ADVERTISEMENT

ಯಡ್ರಾಮಿ | ಗೋಡೆ ಕುಸಿತ: ಬಾಲಕಿ ಸಾವು, ನಾಲ್ವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 4:47 IST
Last Updated 23 ಸೆಪ್ಟೆಂಬರ್ 2025, 4:47 IST
ಯಡ್ರಾಮಿ ಪಟ್ಟಣದಲ್ಲಿ ತಡರಾತ್ರಿ ಗೋಡೆ ಕುಸಿದು ಬಾಲಕಿ ಮೃತಪಟ್ಟಿದ್ದರೂ ಅಧಿಕಾರಿಗಳು ಹಾಗೂ ಶಾಸಕರು ಬಾರದೇ ಇರುವುದರಿಂದ ಡಾ.ಅಂಬೇಡ್ಕರ್ ವೃತ್ತದಲ್ಲಿ ವಿವಿಧ ಸಂಘಟನೆಯವರು ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಯಡ್ರಾಮಿ ಪಟ್ಟಣದಲ್ಲಿ ತಡರಾತ್ರಿ ಗೋಡೆ ಕುಸಿದು ಬಾಲಕಿ ಮೃತಪಟ್ಟಿದ್ದರೂ ಅಧಿಕಾರಿಗಳು ಹಾಗೂ ಶಾಸಕರು ಬಾರದೇ ಇರುವುದರಿಂದ ಡಾ.ಅಂಬೇಡ್ಕರ್ ವೃತ್ತದಲ್ಲಿ ವಿವಿಧ ಸಂಘಟನೆಯವರು ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.   

ಯಡ್ರಾಮಿ: ಪಟ್ಟಣದಲ್ಲಿ ಭಾನುವಾರ ರಾತ್ರಿ ಮಳೆಗೆ ಮನೆ ಗೋಡೆ ಕುಸಿದು ಬಾಲಕಿ ಮೃತಪಟ್ಟಿದ್ದು, ನಾಲ್ವರು ಮಕ್ಕಳು ಗಂಭಿರವಾಗಿ ಗಾಯಗೊಂಡಿದ್ದಾರೆ.

ಸಾನಿಯಾ ಸೈಪ್ಪನ್ ಸಾಬ್ ಯಲಗಾರ (17) ಮೃತ ಬಾಲಕಿ. ಬಾಲಕಿಯ ಶವವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡ ಮಕ್ಕಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆಯಲ್ಲಿ ಐದು ಮಕ್ಕಳು ಮಲಗಿರುವಾಗ ರಾತ್ರಿ ವೇಳೆ ಗೋಡೆ ಕುಸಿದು ಬಿದ್ದಿದೆ. ಒಳಗಡೆ ಸಿಕ್ಕಿಕೊಂಡಾಗ ಪಕ್ಕದ ಮನೆಯವರು ಬಂದು ಕಟ್ಟಡದ ಸಾಮಗ್ರಿಗಳನ್ನು ತೆರವುಗೊಳಿಸಿದ್ದಾರೆ.

ADVERTISEMENT

ಮೃತ ಬಾಲಕಿಯ ತಂದೆ–ತಾಯಿ ಮೈಕ್ರೊ ಫೈನಾನ್ಸ್‌ನಲ್ಲಿ ಸಾಲ ಮಾಡಿದ್ದು, ಫೈನಾನ್ಸ್‌ ಕಂಪನಿಯನವರು ಕಿರುಕುಳ ನೀಡುತ್ತಾರೆ ಎಂದು ಊರು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾನಿಯಾ ಸೈಪ್ಪನ್ ಸಾಬ ಯಲಗಾರ

ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ಯಡ್ರಾಮಿ: ಗೋಡೆ ಕುಸಿತದಿಂದ ಮೃತಪಟ್ಟ ಬಾಲಕಿಯ ಶವ ಆಸ್ಪತ್ರೆಯಲ್ಲಿದ್ದರೂ ಶಾಸಕರು ಅಥವಾ ಯಾವುದೇ ಅಧಿಕಾರಿಗಳು ಭೇಟಿ ನೀಡದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ನಂತರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ‘ಮೃತ್ತಪಟ್ಟ ಬಾಲಕಿಯ ಕುಟುಂಬ ಮೈಕ್ರೊ ಫೈನಾನ್ಸ್ ಕಾಟಕ್ಕೆ ಊರು ಬಿಟ್ಟಿದೆ. ಪಾಲಕರು ಊರು ಬಿಡದೆ ಹೋಗಿದ್ದರೆ ಬಾಲಕಿ ಬದುಕುಳಿಯುತ್ತಿದ್ದಳು. ಜಿಲ್ಲಾಧಿಕಾರಿ ಮತ್ತು ಶಾಸಕ ಡಾ.ಅಜಯ್‌ ಸಿಂಗ್ ಮೃತ ಬಾಲಕಿ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಒದಗಿಸಬೇಕು. ಪಟ್ಟಣ ಪಂಚಾಯಿತಿಯಿಂದ ಒಂದು ನಿವೇಶನ ನೀಡಬೇಕು. ಮೈಕ್ರೊ ಫೈನಾನ್ಸ್ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.