ADVERTISEMENT

ನಾಗರಾಳ ಜಲಾಶಯದಿಂದ ನದಿಗೆ ನೀರು

ಹೆಚ್ಚಾದ ಒಳಹರಿವಿನ ಪ್ರಮಾಣ, ಭರ್ತಿಯತ್ತ ಬಂದ ಜಲಾಶಯ, ಗ್ರಾಮಸ್ಥರಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 3:33 IST
Last Updated 19 ಜೂನ್ 2021, 3:33 IST
ಚಿಂಚೋಳಿ ತಾಲ್ಲೂಕು ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ ಹೆಚ್ಚುವರಿ ನೀರನ್ನು ಶುಕ್ರವಾರ ನದಿಗೆ ಹರಿಸಲಾಯಿತು
ಚಿಂಚೋಳಿ ತಾಲ್ಲೂಕು ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ ಹೆಚ್ಚುವರಿ ನೀರನ್ನು ಶುಕ್ರವಾರ ನದಿಗೆ ಹರಿಸಲಾಯಿತು   

ಚಿಂಚೋಳಿ: ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಶುಕ್ರವಾರದವರೆಗೆ ಹೆಚ್ಚುವರಿಯಾಗಿ ಹರಿದುಬಂದ ನೀರನ್ನು ಗೇಟ್‌ ಮೂಲಕ ನದಿಗೆ ಬಿಡಲಾಗುತ್ತಿದೆ ಎಂದು ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಣಮಂತ ಪೂಜಾರಿ ತಿಳಿಸಿದ್ದಾರೆ.

ಜಲಾಶಯದ ನೀರು ಸಂಗ್ರಹಣೆಯ ಗರಿಷ್ಠ ಮಟ್ಟ 491 ಮೀಟರ್. ಸದ್ಯ 489.5 ಮೀಟರ್ ನೀರಿನ ಮಟ್ಟವಿದೆ. ಪ್ರಸ್ತುತ ಜಲಾಶಯದ ಮೇಲ್ಬಾಗದಲ್ಲಿ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ 300 ಕ್ಯುಸೆಕ್ ಒಳಹರಿವಿದೆ. ಒಳಹರಿವು ಗಮನಿಸಿ ಅಷ್ಟೇ ಪ್ರಮಾಣ ನೀರನ್ನು ನದಿಗೆ ಬಿಡಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನದಿ ಪಾತ್ರದ ಗ್ರಾಮಗಳ ಜನರು ಎಚ್ಚರಿಕೆಯಿಂದಿರಬೇಕು. ಜನ– ಜಾನುವಾರು ನದಿ ಹತ್ತಿರ ಹೋಗುವಂತಿಲ್ಲ. ಮಹಿಳೆಯರು ಬಟ್ಟೆ ತೊಳೆಯಲು ನದಿಗೆ ಹೋಗಬಾರದು ಎಂದೂ ತಿಳಿಸಿದ್ದಾರೆ.

ADVERTISEMENT

ಪ್ರಸಕ್ತ ವರ್ಷ ಎರಡನೇ ಬಾರಿಗೆ ನದಿಗೆ ನೀರು ಬಿಡಲಾಗುತ್ತಿದೆ. ನಾಗರಾಳ ಜಲಾಶಯದ ನಾಲೆಗಳ ಆಧುನಿಕರಣ ಕಾಮಗಾರಿ ನಡೆಯುತ್ತಿರುವುದರಿಂದ ಎರಡು ವರ್ಷದಿಂದ ರೈತರ ಜಮೀನಿಗೆ ನೀರು ಹರಿಸಿಲ್ಲ.

ಸದ್ಯ 80 ಕಿ.ಮೀ ಉದ್ದದ ಮುಖ್ಯನಾಲೆ ಆಧುನೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, ವಿತರಣ ನಾಲೆಗಳ ಜಾಲದ ಆಧುನಿಕರ ಕಾಮಗಾರಿ ನಡೆಯುತ್ತಿದೆ ಇದರಿಂದ ಮುಂಬರುವ ವರ್ಷವೂ ರೈತರ ಜಮೀನಿಗೆ ನೀರು ಹರಿಯುವುದು ಅನುಮಾನ ಎನ್ನುತ್ತಾರೆ ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.