ಕಲಬುರಗಿ: ‘ಮಣ್ಣು ನಂಬಿದರೆ ಹೊನ್ನು’ ಎಂಬಂತೆ ಜಮೀನಿನಲ್ಲಿ ಕಷ್ಟಪಟ್ಟು ದುಡಿದರೆ ಕಷ್ಟ ಹತ್ತಿರ ಸುಳಿಯುವುದಿಲ್ಲ ಎಂಬುದಕ್ಕೆ ಪ್ರಗತಿ ಪರ ರೈತ ಮುಹಮ್ಮದ್ ಶಕೀಲ್ ಸಾಕ್ಷಿಯಾಗಿದ್ದಾರೆ.
ತಾಲ್ಲೂಕಿನ ಫರಹತಾಬಾದ್ ಗ್ರಾಮದಲ್ಲಿ ಸುಮಾರು 15 ಎಕರೆ ಜಮೀನು ಹೊಂದಿರುವ ರೈತ ಮುಹಮ್ಮದ್ ಶಕೀಲ್ ಅವರು ಸಮಗ್ರ ಕೃಷಿ ಬೇಸಾಯ ಅಳವಡಿಸಿಕೊಂಡಿದ್ದಾರೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಮಲ್ಚಿಂಗ್ ವಿಧಾನದ ಮೂಲಕ ಕಲ್ಲಂಗಡಿ ಬೆಳೆದು ಉತ್ತಮ ಆದಾಯ ಪಡೆದುಕೊಂಡಿದ್ದಾರೆ.
ಕಲ್ಲಂಗಡಿ ನಾಟಿ ಮಾಡಲು ಎರಡು ಎಕರೆ ಹೊಲಕ್ಕೆ ಸಂಪೂರ್ಣ ಪ್ಲಾಸ್ಟಿಕ್ ಹೊದಿಕೆ (ಮಲ್ಚಿಂಗ್) ಮಾಡಲಾಗಿದೆ. ಸರ್ಕಾರದ ಸಹಾಯಧನ ಪಡೆದು ಸಂಪೂರ್ಣ ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಇದರಿಂದ ನೀರಿನ ಸದ್ಬಳಕೆ, ಕಳೆ ನಿಯಂತ್ರಣ ಸಾಧ್ಯವಾಗಿದೆ.
ಸಸಿಯಿಂದ ಸಸಿಗೆ ನಿಯಮಿತವಾಗಿ 1.5 ಅಡಿ ಅಂತರ ಕಾಯ್ದುಕೊಂಡು ಪ್ಲಾಸ್ಟಿಕ್ ಮೇಲೆ ರಂಧ್ರಗಳನ್ನು ಕೊರೆದು ಅದರಲ್ಲಿ ದಕ್ಷಿಣ ಕೊರಿಯಾ ಮೂಲದ ನಾಂಗ್ ವೂ ಸೀಡ್ ಇಂಡಿಯಾ ಪ್ರೈ.ಲಿಮಿಟೆಡ್ ಕಂಪನಿಯ ಕಲ್ಲಂಗಡಿಯ ಸಸಿಗಳನ್ನು ₹ 2ಕ್ಕೆ ಒಂದರಂತೆ ತಂದು ಜನವರಿ 2ರಂದು ನಾಟಿ ಮಾಡಲಾಗಿದೆ. ಸಸಿಗಳಿಗೆ ಬೇಕಾಗುವ ರಸಗೊಬ್ಬರವನ್ನು ಆ ರಂಧ್ರಗಳ ಮೂಲಕವೇ ನೀಡಲಾಗಿದೆ. ಸುಮಾರು 58 ದಿನಗಳಲ್ಲಿ ಫಸಲು ಕೈಗೆ ಬಂದಿದೆ.
‘ಕೆಲವು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಿತ್ತು. ಹೆಚ್ಚಿನ ಪ್ರಮಾಣದಲ್ಲಿ ಕಲ್ಲಂಗಡಿ ಮಾರುಕಟ್ಟೆಗೆ ಬಂದಿರುವುದಿಂದ ಬೆಲೆ ಸ್ವಲ್ಪ ಕಡಿಮೆಯಾಗಿದೆ. ಸದ್ಯ ಪ್ರತಿ ಕೆಜಿಗೆ ಗುಣಮಟ್ಟದ ಆಧಾರದ ಮೇಲೆ ಸುಮಾರು ₹ 12ರಿಂದ ₹ 15 ರವರೆಗೆ ಕಲ್ಲಂಗಡಿ ಮಾರಾಟವಾಗುತ್ತಿದೆ’ ಎನ್ನುತ್ತಾರೆ ರೈತ ಮುಹಮ್ಮದ್ ಶಕೀಲ್.
‘ಕಲ್ಲಂಗಡಿ ಸಸಿ, ಭೂಮಿ ಹದ ಮಾಡುವುದು, ಬಿತ್ತನೆ, ರಸಗೊಬ್ಬರ, ಔಷಧ ಸಿಂಪಡಣೆ ಸೇರಿದಂತೆ ಇಲ್ಲಿಯವರಗೆ ₹ 2 ಲಕ್ಷದಷ್ಟು ಖರ್ಚಾಗಿದೆ. ಎರಡು ಎಕರೆಯಲ್ಲಿ ಅಂದಾಜು 60 ರಿಂದ 65 ಟನ್ ಇಳುವರಿ ಬರುವ ನಿರೀಕ್ಷೆ ಇದೆ. ಅಂದಾಜು ₹ 6.50 ಲಕ್ಷದಿಂದ ₹ 7.50 ಲಕ್ಷ ಆದಾಯ ಬರಲಿದೆ. ವೆಚ್ಚ ಹೋಗಿ ₹ 5.50 ಲಕ್ಷ ಲಾಭ ಬರಲಿದೆ’ ಎಂದು ಮುಹಮ್ಮದ್ ಶಕೀಲ್.
ಸಮಗ್ರ ಕೃಷಿ: ಮುಹಮ್ಮದ್ ಶಕೀಲ್ ಅವರ ಕುಟುಂಬಕ್ಕೆ 15 ಎಕರೆ ಜಮೀನಿದೆ. ಸಹೋದರರು ಬೇರೆ ಕೆಲಸ ಮಾಡುತ್ತಿದ್ದು, ಇವರೇ ಕೃಷಿ ಮಾಡುತ್ತಿದ್ದಾರೆ. ಸದ್ಯ ಜಮೀನಿನಲ್ಲಿ 3.5 ಎಕರೆ ಬಾಳೆ, 5 ಎಕರೆ ಕಬ್ಬು, ಕಲ್ಲಂಗಡಿ, ತೊಗರಿ ಸೇರಿ ಸಮಗ್ರ ಕೃಷಿಯನ್ನು ಮಾಡಿದ್ದಾರೆ. ಕಬ್ಬು ಸಹ ಕಟಾವು ಮಾಡಿದ್ದು, 220 ಟನ್ ಇಳುವರಿ ಬಂದಿದೆ. ಬಾಳೆ ಬೆಳೆಯು ತಿಂಗಳಲ್ಲಿ ಕೈಗೆ ಬರಲಿದೆ. ಅದರಲ್ಲಿ ಉತ್ತಮ ಆದಾಯ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.