ADVERTISEMENT

ಮತಕ್ಕೆ ದೇಶದ ಭವಿಷ್ಯ ರೂಪಿಸುವ ಶಕ್ತಿಯಿದೆ: ಪ್ರವೀಣ ನಾಯಕ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 5:25 IST
Last Updated 28 ಜುಲೈ 2025, 5:25 IST
ಕಲಬುರಗಿಯ ಸೇಂಟ್ ಜೋಸೆಫ್ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ‘ನನ್ನ ಮತ ಮಾರಾಟಕ್ಕಿಲ್ಲ–ಮತದಾರರ ಜಾಗೃತಿ ಆಂದೋಲನ’ ಕಾರ್ಯಕ್ರಮವನ್ನು ವಿವೇಕಾನಂದ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ಪ್ರವೀಣ ನಾಯಕ ಉದ್ಘಾಟಿಸಿದರು. ಸಾಹಿತಿ ಚಿ.ಸಿ.ನಿಂಗಣ್ಣ ಹಾಜರಿದ್ದರು
ಕಲಬುರಗಿಯ ಸೇಂಟ್ ಜೋಸೆಫ್ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ‘ನನ್ನ ಮತ ಮಾರಾಟಕ್ಕಿಲ್ಲ–ಮತದಾರರ ಜಾಗೃತಿ ಆಂದೋಲನ’ ಕಾರ್ಯಕ್ರಮವನ್ನು ವಿವೇಕಾನಂದ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ಪ್ರವೀಣ ನಾಯಕ ಉದ್ಘಾಟಿಸಿದರು. ಸಾಹಿತಿ ಚಿ.ಸಿ.ನಿಂಗಣ್ಣ ಹಾಜರಿದ್ದರು   

ಕಲಬುರಗಿ: ದೇಶದ ಪ್ರತಿ ಪ್ರಜೆಯ ಮತ ಅಮೂಲ್ಯವಾದದ್ದು. ಮತಕ್ಕೆ ದೇಶದ ಭವಿಷ್ಯ ರೂಪಿಸುವ ಶಕ್ತಿಯಿದೆ. ಚುನಾವಣೆಯಲ್ಲಿ ವಿವೇಚನಾಯುತವಾಗಿ ಮತ ಚಲಾಯಿಸಬೇಕು ಎಂದು ವಿವೇಕಾನಂದ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ಪ್ರವೀಣ ನಾಯಕ ಹೇಳಿದರು.

ಇಲ್ಲಿನ ಇಂದಿರಾ ನಗರದಲ್ಲಿರುವ ಸೇಂಟ್ ಜೋಸೆಫ್ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ‘ನನ್ನ ಮತ ಮಾರಾಟಕ್ಕಿಲ್ಲ–ಮತದಾರರ ಜಾಗೃತಿ ಆಂದೋಲನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

‘ದೇಶದ ಭವಿಷ್ಯದಲ್ಲಿ ನಮ್ಮೆಲ್ಲರ ಭವಿಷ್ಯವಿದೆ ಎಂಬುದನ್ನು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿ, ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಬೇಕು. ಆಮಿಷಕ್ಕೆ ಬಲಿಯಾಗದೆ ಯೋಗ್ಯ ವ್ಯಕ್ತಿಗಳನ್ನು ಚುನಾಯಿಸಬೇಕು’ ಎಂದರು.

ADVERTISEMENT

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ನೈತಿಕ ಮೌಲ್ಯಗಳು ಕಡಿಮೆಯಾಗುತ್ತಿವೆ. ಯುವ ಜನಾಂಗಕ್ಕೆ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ತಿಳಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಸಾಹಿತಿ ಚಿ.ಸಿ. ನಿಂಗಣ್ಣ ಮಾತನಾಡಿ, ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆ ಸುಧಾರಿಸಲು ದೇಶದ ಪ್ರಜ್ಞಾವಂತರು ತೊಡಗಿಸಿಕೊಳ್ಳಬೇಕಾಗಿದೆ. ದೇಶದ ರಾಜಕಾರಣದಲ್ಲಿ ಕ್ರಿಮಿನಲ್‌ ಹಿನ್ನೆಲೆಯುಳ್ಳವರು ಹೆಚ್ಚುತ್ತಿದ್ದು, ಮುಂದುವರಿದರೆ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ. ಕ್ರಿಮಿನಲ್‌ ಹಿನ್ನೆಲೆ ಇರುವವರನ್ನು ಚುನಾವಣೆಯಿಂದ ಹೊರಗಿಡಲು ಚುನಾವಣೆ ಆಯೋಗ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಯುವ ಜನರು ದುಶ್ಚಟಗಳ ದಾಸರಾಗದೆ, ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಬೇಕು. ವಿದ್ಯಾರ್ಥಿಗಳು, ಪತ್ರಿಕೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನ, ಸಾಮಾಜಿಕ ಪ್ರಜ್ಞೆ ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ತಿಳಿಯುತ್ತದೆ ಎಂದು ಹೇಳಿದರು.

ಉಪನ್ಯಾಸಕರಾದ ಅಶ್ವಿನಿ ಕುಲಕರ್ಣಿ ಹಾಗೂ ಪಲ್ಲವಿ ಜಿ. ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಸ್ಥಾಪಕ ರಮೇಶ ಆರ್. ದುತ್ತರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕಿ ವಿದ್ಯಾವತಿ ಕುಲಕರ್ಣಿ ಸ್ವಾಗತಿಸಿದರು. ಉಪನ್ಯಾಸಕ ಶಿವಶರಣಪ್ಪ ಪೂಜಾರಿ ನಿರೂಪಿಸಿದರು. ಉಪನ್ಯಾಸಕಿ ನಾಗಮ್ಮ ಹೊಸಮನಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.