ADVERTISEMENT

ಜೇವರ್ಗಿ | ಮಿನಿವಿಧಾನಸೌಧದಲ್ಲೇ ನೀರಿಲ್ಲ: ಸಾರ್ವಜನಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 17 ಮೇ 2025, 6:48 IST
Last Updated 17 ಮೇ 2025, 6:48 IST
<div class="paragraphs"><p>ಬಳಕೆ ಇಲ್ಲದೆ ಶೌಚಾಲಯಕ್ಕೆ ಬೀಗ ಹಾಕಿರುವುದು</p></div>

ಬಳಕೆ ಇಲ್ಲದೆ ಶೌಚಾಲಯಕ್ಕೆ ಬೀಗ ಹಾಕಿರುವುದು

   

ಜೇವರ್ಗಿ: ಕೆಂಡದಂತಹ ಬಿಸಿಲು ಜನರನ್ನು ಬೆಚ್ಚಿ ಬೀಳಿಸಿದೆ. ಇಂತಹ ಬಿಸಿಲಲ್ಲಿ ಪಟ್ಟಣದ ಕಚೇರಿ ಕೆಲಸಗಳಿಗೆ ಬರುವ ಜನರು ಕುಡಿಯುವ ನೀರಿಗಾಗಿ ಪರದಾಡಬೇಕಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರಿ ಕಚೇರಿಗಳಲ್ಲೇ ಕುಡಿಯಲು ನೀರಿಲ್ಲ.

ಪಟ್ಟಣದಲ್ಲಿ ಕೋಟ್ಯಂತರ ಅನುದಾನದಲ್ಲಿ ಭವ್ಯವಾದ ಮೂರು ಮಹಡಿಯ ಮಿನಿವಿಧಾನಸೌಧ ನಿರ್ಮಿಸಲಾಗಿದೆ. ತಹಶೀಲ್ದಾರ್ ಕಚೇರಿ, ನಾಡಕಚೇರಿ, ಪತ್ರಾಂಕಿತ ಉಪಖಜಾನಾಧಿಕಾರಿ, ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ, ಅಭಿಲೇಖಾಲಯ, ಸಬ್ ರಿಜಿಸ್ಟ್ರಾರ್, ಆಹಾರ ಇಲಾಖೆ, ಸಮಾಜ ಕಲ್ಯಾಣ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾ.ಪಂ ಕಚೇರಿ, ಶಾಸಕರ ಕಚೇರಿ ಹಾಗೂ ಇಡೀ ತಾಲ್ಲೂಕಿಗೆ ನೀರಿನ ಸೌಲಭ್ಯ ಒದಗಿಸುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಚೇರಿಗಳು ಈ ಕಟ್ಟಡದಲ್ಲಿವೆ. ಈ ಎಲ್ಲ ಕಚೇರಿಗಳ ಕೆಲಸಕ್ಕೆ ಬಂದವರು ತಹಶೀಲ್ದಾರ್‌ ಕಚೇರಿ ಹಿಂಬದಿಯ ನಂದಿನಿ ಮಿಲ್ಕ್ ಪಾರ್ಲರ್ ಅಥವಾ ಕಚೇರಿ ಎದುರಿನ ಹೋಟೆಲ್‌ಗಳಲ್ಲಿ ಬಾಟಲಿ ನೀರು ಖರೀದಿಸಬೇಕಾಗಿದೆ. ಗರಿಷ್ಠ ಉಷ್ಣಾಂಶ 42-43 ಡಿಗ್ರಿ ಸೆಲ್ಸಿಯಸ್‌ವರೆಗೂ ಇರುತ್ತದೆ. ತಾಲ್ಲೂಕು ಆಡಳಿತ ಸಾರ್ವಜನಿಕರಿಗೆ ಕನಿಷ್ಠ ಒಂದು ಚಿಕ್ಕ ನೀರಿನ ಮಡಿಕೆಯನ್ನು ಸಹ ಇಟ್ಟಿಲ್ಲ. ಹಣವಿದ್ದವರು‌ ನೀರಿನ ಬಾಟಲಿ ಖರೀದಿಸಿ, ಬಾಯಾರಿಕೆ ನೀಗಿಸಿಕೊಳ್ಳುತ್ತಾರೆ. ತಹಶೀಲ್ದಾರ್ ಕಚೇರಿ ಸಿಬ್ಬಂದಿ ಸಹ ಮನೆಗಳಿಂದ ಬಾಟಲಿಗಳಲ್ಲಿ ನೀರು ತರುತ್ತಿದ್ದಾರೆ. ಕೆಲ ಇಲಾಖೆಯ ಸಿಬ್ಬಂದಿ ಹಣ ಕೊಟ್ಟು 20 ಲೀಟರ್ ಕ್ಯಾನ್ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ADVERTISEMENT

ತಹಶೀಲ್ದಾರ್ ಕಚೇರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಒಂದು ಲೋಟ ನೀರಿನ ವ್ಯವಸ್ಥೆ ಮಾಡಲಾಗದ ಅಧಿಕಾರಿಗಳಿಂದ ತಾಲ್ಲೂಕಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಹೇಗೆ ಸಾಧ್ಯವಾದೀತು? ಎಂದು ಸಾರ್ವಜನಿಕರು ವ್ಯಂಗ್ಯ ಮಾಡುತ್ತಿದ್ದಾರೆ.

ಹಳ್ಳಿಗಳಿಂದ ತಹಶೀಲ್ದಾರ್‌ ಕಚೇರಿಗೆ ಬಂದ ಮೇಲೆ ನೀರಿಗಾಗಿ ಅಲೆದಾಡುವುದು ಸಾಮಾನ್ಯವಾಗಿದೆ. ಕಚೇರಿಯಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದಕ್ಕೆ ಸಾರ್ವಜನಿಕರು ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.

ಉದ್ಯಾನ ನೀರಿನ ಘಟಕ ಶೌಚಾಲಯ.. ಹೀಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮೀಸಲಿಡಲಾಗಿದೆ. ಇತ್ತೀಚಿಗೆ ಹೊಸ ಕೊಳವೆಬಾವಿ ಕೊರೆಸಿದ್ದು ಶೀಘ್ರ ನೀರಿನ ಸಮಸ್ಯೆ ಬಗೆಹರಿಸಲಾಗುವುದು
ಮಲ್ಲಣ್ಣ ಯಲಗೋಡ ತಹಶೀಲ್ದಾರ್
ಕಚೇರಿ ಕೆಲಸಕ್ಕೆ ಬಂದಾಗ ಗಂಟೆ ಗಟ್ಟಲೆ ಕಾಯಬೇಕು. ಕುಳಿತುಕೊಳ್ಳಲು ಆಸನಗಳ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದೆ
ಸಿದ್ರಾಮ ಕಟ್ಟಿ ಕೋಳಕೂರ ಗ್ರಾಮಸ್ಥ
‘ಮಹಿಳಾ ಸಿಬ್ಬಂದಿಗಿಲ್ಲ ಶೌಚಾಲಯ ವ್ಯವಸ್ಥೆ’
ಮಿನಿವಿಧಾನ ಸೌಧದಲ್ಲಿ ಕನಿಷ್ಠ 30ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಯು ಈ ಕಟ್ಟಡದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಮಿನಿವಿಧಾನ ಸೌಧದ ಹಿಂಬದಿಯಲ್ಲಿ ಶೌಚಾಲಯ ನಿರ್ಮಿಸಲಾಗಿದ್ದು ನೀರಿನ ಸೌಲಭ್ಯವಿಲ್ಲದ್ದಕ್ಕೆ ಬೀಗ ಹಾಕಲಾಗಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ವು ವಾತಾವರಣ‌ ಗಲೀಜಾಗಿದೆ. ಕೂಡಲೇ ಸಂಬಂಧಿಸಿದವರು ಶುದ್ಧ ಕುಡಿಯುವ ನೀರಿನ ಆಸನಗಳ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.