ADVERTISEMENT

ರೇವೂರ್ (ಬಿ): ನೀರಿನ ಘಟಕ ಸ್ಥಗಿತ

ಶಿವಾನಂದ ಹಸರಗುಂಡಗಿ
Published 8 ನವೆಂಬರ್ 2019, 10:33 IST
Last Updated 8 ನವೆಂಬರ್ 2019, 10:33 IST
ಅಫಜಲಪುರ ತಾಲ್ಲೂಕಿನ ರೇವೂರ್ (ಬಿ) ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದೆ
ಅಫಜಲಪುರ ತಾಲ್ಲೂಕಿನ ರೇವೂರ್ (ಬಿ) ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದೆ   

ಅಫಜಲಪುರ: ತಾಲ್ಲೂಕಿನ ರೇವೂರ್ (ಬಿ) ಗ್ರಾಮದಲ್ಲಿ ಸುಮಾರು ₹10 ಲಕ್ಷ ವೆಚ್ಚದಲ್ಲಿ ಸ್ಥಾಪಿಸಿರುವ ಶುದ್ಧ ಕುಡಿವ ನೀರಿನ ಘಟಕವು 3 ವರ್ಷದಿಂದ ನಿರ್ವಹಣೆ ಇಲ್ಲದೆ ಕೆಟ್ಟು ಹೋಗಿ ಜನರು ಶುದ್ಧ ಕುಡಿಯುವ ನೀರು ದೊರೆಯದೆ ಪರದಾಡುವಂತಾಗಿದೆ.

ಗ್ರಾಮದಲ್ಲಿ ಸುಮಾರು 10 ಸಾವಿರ ಜನಸಂಖ್ಯೆ ಇದೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಶುದ್ಧ ಕುಡಿಯುವ ನೀರಿನ ಘಟಕವನ್ನು ಆರಂಭಿಸುವಂತೆ ಗ್ರಾಮ ಸಭೆ, ಜನಸ್ಪಂದನ ಸಭೆಗಳಲ್ಲಿ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥ ಶಿವಾನಂದ ಕುಂಬಾರ ತಿಳಿಸಿದರು.

ಜನರು ದಿನಾಲೂ ಕಲುಷಿತ ನೀರನ್ನೇ ಕುಡಿಯುವಂತಾಗಿದೆ. ಇದರಿಂದ ಕಾಯಿಲೆಗಳು ಬರುವ ಸಂಭವಿದೆ. ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಸದಸ್ಯರು ತಮ್ಮ ಸಾಮಾನ್ಯ ಸಭೆಗಳಲ್ಲಿ ಸಮಸ್ಯೆಯನ್ನು ಪ್ರಸ್ತಾಪಿಸಬೇಕು. ಸಂಬಂಧಪಟ್ಟ ಇಲಾಖೆಯವರು ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಬೇಕು. ನಿರ್ವಹಣೆಗೆ ವ್ಯವಸ್ಥೆ ಆಗಬೇಕು ಎಂದು ಗ್ರಾಮಸ್ಥರಾದ ಮಹಾಂತ ಉಡಗಿ ಹೇಳಿದರು.

ADVERTISEMENT

ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಲಿಯಾಕತ್‌ ಅಲಿ ಅವರನ್ನು ವಿಚಾರಿಸಿದಾಗ ‘ಗ್ರಾಮ ಪಂಚಾಯಿತಿಗಳು ಶುದ್ಧ ನೀರಿನ ಘಟಕಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇನ್ನು ಕೆಲವು ಕಡೆ ಯಂತ್ರಗಳು ಕೆಟ್ಟು ನಿಂತಿದ್ದು ದುರಸ್ತಿ ಮಾಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.