ADVERTISEMENT

‘ವಕ್ಫ್‌ ತಿದ್ದುಪಡಿ ಕಾಯ್ದೆ ಸಂವಿಧಾನಕ್ಕೆ ವಿರುದ್ಧ’

ಮಹಿಳಾ ಏಕತಾ ಮಂಚ್‌ನಿಂದ ಧರಣಿ: ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 9 ಮೇ 2025, 15:02 IST
Last Updated 9 ಮೇ 2025, 15:02 IST
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಮಹಿಳಾ ಏಕತಾ ಮಂಚ್ ಸಂಘಟನೆಯವರು ಧರಣಿ ನಡೆಸಿದರು
ಪ್ರಜಾವಾಣಿ ಚಿತ್ರ
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಮಹಿಳಾ ಏಕತಾ ಮಂಚ್ ಸಂಘಟನೆಯವರು ಧರಣಿ ನಡೆಸಿದರು ಪ್ರಜಾವಾಣಿ ಚಿತ್ರ   

ಕಲಬುರಗಿ: ಕೇಂದ್ರ ಸರ್ಕಾರದ ವಕ್ಫ್‌ ತಿದ್ದುಪಡಿ ಕಾಯ್ದೆ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಅದನ್ನು ರದ್ದು ಮಾಡಬೇಕೆಂದು ಒತ್ತಾಯಿಸಿ ಮಹಿಳಾ ಏಕತಾ ಮಂಚ್‌ ಕಲಬುರಗಿ ವತಿಯಿಂದ ನಗರದಲ್ಲಿ ಶುಕ್ರವಾರ ಧರಣಿ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಧರಣಿ ನಡೆಸಿದ ಸಂಘಟನೆಯವರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

‘ಈ ಕಾಯ್ದೆ ಜಾರಿಯಿಂದ ವಕ್ಫ್‌ ಆಸ್ತಿಗಳು ಮುಸ್ಲಿಮರ ಕೈಯಿಂದ ತಪ್ಪಿ ಹೋಗುತ್ತವೆ. ವಕ್ಫ್‌ ಆಸ್ತಿಯನ್ನು ಮುಸ್ಲಿಮರು ಅನಾಥಾಶ್ರಮಗಳು, ಬಡವರಿಗೆ ಮನೆ ಕಟ್ಟಲು ಮತ್ತಿತರ ಕಾರಣಗಳಿಗಾಗಿ ದಾನದ ರೂಪದಲ್ಲಿ ನೀಡುತ್ತಿದ್ದಾರೆ. ರೋಗಿಗಳು, ಅಂಗವಿಕಲರು, ಪ್ರಾಣಿ ಪಕ್ಷಿಗಳ ರಕ್ಷಣೆಗೂ ವಕ್ಫ್ ಆಸ್ತಿ ನೀಡಿದ್ದಾರೆ. ಮುಸ್ಲಿಮರು ಉಜ್ವಲ ಇತಿಹಾಸ ಹೊಂದಿದ್ದು, ಮಸೀದಿಗಳು, ಈದ್ಗಾ, ಖಬರಸ್ತಾನ, ಆಶೂರ್‌ಖಾನಾ ಮತ್ತು ದರ್ಗಾಗಳ ಮೇಲೆ ವಕ್ಫ್ ಆಸ್ತಿ ಮಾಡಲಾಗಿದೆ’ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ವಕ್ಫ್‌ ತಿದ್ದುಪಡಿ ಕಾನೂನಿನ ಮೂಲಕ ಕೇಂದ್ರ ಸರ್ಕಾರವು ದತ್ತಿ ಭೂಮಿಗಳ ವಿಷಯದಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡಿದೆ. ಈ ಕಾಯ್ದೆಯಿಂದ ವಕ್ಫ್ ಆಸ್ತಿ ರಕ್ಷಣೆ ಮಾಡುವುದು ಕಷ್ಟವಾಗುತ್ತದೆ. ಆದ್ದರಿಂದ ಈ ಕರಾಳ ಕಾನೂನನ್ನು ರದ್ದು ಮಾಡಬೇಕು’ ಎಂದು ಒತ್ತಾಯಿಸಲಾಗಿದೆ.

ಧರಣಿಯಲ್ಲಿ ಸಂಘಟನೆಯ ಅಧ್ಯಕ್ಷೆ ಶೇಖ್ ಸಮರಿನ್‌, ಗೌರವಾಧ್ಯಕ್ಷೆ ಸಾಯಿರಾಬಾನು, ಕಾರ್ಯಾಧ್ಯಕ್ಷೆ ಸಯ್ಯದ್‌ ತಹೇನಿಯತ್ ಫಾತಿಮಾ, ಅಖ್ತರ್ ಪರವೀನ್‌, ಶಾಹಿನಾ ಬೇಗಂ, ಸೈಯದಾ ಖೈರುನ್ನೀಸಾ, ಸುಗರಾ ಬೇಗಂ, ನಯಾ ಸವೇರಾ ಸಂಘಟನೆಯ ಅಧ್ಯಕ್ಷ ಮೋದಿನ್ ಪಟೇಲ್‌ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.