ಕಲಬುರಗಿ: ಇಲ್ಲಿಯ ಜಿಲ್ಲಾ ಆಸ್ಪತ್ರೆ ಎದುರಿನ ಬಾಪುನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ಮಕ್ಕಳಿಗೆ ಕಂಟಕವಾಗಿದ್ದ ಪಾಳುಬಿದ್ದ ಕೋಣೆಗಳ ಪ್ರವೇಶ ದ್ವಾರವನ್ನು ಶನಿವಾರ ಗೋಡೆ ನಿರ್ಮಿಸಿ ಬಂದ್ ಮಾಡಲಾಗಿದೆ.
ಶಾಲೆ ಕಟ್ಟಡ ಶಿಥಿಲ ಕಾರಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಮತ್ತು ಕೆಲ ಕೋಣೆಗಳ ಚಾವಣಿ ಪದರ ಕುಸಿದು ರಾಡ್‌ಗಳು ಜೋತು ಬಿದ್ದ ಕುರಿತು ‘ಪ್ರಜಾವಾಣಿ’ಯು ಶುಕ್ರವಾರದ ಸಂಚಿಕೆಯಲ್ಲಿ ‘ಶಾಲೆ ಕಟ್ಟಡ ಶಿಥಿಲ: ಗಲ್ಲಿಗಳಲ್ಲಿ ಮಕ್ಕಳು’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಒಟ್ಟು 11 ಕೊಠಡಿಗಳಲ್ಲಿ 6 ಶಿಥಿಲವಾಗಿದ್ದು, ಮಕ್ಕಳು ಅಪ್ಪಿತಪ್ಪಿ ಪಾಳುಬಿದ್ದ ಕೊಠಡಿಗಳಲ್ಲಿ ಕಾಲಿಟ್ಟರೆ ಅಪಾಯ ತಪ್ಪಿದ್ದಲ್ಲ ಎಂದು ವರದಿ ಮೂಲಕ ಗಮನ ಸೆಳೆಯಲಾಗಿತ್ತು.
ವರದಿಗೆ ಸ್ಪಂದಿಸಿದ ಶಾಲಾ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಚವ್ಹಾಣಶೆಟ್ಟಿ ಅವರು ಶುಕ್ರವಾರವೇ ಶಾಲೆಗೆ ಭೇಟಿ ನೀಡಿ ಕೊಠಡಿಗಳ ವಸ್ತುಸ್ಥಿತಿಯನ್ನು ವೀಕ್ಷಿಸಿದ್ದರು. ಜೊತೆಗೆ ಪಾಳು ಬಿದ್ದ ಕೋಣೆಗಳಿಗೆ ಮಕ್ಕಳು ಹೋಗದಂತೆ ಅವುಗಳ ಬಾಗಿಲುಗಳನ್ನು ಗೋಡೆ ನಿರ್ಮಿಸಿ ಬಂದ್ ಮಾಡಬೇಕು ಎಂದು ಮುಖ್ಯಶಿಕ್ಷಕರಿಗೆ ಸೂಚಿಸಿದ್ದರು. ಅದರಂತೆ ಇಟ್ಟಂಗಿ ಗೋಡೆ ಕಟ್ಟಿ ಬಂದ್ ಮಾಡಲಾಗಿದೆ. ಇನ್ನು ತ್ಯಾಜ್ಯ ವಸ್ತುಗಳಿಂದ ತಿಪ್ಪೆಗುಂಡಿಯಾಗಿದ್ದ ಎದುರಿನ ಕೋಣೆಗಳನ್ನು ಸಹ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡಲಾಗಿದೆ.
‘ಪ್ರಜಾವಾಣಿ ಪತ್ರಿಕೆಯಲ್ಲಿ ಬಂದ ವರದಿ ಗಮನಿಸಿ ಸಂಬಂಧಪಟ್ಟ ಬಿಇಒ ಮತ್ತು ಮರಾಠಿ ಶಾಲೆ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಅಲ್ಲದೇ, ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಅವರಿಗೆ ಮಾರ್ಗದರ್ಶನ ಮಾಡಲಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತರ ಪ್ರತಿಕ್ರಿಯಿಸಿದರು.
55 ವರ್ಷಗಳಷ್ಟು ಹಳೆಯದಾದ ಈ ಶಾಲೆಯ 4 ಕೊಠಡಿಗಳಲ್ಲಷ್ಟೇ 1ರಿಂದ 7ನೇ ತರಗತಿವರೆಗಿನ ಮಕ್ಕಳಿಗೆ ಪಾಠ ನಡೆಯುತ್ತಿರುವುದರಿಂದ ಇಡೀ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.