ: ನೇತ್ರ ತಜ್ಞ ಡಾ.ಸಿದ್ದಲಿಂಗ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 5:24 IST
Last Updated 8 ಸೆಪ್ಟೆಂಬರ್ 2025, 5:24 IST
ಡಾ.ಸಿದ್ದಲಿಂಗ ರೆಡ್ಡಿ
ಡಾ.ಸಿದ್ದಲಿಂಗ ರೆಡ್ಡಿ   

ಕಲಬುರಗಿ: ‘ತೀವ್ರ ದೃಷ್ಟಿದೋಷದಿಂದ ಬಳಲುತ್ತಿರುವವರಿಗೆ ನಗರದ ಸಿದ್ಧರಾಮೇಶ್ವರ ಕಣ್ಣಿನ ಆಸ್ಪತ್ರೆಯಲ್ಲಿ ಸುಲಭ ಶಸ್ತ್ರಚಿಕಿತ್ಸೆ ಮೂಲಕ ಕಣ್ಣಿನೊಳಗೆ ಇಂಪ್ಲಾಂಟೆಬಲ್‌ ಫೆಕಿಕ್ ಕಾಂಟ್ಯಾಕ್ಟ್‌ ಲೆನ್ಸ್‌ (ಐಸಿಎಲ್‌) ಅಳವಡಿಸಲಾಗುತ್ತಿದೆ’ ಎಂದು ಆಸ್ಪತ್ರೆಯ ನೇತ್ರ ತಜ್ಞ ಡಾ.ಸಿದ್ದಲಿಂಗ ರೆಡ್ಡಿ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿಜಿಟಲ್ ಸಾಧನಗಳ ಮುಂದೆ ಹೆಚ್ಚು ಸಮಯ ಕಳೆಯುವ ಕಾರಣ ಹೆಚ್ಚಿನ ಜನರಲ್ಲಿ ದೃಷ್ಟಿದೋಷ ಸಾಮಾನ್ಯವಾಗಿದೆ. ದೂರ ಹಾಗೂ ಸಮೀಪ ದೃಷ್ಟಿದೋಷದಿಂದ ಬಳಲುವವರಲ್ಲಿ ಕಾರ್ನಿಯಾ ತೆಳುವಾಗಿರುತ್ತದೆ. ಅಸಮರ್ಪಕವಾಗಿರುತ್ತದೆ. ಅಂಥವರಿಗೆ ಲೇಸರ್ ಚಿಕಿತ್ಸೆ ಸಾಧ್ಯವಾಗುವುದಿಲ್ಲ’ ಎಂದರು.

‘2014ರಲ್ಲಿ ಈ ಸುಧಾರಿತ ಶಸ್ತ್ರಚಿಕಿತ್ಸೆಯನ್ನು ಪರಿಚಯಿಸಲಾಗಿದೆ. –30 ರವರೆಗೂ ದೃಷ್ಟಿದೋಷ ಹೊಂದಿರುವ 23 ವರ್ಷ ಮೀರಿದವರು ಹಾಗೂ 60 ವರ್ಷದೊಳಗಿನವರಿಗೆ ಇದನ್ನು ಅಳವಡಿಸಬಹುದು. ಈ ಶಸ್ತ್ರಚಿಕಿತ್ಸೆಗೂ ಮುಂಚೆ ಪ್ರಾಥಮಿಕ ನೇತ್ರ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಆರೋಗ್ಯ ಸ್ಥಿತಿಯನ್ನೂ ಗಣನೆಗೆ ತೆಗೆದುಕೊಂಡು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಐಸಿಎಲ್‌ ಕೇವಲ ಕಾಸ್ಮೆಟಿಕ್‌ ಪರಿಹಾರವಲ್ಲ. ಇತರ ಚಿಕಿತ್ಸೆಗಳಿಂದ ಸರಿಪಡಿಸಲಾಗದ ತೀವ್ರ ದೃಷ್ಟಿದೋಷವನ್ನು ಇದರಿಂದ ಸರಿಪಡಿಸಬಹುದು. ಇದು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿಲ್ಲ. ಇದರಿಂದ ಸ್ಪಷ್ಟ ದೃಷ್ಟಿ ಪಡೆಯಬಹುದು. ಲೆನ್ಸ್‌ ಅನ್ನು ತೆಗೆಯಬಹುದು ಹಾಗೂ ಬದಲಾಯಿಸಬಹುದು. ಇದು ಡೇ ಕೇರ್‌ ಶಸ್ತ್ರಚಿಕಿತ್ಸೆಯಾಗಿದೆ. ಕಡಿಮೆ ಅವಧಿಯಲ್ಲಿಯೇ ಮುಗಿಯುತ್ತದೆ’ ಎಂದರು.

‘ಇದುವರೆಗೂ ನಮ್ಮ ಆಸ್ಪತ್ರೆಯಲ್ಲಿ ಮೂವರಿಗೆ ಈ ಲೆನ್ಸ್‌ ಅಳವಡಿಸಲಾಗಿದೆ. ಅವರ ದೃಷ್ಟಿದೋಷ ಸರಿಯಾಗಿದೆ. ತೀವ್ರ ದೃಷ್ಟಿ ದೋಷ ಹೊಂದಿದವರು ಇದರ ಪ್ರಯೋಜನ ಪಡೆಯಬೇಕು’ ಎಂದು ಮನವಿ ಮಾಡಿದರು.

ಆಸ್ಪತ್ರೆಯ ನೇತ್ರ ತಜ್ಞೆ ರಾಜಶ್ರೀ ರೆಡ್ಡಿ ಮಾತನಾಡಿ, ‘ಮಕ್ಕಳಲ್ಲಿ ಹೆಚ್ಚು ದೃಷ್ಟಿದೋಷ ಕಂಡುಬರುತ್ತಿದೆ. ಆದ್ದರಿಂದ ಶಾಲೆಗಳಲ್ಲಿ 15,000ಕ್ಕೂ ಹೆಚ್ಚು ಮಕ್ಕಳ ಕಣ್ಣಿನ ತಪಾಸಣೆ ನಡೆಸಲಾಗಿದೆ. ಪ್ರತಿ 100 ವಿದ್ಯಾರ್ಥಿಗಳಲ್ಲಿ 20 ಮಕ್ಕಳಿಗೆ ದೃಷ್ಟಿದೋಷ ಇರುವುದು ಪತ್ತೆಯಾಗಿದೆ’ ಎಂದು ತಿಳಿಸಿದರು.

ನೇತ್ರ ತಜ್ಞೆ ರಾಜೇಶ್ವರಿ ರೆಡ್ಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.